ಉಡುಪಿ: ಈ ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸುತ್ತಿದ್ದಂತೆ ಉಡುಪಿಯಲ್ಲಿ ಕೃಷ್ಣ ಮಠದ ಸ್ವಾಮೀಜಿಗಳು ಜಪ ಧ್ಯಾನದಲ್ಲಿ ತೊಡಗಿಕೊಂಡರು. ಕೊರೊನಾ ಲಾಕ್ಡೌನ್ ಸಡಿಲಿಕೆ ಆದರೂ ಉಡುಪಿ ಕೃಷ್ಣ ಮಠ ಇನ್ನು ತೆರೆದಿಲ್ಲ. ಇಂದು ಕೂಡ ಶ್ರೀಕೃಷ್ಣ ಮಠ ಮುಚ್ಚಿತ್ತು.
ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಅದಮಾರು ಈಶಪ್ರಿಯ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಆರು ಮಂದಿ ಮಠಾಧೀಶರುಗಳು ಕೃಷ್ಣ ಮಠದ ಗರ್ಭಗುಡಿಯ ಹೊರಭಾಗದಲ್ಲಿ ಜಪ ತಪ ಧ್ಯಾನದಲ್ಲಿ ತಲ್ಲೀನರಾದರು. ಸೂರ್ಯ ಗ್ರಹಣ ಆರಂಭವಾಗುತ್ತಿದ್ದಂತೆ ಎಲ್ಲ ಸ್ವಾಮೀಜಿಗಳು ಕೃಷ್ಣಮಠಕ್ಕೆ ಆಗಮಿಸಿ ಧ್ಯಾನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.
Advertisement
Advertisement
ಪ್ರತಿದಿನ ಉಡುಪಿ ಕೃಷ್ಣಮಠದಲ್ಲಿ 11:30ರ ಸುಮಾರಿಗೆ ಮಹಾಪೂಜೆ ಶ್ರೀ ಕೃಷ್ಣನಿಗೆ ಸಲ್ಲುತ್ತದೆ. ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಪರ್ಯಾಯ ಅದಮಾರು ಸ್ವಾಮೀಜಿಯವರು ಶನಿವಾರ ಮಾಡಿದ ಶ್ರೀಕೃಷ್ಣನ ಅಲಂಕಾರವನ್ನು ತೆಗೆದು ಕೇವಲ ತುಳಸಿಯ ಹಾರವನ್ನು ಕೃಷ್ಣ ಪರಮಾತ್ಮನ ಬಿಂಬಕ್ಕೆ ಅರ್ಪಿಸಿದರು. ಸೂರ್ಯ ಗ್ರಹಣ ಮೋಕ್ಷವಾದ ಮೇಲೆ ಶ್ರೀಕೃಷ್ಣನಿಗೆ ಅಭಿಷೇಕ ಮಾಡಿ ಅಲಂಕಾರ ಮಾಡಿ ವಿಶೇಷ ಪೂಜೆಯನ್ನು ನೆರವೇರಿಸಲಿದ್ದಾರೆ. ಗ್ರಹಣ ಮುಗಿಯುವ ತನಕ ಮಠದ ಸ್ವಾಮೀಜಿಗಳು ಉಪವಾಸ ಇರುತ್ತಾರೆ.
Advertisement
Advertisement
ಪಲಿಮಾರು ಮಠದ ಹಿರಿಯ ಮತ್ತು ಕಿರಿಯ ಶ್ರೀಗಳು ಸೋದೆ ಮಠಾಧೀಶರು ಕೃಷ್ಣಾಪುರ ಮತ್ತು ಕಾಣಿಯೂರು ಸ್ವಾಮೀಜಿಯವರು ಧ್ಯಾನದಲ್ಲಿ ಪಾಲ್ಗೊಂಡರು. ಅದಮಾರು ಹಿರಿಯ ಶ್ರೀಗಳು ಸೇರಿದಂತೆ ಇತರೆ ಮಠಾಧೀಶರು ತಮ್ಮ ತಮ್ಮ ಮಠಗಳಲ್ಲಿ ಜಪ ನಡೆಸಿದರು. ಕೃಷ್ಣ ಮಠದ ಸಿಬ್ಬಂದಿ ಮತ್ತು ಅರ್ಚಕರು ಮಠದ ಒಳಗೆ ಇದ್ದು ಜಪ ತಪದಲ್ಲಿ ತಲ್ಲೀನರಾದರು.