ಚಿಕ್ಕಮಗಳೂರು: ಕ್ಷೇತ್ರದ ಜನ ನನ್ನನ್ನು ಆರು ಬಾರಿ ಗೆಲ್ಲಿಸಿದ್ದಾರೆ. ನಾನು ಯಾವತ್ತೂ, ಯಾರನ್ನೂ ಕಡೆಗಣಿಸಿಲ್ಲ ಎಂದು ಹೇಳುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಭೋಜೇಗೌಡರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು.
ತಮ್ಮ ಮೇಲಿನ ಆರೋಪಕ್ಕೆ ತಾಲೂಕಿನ ಸಖರಾಯಪಟ್ಟಣದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾನು ಯಾವುದೇ ಪಕ್ಷದ, ಯಾವುದೇ ಜನಪ್ರತಿನಿಧಿಯನ್ನು ಕಡೆಗಣಿಸಿಲ್ಲ. ಯಾವುದೇ ಸಭಾ ಕಾರ್ಯಕ್ರಮ ಮಾಡಿಲ್ಲ. ನನ್ನ ಇಲಾಖೆಗೆ ಸಂಬಂಧಿಸಿದ ಕಾಮಗಾರಿಗಳ ಬಗ್ಗೆ ಸ್ಥಳ ಪರಿಶೀಲನೆ ಮಾಡಿದ್ದೇನೆ. ನಾನು ಜಿಲ್ಲಾ ಉಸ್ತುವಾರಿ ಸಚಿವನಾದ ಮೇಲೆ ಯಾವುದೇ ಪ್ರತ್ಯೇಕ ಇಲಾಖೆಯವರನ್ನು ಕರೆದು ಸಭೆಯನ್ನೇ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
Advertisement
Advertisement
ಇತ್ತೀಚೆಗೆ ನ್ಯಾಷನಲ್ ಹೈವೇ, ಲೋಕೋಪಯೋಗಿ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಜೊತೆ ಸಭೆ ಮಾಡಿದ್ದೇನೆ. ಯಾವುದೇ ಜನಪ್ರತಿನಿಧಿಯನ್ನು ಕಡೆಗಣಿಸಿ ಸಭೆ ಮಾಡಿಲ್ಲ. ಈಗ ಕೋವಿಡ್ ಇರುವುದರಿಂದ ಪಂಚಾಯಿತಿಗೆ ಭೇಟಿ ಕೊಡುತ್ತಿದ್ದೇನೆ. ಯಾವ ಸಮಸ್ಯೆ ಇದೆ, ಯಾವ ರೀತಿ ಕೋವಿಡ್ ಎದುರಿಸುತ್ತಿದ್ದಾರೆ. ಏನಾದರೂ ಸಮಸ್ಯೆ ಇದೆಯಾ, ಪರಿಹಾರವೇನು ಎಂದು ಚರ್ಚಿಸುತ್ತಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವನಾಗಿ ಜಿಲ್ಲೆಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಹೀಗಾಗಿ ಓಡಾಡಿ ಕೆಲಸ ಮಾಡುತ್ತಿದ್ದೇನೆ, ಯಾವುದೇ ಕಾರ್ಯಕ್ರಮ ಮಾಡಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಅಂಗಾರ ವಿರುದ್ಧ ಭೋಜೇಗೌಡ ಕಿಡಿ – ಡಿಸಿ ಕಚೇರಿ ಬಳಿ ಏಕಾಂಗಿ ಪ್ರತಿಭಟನೆ
Advertisement
Advertisement
ಸಭಾ ಕಾರ್ಯಕ್ರಮ ನಡೆಸಿ, ಅವರನ್ನು ಕರೆಯದಿದ್ದರೆ ಅಥವಾ ಅಪಮಾನ ಮಾಡಿದ್ದರೆ ಆಗ ಮಾತನಾಡಬಹುದು. ಸಣ್ಣಪುಟ್ಟ ವಿಷಯಕ್ಕೆ ರಾಜಕೀಯ ಮಾಡಿದರೆ ಏನೂ ಹೇಳಲು ಆಗುವುದಿಲ್ಲ ಎಂದು ನಯವಾಗೇ ಉತ್ತರಿಸಿದ್ದಾರೆ. ಕ್ಷೇತ್ರದ ಜನ ಆರು ಬಾರಿ ಆಯ್ಕೆ ಮಾಡಿದ್ದಾರೆ. ಜೆಡಿಎಸ್, ಕಾಂಗ್ರೆಸ್ ಯಾರನ್ನೂ ಕಡೆಗಣಿಸಿಲ್ಲ. ಕಡೆಗಣಿಸಿ ಸಾಧನೆ ಮಾಡುವುದಾದರೂ ಏನು? ನನ್ನ ಇಲಾಖೆ, ನನ್ನ ಕಾರ್ಯ ವ್ಯಾಪ್ತಿಗೆ ಸಂಬಂಧಿಸಿದಂತೆ ಒಳ್ಳೆಯ ಕೆಲಸ ಮಾಡಬೇಕಿದೆ. ಭೋಜೇಗೌಡರು ರಾಜಕೀಯದಲ್ಲಿ ನನಗಿಂತ ಹಿರಿಯರು, ಅನುಭವಿಗಳು ಕೂಡ. ಸ್ಥಾನದ ಮಹತ್ವವನ್ನು ತಿಳಿದು ಕೆಲಸ ಮಾಡಿದರೆ ಯಾವ ಸಮಸ್ಯೆ ಬರುವುದಿಲ್ಲ ಎಂದರು.