– ಮತ್ತೊಂದು ಪ್ರಕರಣದಲ್ಲಿ ಮಗಳ ಹುಟ್ಟು ಹಬ್ಬ ಸಂಭ್ರಮದ ದಿನವೇ ತಂದೆ ಸಾವು
ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೊನಾದ ಕರಾಳತೆ ಮುಂದುವರಿದಿದೆ. ಶಿವಮೊಗ್ಗ ನಗರದ ಬಸವನಗುಡಿ ಬಡಾವಣೆಯಲ್ಲಿ ಕೆಲವೇ ಗಂಟೆಗಳ ಅಂತರದಲ್ಲಿ ತಾಯಿ ಮತ್ತು ಮಗ ಮೃತಪಟ್ಟಿದ್ದಾರೆ. ಮಗ ಕೊರೊನಾ ಮಹಾಮಾರಿಗೆ ಬಲಿಯಾದರೆ, ತಾಯಿ ಮಗ ಸೋಂಕಿಗೆ ಒಳಪಟ್ಟ ಕೊರಗಿನಲ್ಲಿಯೇ ಅಸುನೀಗಿದ್ದಾರೆ.
ಬಸವನಗುಡಿ ಬಡಾವಣೆ ನಿವಾಸಿ, ಪ್ಲಾಸ್ಟಿಕ್ ವಸ್ತುಗಳ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ, ಸುರೇಶ್ ಕಳೆದ 8 ದಿನಗಳಿಂದ ಕೊರೊನಾ ಸೋಂಕಿಗೆ ತುತ್ತಾಗಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯದಲ್ಲಿ ಚೇತರಿಕೆ ಕಂಡಿತಾದರೂ, ಸೋಮವಾರ ಮಧ್ಯಾಹ್ನದ ಹೊತ್ತಿಗೆ ಸ್ಥಿತಿ ಗಂಭೀರವಾಗತೊಡಗಿತು. ವೈದ್ಯರು ಈ ವಿಚಾರವನ್ನು ಸುರೇಶ್ ಅವರ ಮನೆಯವರಿಗೆ ತಿಳಿಸಿದ್ದಾರೆ.
Advertisement
ಸುರೇಶ್ ಸ್ಥಿತಿ ಗಂಭೀರವಾಗಿರುವ ವಿಚಾರ ತಿಳಿದು ತಾಯಿ ಗೌರಮ್ಮ ಆಘಾತಕ್ಕೆ ಒಳಗಾಗಿದ್ದರು. ಸಂಜೆ ಆರು ಗಂಟೆ ಹೊತ್ತಿಗೆ ಗೌರಮ್ಮ ತಮ್ಮ ಮನೆಯಲ್ಲಿಯೇ ಮೃತಪಟ್ಟಿದ್ದಾರೆ. ಈ ವಿಷಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪುತ್ರ ಸುರೇಶ್ಗೆ ಗೊತ್ತೆ ಇರಲಿಲ್ಲ. ಆದರೆ ತಾಯಿ ಮೃತಪಟ್ಟ ಐದು ಗಂಟೆ ಕಳೆಯುವುದರಲ್ಲಿ ಸುರೇಶ್ರವರು ಕೊರೊನಾಗೆ ಬಲಿಯಾಗಿದ್ದಾರೆ.
Advertisement
ಸುರೇಶ್ ಅವರಿಗೆ ಪತ್ನಿ ಹಾಗೂ ಏಳನೇ ತರಗತಿ ಮತ್ತು ನಾಲ್ಕನೇ ತರಗತಿ ಓದುತ್ತಿರುವ ಇಬ್ಬರು ಪುತ್ರಿಯರಿದ್ದಾರೆ.
Advertisement
ಮಗಳ ಹುಟ್ಟುಹಬ್ಬದಂದೆ ಅಪ್ಪ ಸಾವು: ಮತ್ತೊಂದು ಪ್ರಕರಣದಲ್ಲಿ ಮಗಳ ಹುಟ್ಟುಹಬ್ಬದ ದಿನವೇ ತಂದೆ ಕೊರೊನಾಗೆ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಸಂಭವಿಸಿದೆ. ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಹಾಲುಗುಡ್ಡೆ ಗ್ರಾಮದಲ್ಲಿ ಯುವರಾಜ್ (43) ಕೊರೊನಾಗೆ ತುತ್ತಾಗಿದ್ದರು. ವಾರದ ಹಿಂದೆ ಯುವರಾಜ್ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗಿದೆ ಸೋಮವಾರ ಮೃತರಾಗಿದ್ದಾರೆ. ಅವರ ಮಗಳು ಶಾಂಭವಿ ಹುಟ್ಟುಹಬ್ಬದ ದಿನವೇ ಕೊನೆಯುಸಿರೆಳೆದಿದ್ದಾರೆ. ಒಂದು ವಾರದ ಹಿಂದೆಯಷ್ಟೇ ಯುವರಾಜ್ ಅವರ ತಾಯಿ ಸಹ ಮೃತಪಟ್ಟಿದ್ದರು.