– ಆರು ಆರೋಪಿಗಳ ಬಂಧನ
– ಪೊಲೀಸರ ಕಾರ್ಯಾಚರಣೆಗೆ ವ್ಯಾಪಕ ಪ್ರಶಂಸೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಲ್ಲಣ ಮೂಡಿಸಿದ್ದ ಉಜಿರೆಯ ಬಾಲಕನ ಕಿಡ್ನಾಪ್ ಪ್ರಕರಣ ಸುಖಾಂತ್ಯ ಕಂಡಿದೆ.
ಡಿ.17ರ ಸಂಜೆ 6.15ರ ಹೊತ್ತಿಗೆ ಉಜಿರೆಯ ರಥಬೀದಿಯಲ್ಲಿರುವ ತನ್ನ ಮನೆಯ ಮುಂಭಾಗದಿಂದ ಕಿಡ್ನಾಪ್ ಆಗಿದ್ದ ಎಂಟು ವರ್ಷದ ಬಾಲಕ ಅನುಭವ್ ಸುರಕ್ಷಿತವಾಗಿ ತಾಯಿ ಮಡಿಲು ಸೇರಿದ್ದಾನೆ. ಆರೋಪಿಗಳ ಸುಳಿವು ಸಿಗದೆ 30 ಗಂಟೆಗಳ ಕಾಲ ತಲೆಕೆಡಿಸಿಕೊಂಡಿದ್ದ ಪೊಲೀಸ್ ತಂಡಗಳಿಗೆ ಆ ಒಂದು ಫೋನ್ ಕಾಲ್ ಆರೋಪಿಗಳನ್ನು ಪತ್ತೆ ಹಚ್ಚೋಕೆ ನೆರವಾಗಿತ್ತು. ಇಂದು ಮುಂಜಾನೆ 3 ರಿಂದ 4 ಗಂಟೆಯ ಒಳಗಡೆ ದಾಳಿ ಮಾಡಿದ ಪೊಲೀಸ್ ತಂಡ 6 ಮಂದಿ ಆರೋಪಿಗಳ ಹೆಡೆಮುರಿ ಕಟ್ಟಿ ಬಾಲಕ ಅನುಭವ್ ನನ್ನು ರಕ್ಷಣೆ ಮಾಡಿದೆ.
Advertisement
Advertisement
ಆ ಒಂದು ಫೋನ್ ಕರೆ ಕೊಟ್ಟಿತ್ತು ಸುಳಿವು:
ಆರೋಪಿಗಳ ಸುಳಿವು ಸಿಗದೆ ನಿನ್ನೆ ರಾತ್ರಿವರೆಗೂ ತಲೆಕೆಡಿಸಿಕೊಂಡಿದ್ದ ಬೆಳ್ತಂಗಡಿ ಪೊಲೀಸರು, ಮುಂಜಾನೆ ವೇಳೆಗೆ ಆರೋಪಿಗಳನ್ನು ಬಂಧಿಸಿ ಬಾಲಕನನ್ನು ರಕ್ಷಣೆ ಮಾಡಲು ಯಶಸ್ವಿಯಾಗಿದ್ದಾರೆ. ಡಿ.17ರ ಸಂಜೆ ಬಾಲಕ ಅನುಭವ್ ಕಿಡ್ನಾಪ್ ಆದ ಬಳಿಕ ಅನುಭವ್ ತಾಯಿಗೆ ಅನಾಮಧೇಯ ವ್ಯಕ್ತಿಯಿಂದ ಕಾಲ್ ಬಂದಿತ್ತು. ಈ ವೇಳೆ ವ್ಯಕ್ತಿ 100 ಬಿಟ್ ಕಾಯಿನ್ ಅಂದ್ರೆ 17 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದ. ಆ ನಂತರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಬಳಿಕ ಬಾಲಕನ ತಂದೆ ಬಿಜೋಯ್ಗೆ ವ್ಯಕ್ತಿ ವಾಟ್ಸಪ್ ಚಾಟ್ ಮಾಡುತ್ತಿದ್ದ.
Advertisement
Advertisement
ಹಣದ ಬೇಡಿಕೆಯನ್ನು ಹತ್ತು ಕೋಟಿಗಿಳಿಸಿ, ಮಾಧ್ಯಮ ಮತ್ತು ಪೊಲೀಸ್ ದೂರಿನ ಬಗ್ಗೆ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದ. ಬಳಿಕ ಪೊಲೀಸರು ಆ ನಂಬರ್ ನ್ನು ಟ್ರೇಸ್ ಮಾಡಿದ್ದರು. ಮೊದಲು ಹಾಸನ, ಸಂಜೆ ಬೆಂಗಳೂರು ಭಾಗದ ನೆಟ್ವರ್ಕ್ ಲೊಕೇಶನ್ ನಲ್ಲಿ ಆಕ್ಟೀವ್ ಆಗಿದ್ದನ್ನು ನೋಟ್ ಮಾಡಿದ್ದರು. ನಿನ್ನೆ ರಾತ್ರಿ 9 ಗಂಟೆಯ ವೇಳೆ ಆ ನಂಬರ್ ಗೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕೂರ್ನಹಳ್ಳಿ ಎಂಬಲ್ಲಿಂದ ಕಾಲ್ ಹೋಗಿದ್ದನ್ನು ಟ್ರ್ಯಾಕ್ ಮಾಡಿದ ಪೊಲೀಸರು ಇಂದು ಬೆಳಗ್ಗಿನ ಜಾವ ಕಾರ್ಯಾಚರಣೆ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.
ಅಪಹರಿಸಿದ್ದು ಹೇಗೆ?
ಉಜಿರೆಯಿಂದ ಇಂಡಿಕಾ ಕಾರ್ ನಲ್ಲಿ ಬಾಲಕನನ್ನು ನಾಲ್ಕು ಮಂದಿ ಕಿಡ್ನಾಪ್ ಮಾಡಿದ್ದರು. ಉಜಿರೆಯಿಂದ ಕೋಲಾರದವರೆಗೆ ಸುಮಾರು 400 ಕಿ.ಮೀ. ದೂರವನ್ನು ಪೊಲೀಸರ ಕಣ್ಣುತಪ್ಪಿಸಿ ಪರಾರಿಯಾಗಿದ್ದರು. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಕಮಲ್, ಮೈಸೂರಿನ ಗಂಗಾಧರ್, ಮಂಡ್ಯದ ರಂಜಿತ್ ಮತ್ತು ಹನುಮಂತ್ ನಿನ್ನೆ ಸಂಜೆ 7.30ರ ವೇಳೆಗೆ ಕೋಲಾರದ ಕೂರ್ನಹೊಸಳ್ಳಿ ಗ್ರಾಮದ ಮಂಜುನಾಥ ಎಂಬುವವರ ಮನೆಗೆ ತೆರಳಿ ಅಲ್ಲೇ ತಂಗಿದ್ದಾರೆ.
ರಾತ್ರಿ ಮಂಜುನಾಥ್ ಮೊಬೈಲ್ನಿಂದ ಕಿಡ್ನಾಪರ್ಸ್ ಗ್ಯಾಂಗ್ ಬೆದರಿಕೆ ಬಂದ ನಂಬರ್ ಗೆ ಕಾಲ್ ಮಾಡಿದ್ದಾರೆ. ಬೆದರಿಕೆ ಕರೆ ಬಂದ ನಂಬರ್ ಗೆ ಕೂರ್ನಹೊಸಳ್ಳಿ ಗ್ರಾಮದಿಂದ ಕಾಲ್ ಬಂದಿದ್ದನ್ನು ಗಮನಿಸಿದ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ್ ಪಿಜಿ ನೇತೃತ್ವದ ತಂಡ, ಕೋಲಾರ ಎಸ್ಪಿ ಕಾರ್ತಿಕ್ ರೆಡ್ಡಿ ನೆರವಿನೊಂದಿಗೆ ಮುಂಜಾನೆ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಕಿಡ್ನಾಪ್ ಗ್ಯಾಂಗ್ ನ ಕಮಲ್ ಮತ್ತು ಗಂಗಾಧರ್ ಜೊತೆಗೆ ಕೂರ್ನಹೊಸಳ್ಳಿ ಗ್ರಾಮದಲ್ಲಿ ಆರೋಪಿಗಳಿಗೆ ಸಹಾಯ ಮಾಡಿದ ಮಂಜುನಾಥ್ ಮತ್ತು ಮಹೇಶ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಕಿಡ್ನಾಪ್ ಮಾಡಿದ ಕಮಲ್ ಮತ್ತು ಕೂರ್ನಹೊಸಳ್ಳಿ ಗ್ರಾಮದ ಮಹೇಶ್ ಸ್ನೇಹಿತರಾಗಿದ್ದು, ಪ್ರಕರಣದಲ್ಲಿ ಕೈ ಜೋಡಿಸಿರೋದು ಬೆಳಕಿಗೆ ಬಂದಿದೆ.
ಬಿಟ್ ಕಾಯಿನ್ ಕಿಡ್ನಾಪ್
ಈ ಅಪಹರಣ ಪ್ರಕರಣದ ಹಿಂದೆ ಬಿಟ್ ಕಾಯಿನ್ ಸೇರಿದಂತೆ ಅನಧಿಕೃತ ದಂಧೆಯ ಜಾಲ ಇರೋದು ಗೊತ್ತಾಗಿದೆ. ಬಾಲಕ ಅನುಭವ್ ನ ತಂದೆ ಬಿಜೋಯ್ ಈ ಹಿಂದೆ ಬಿಟ್ ಕಾಯಿನ್ ವ್ಯವಹಾರ ನಡೆಸುತ್ತಿದ್ದರು. ಇದರ ಹಿನ್ನಲೆಯಲ್ಲೇ ಆರೋಪಿಗಳು ಬಿಟ್ ಕಾಯಿನ್ ಗೆ ಬೇಡಿಕೆ ಇಟ್ಟಿರುವ ಬಗ್ಗೆ ಶಂಕೆ ಪೊಲೀಸರಿಗಿದೆ.
ಈ ಪ್ರಕರಣಕ್ಕೆ ಸ್ಥಳೀಯರೂ ಶಾಮೀಲಾಗಿರುವ ಬಗ್ಗೆಯೂ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ಆರೋಪಿಗಳನ್ನು ಮತ್ತು ಬಾಲಕನನ್ನು ಬೆಳ್ತಂಗಡಿ ಪೊಲೀಸರು ಕೋರ್ಟ್ ಗೆ ಹಸ್ತಾಂತರಿಸಿದ್ದಾರೆ. ಹೆಚ್ಚಿನ ತನಿಖೆಗೆ ಬೆಳ್ತಂಗಡಿಗೆ ಕರೆ ತಂದಿದ್ದಾರೆ. ಒಟ್ಟಿನಲ್ಲಿ ಭಾರೀ ಆತಂಕ ಮೂಡಿಸಿದ್ದ ಅಪಹರಣ ಪ್ರಕರಣ 34 ಗಂಟೆಗಳ ಬಳಿಕ ಸಮಾಧಾನದ ಅಂತ್ಯ ಕಂಡಿದೆ. ಆದರೆ ಈ ಪ್ರಕರಣ ಹಲವು ಆಯಾಮಗಳನ್ನು ಪಡೆದಿದ್ದು, ಪೊಲೀಸ್ ತನಿಖೆ ಮತ್ತಷ್ಟು ಜನರಿಗೆ ಕಂಟಕವಾಗುವುದರಲ್ಲಿ ಸಂಶಯವಿಲ್ಲ.