-ಕೋವಿಡ್ ನೆಗೆಟಿವ್ ಇದ್ರಷ್ಟೆ ಊರಿಗೆ ಪ್ರವೇಶ
ಚಾಮರಾಜನಗರ: ಗ್ರಾಮಕ್ಕೆ ಕದ್ದುಮುಚ್ಚಿ ಬಂದ್ರೆ 10 ಸಾವಿರ ದಂಡ ಹಾಕೋದಾಗಿ ಚಾಮರಾಜನಗರದ ಹೂಗ್ಯಂ ಮತ್ತು ಮಂಗಲ ಗ್ರಾಮದ ಮುಖಂಡರು ಎಚ್ಚರಿಸಿದ್ದಾರೆ.
ಬೆಂಗಳೂರಿನಿಂದ ಜಿಲ್ಲೆಗೆ ಬಂದವರಲ್ಲಿ ಹೆಚ್ಚಾಗಿ ಕೊರೊನಾ ಸೊಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲೆಯ ಹನೂರು ತಾಲೂಕಿನ ಹೂಗ್ಯಂ, ಚಾಮರಾಜನಗರದ ಮಂಗಲ ಗ್ರಾಮದ ಮುಖಂಡರು ಮುನ್ನೆಚ್ಚರಿಕೆ ಕ್ರಮವಹಿಸಿದ್ದಾರೆ. ಬೆಂಗಳೂರು ಹಾಗೂ ಮೈಸೂರಿನಿಂದ ಬರುವವರಿಗೆ ಪ್ರವೇಶ ಬಂದ್ ಮಾಡಿ ಕಟ್ಟಪ್ಪಣೆ ಹೊರಡಿಸಿದ್ದಾರೆ. ಜೀವನ ಕಟ್ಟಿಕೊಳ್ಳಲು ರಾಜಧಾನಿಗೆ ಹೋಗಿದ್ದ ಜಿಲ್ಲೆಯ ಜನರು ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕಿಲ್ಲರ್ ಕೊರೊನಾ ಆರ್ಭಟಕ್ಕೆ ಹೆದರಿ ಯಾರಿಗೂ ಗೊತ್ತಿಲ್ಲದೆ ತವರಿಗೆ ಬಂದು ಸೇರಿಕೊಳ್ಳುತ್ತಿದ್ದಾರೆ.
ರಾಜಧಾನಿಯಿಂದ ಬಂದವರಿಂದ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಾಗಿದೆ. ಹೀಗಾಗಿ ಹೂಗ್ಯಂ ಗ್ರಾಮಸ್ಥರು ತಮ್ಮ ಗ್ರಾಮದ ರಕ್ಷಣೆಗಾಗಿ ಬೆಂಗಳೂರಿಗರಿಗೆ ಪ್ರವೇಶ ಬಂದ್ ಮಾಡಿದ್ದಾರೆ. ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಹೂಗ್ಯಂ, ಮಂಗಲ ಗ್ರಾಮದೊಳಗೆ ಬಂದವರಿಗೆ 10 ಸಾವಿರ ದಂಡ ಬೀಳಲಿದೆ. ಕೋವಿಡ್ ಟೆಸ್ಟ್ ಪ್ರಮಾಣ ಪತ್ರವಿದ್ದವರಿಗೆ ಮಾತ್ರ ಜಿಲ್ಲೆಯೊಳಗೆ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಒಂದು ವೇಳೆ ಯಾರಿಗೂ ಗೊತ್ತಾಗದೆ ಗ್ರಾಮಗಳನ್ನು ಸೇರಿಕೊಂಡಿರುವ ಬೆಂಗಳೂರಿಗರನ್ನು ಹುಡುಕಿಕೊಟ್ಟವರಿಗೆ 2 ಸಾವಿರ ರೂ. ಬಹುಮಾನ ನೀಡುವುದಾಗಿ ಈ ಹಿಂದೆ ಕೊಳ್ಳೇಗಾಲ ತಾಲೂಕಿನ ಗ್ರಾಮದ ಮುಖಂಡರು ಡಂಗೂರ ಹೊಡೆಸಿ ಕಟ್ಟಪ್ಪಣೆ ಹೊರಡಿಸಿದ್ದರು.