-ಶಬ್ಬೀರ್ ನಿಡಗುಂದಿ
ನವದೆಹಲಿ : ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಟೀಕೆಗೊಳಪಟ್ಟ ಕುಂಭಮೇಳದ ಬಳಿಕ, ಈಗ ಮೂರನೇ ಅಲೆಯ ಭೀತಿಯ ನಡುವೆ ಕನ್ವರ್ ಯಾತ್ರೆ ಹೊಸ ವಿವಾದಕ್ಕೆ ಕಾರಣವಾಗಿದೆ. ಕನ್ವರ್ ಯಾತ್ರೆಗೆ ಅವಕಾಶ ನೀಡಬೇಕಾ ಬೇಡವಾ ಅನ್ನೊ ವಿಚಾರಕ್ಕೆ ಸಂಬಂಧಿಸಿದಂತೆ ಪರ ವಿರೋಧ ಚರ್ಚೆಗಳು ಶುರುವಾಗಿದೆ.
Advertisement
ಕನ್ವರ್ ಯಾತ್ರೆಗೆ ಈ ಬಾರಿ ಅನುಮತಿ ನಿರಾಕರಿಸಿರುವ ಉತ್ತರಾಖಂಡ ಸರ್ಕಾರ ಕೊರೊನಾ ಸಂದರ್ಭದಲ್ಲಿ ರಿಸ್ಕ್ ತೆಗೆದುಕೊಳ್ಳಲು ಸಾಧ್ಯವಿಲ್ಲ. ಜನರ ಜೀವದ ಜೊತೆ ಚೆಲ್ಲಾಟವಾಡುವ ಪ್ರಯತ್ನ ಬೇಡ ಎಂದು ಹೇಳಿದೆ. ಭಾರತೀಯ ವೈದ್ಯಕೀಯ ಸಂಘ ಬರೆದ ಪತ್ರದ ಬಳಿಕ ಸಿಎಂ ಪುಷ್ಕರ್ ಸಿಂಗ್ ಧಾಮಿ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. ಒಂದು ವೇಳೆ ಯಾತ್ರೆ ನಡೆಯುವ ಹರಿದ್ವಾರ ನಗರವನ್ನು ಪ್ರವೇಶಿಸಬೇಕಾದರೇ 14 ದಿನದ ಕ್ವಾರಂಟೈನ್ ಮುಗಿಸಬೇಕು ಎಂದು ಹೇಳಲಾಗಿದೆ.
Advertisement
Advertisement
ಆದರೆ ಈ ನಡುವೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಭಿನ್ನ ನಿಲುವು ತೆಗೆದುಕೊಂಡಿದ್ದಾರೆ. ಯಾತ್ರೆಗೆ ಷರತ್ತು ಬದ್ಧ ಅನುಮತಿ ನೀಡುವುದಾಗಿ ಹೇಳಿದ್ದಾರೆ. ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಕೇಂದ್ರೀಕೃತವಾಗಿ ಆಚರಿಸುವ ಯಾತ್ರೆ ಇದಾಗಿದ್ದು, ಈಗ ಅನುಮತಿ ವಿಚಾರದಲ್ಲಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿದೆ.
Advertisement
ಉತ್ತರ ಪ್ರದೇಶ ಸರ್ಕಾರ ಇಂತದೊಂದು ನಿರ್ಧಾರ ತೆಗೆದುಕೊಳ್ಳುತ್ತಿದ್ದಂತೆ ಸುಪ್ರೀಂಕೋರ್ಟ್ ಸ್ವಯಂ ದೂರು ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದೆ. ಕೊರೊನಾ ಸಂದರ್ಭದಲ್ಲಿ ಲಕ್ಷಾಂತರ ಜನ ಸೇರುವ ಕಾರ್ಯಕ್ರಮಕ್ಕೆ ಅನುಮತಿ ನೀಡುವ ವಿಚಾರದ ಬಗ್ಗೆ ಅದು ಆತಂಕ ವ್ಯಕ್ತಪಡಿಸಿದೆ. ಸದ್ಯ ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು ವಿಚಾರಣೆ ಮುಂದೂಡಲಾಗಿದೆ.
ಜುಲೈ 25 ರಿಂದ ಅಗಸ್ಟ್ 6 ಈವರೆಗೂ ಈ ಯಾತ್ರೆ ನಡೆಯಲಿದೆ. 2019ರಲ್ಲಿ ನಡೆದ ಕನ್ವರ್ ಯಾತ್ರೆ ಸಂದರ್ಭದಲ್ಲಿ ಹರಿದ್ವಾರಕ್ಕೆ 3.5 ಕೋಟಿ ಮತ್ತು ಉತ್ತರಪ್ರದೇಶದ ನದಿ ತೀರಗಳಿಗೆ 2 -3 ಕೋಟಿ ಭಕ್ತಾದಿಗಳು ಭೇಟಿ ನೀಡಿದ್ದರು. ಈ ಪ್ರಮಾಣದಲ್ಲಿ ಸೇರುವ ಈ ಯಾತ್ರೆ ಈಗ ಕೊರೊನಾ ಸಂದರ್ಭದಲ್ಲಿ ದೊಡ್ಡ ಆತಂಕವನ್ನು ಸೃಷ್ಟಿ ಮಾಡುತ್ತಿದೆ.
ಏನಿದು ಕನ್ವರ್ ಯಾತ್ರೆ?
ಕನ್ವರ್ ಯಾತ್ರೆ ಎಂಬುದು ಹಿಂದೂ ಕ್ಯಾಲೆಂಡರ್ ತಿಂಗಳ ಶ್ರಾವಣ (ಸಾವನ್) ದಲ್ಲಿ ಆಯೋಜಿಸಲಾಗುವ ತೀರ್ಥಯಾತ್ರೆಯಾಗಿದೆ. ಕೇಸರಿ ಬಟ್ಟೆಯ ಹೊದಿಕೆಯಿರುವ ಶಿವ ಭಕ್ತರು ಗಂಗಾ ಅಥವಾ ಇತರ ಪವಿತ್ರ ನದಿಗಳಿಂದ ಪವಿತ್ರ ನೀರಿನ ಹೂಜಿಗಳೊಂದಿಗೆ ಬರಿಗಾಲಿನಲ್ಲಿ ನಡೆಯುತ್ತಾರೆ. ಗಂಗಾ ಬಯಲು ಪ್ರದೇಶದಲ್ಲಿ, ಉತ್ತರಾಖಂಡದ ಹರಿದ್ವಾರ, ಗೌಮುಖ್ ಮತ್ತು ಗಂಗೋತ್ರಿ, ಬಿಹಾರದ ಸುಲ್ತಂಗಂಜ್, ಮತ್ತು ಉತ್ತರ ಪ್ರದೇಶದ ಪ್ರಯಾಗ್ರಾಜ್, ಅಯೋಧ್ಯೆ ಅಥವಾ ವಾರಣಾಸಿಯಂತಹ ತೀರ್ಥಯಾತ್ರೆಯ ಸ್ಥಳಗಳಿಂದ ನೀರನ್ನು ತೆಗೆದುಕೊಂಡು ಹೋಗಲಾಗುತ್ತದೆ.
ನೀರಿನ ಹೂಜಿಗಳನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಹೋಗುವ ಶಿವ ಭಕ್ತರನ್ನು ಕನ್ವರ್ಸ್ ಎಂದು ಕರೆಯಲಾಗುತ್ತೆ. ಅಲಂಕೃತ ಜೋಲಿಗಳ ಮೇಲೆ ನೀರನ್ನು ತಂದು 12 ಜೋರ್ತಿಲಿಂಗಗಳು ಅಥವಾ ತಮ್ಮ ಗ್ರಾಮ ಅಥವಾ ಪಟ್ಟಣಗಳಲ್ಲಿರುವ ಶಿವಲಿಂಗದ ದೇವಸ್ಥಾನಗಳಲ್ಲಿ ಪೂಜೆಗೆ ಬಳಕೆ ಮಾಡಲಾಗುತ್ತದೆ. ವಿಶೇಷ ಪೂಜೆಯ ಬಳಿಕ ನದಿಯ ನೀರು ಹೂಜಿಗಳಲ್ಲಿ ತುಂಬಿದ ಮೇಲೆ ಅದನ್ನು ನೆಲಕ್ಕೆ ತಾಗಿಸುವಂತಿಲ್ಲ. ಇವುಗಳನ್ನು ಹೊತ್ತು ನೂರಾರು ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಪ್ರಯಾಣಿಸಬೇಕು. ಈ ಕಾರಣದಿಂದಲೇ ಕನ್ವರ್ಸ್ ರನ್ನು ಪೂಜ್ಯ ಭಾವದಿಂದ ನೋಡಲಾಗುತ್ತೆ. ಈ ರೀತಿಯ ಶಿವಪೂಜೆಗೆ ಗಂಗಾನದಿಯ ತಟದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿಶೇಷ ಮಹತ್ವವಿದೆ. ಕನ್ವರ್ ಯಾತ್ರೆಗೆ ಹೋಲುವ ಪ್ರಮುಖ ಹಬ್ಬವನ್ನು ತಮಿಳುನಾಡಿನಲ್ಲಿ ಆಚರಿಸಲಾಗುತ್ತದೆ, ಅಲ್ಲಿ ಮುರುಗನನ್ನು ಪೂಜಿಸಲಾಗುತ್ತದೆ.
ಪೌರಾಣಿಕ ಹಿನ್ನೆಲೆ:
ಲೋಕಕಲ್ಯಾಣಕ್ಕಾಗಿ ಶಿವ ವಿಷ ಸೇವಿಸಿದಾಗ ಅದನ್ನು ಪಾರ್ವತಿ ಗಂಟಲಿನಲ್ಲಿ ತಡೆ ಹಿಡಿಯುತ್ತಾಳೆ. ಶಿವನ ಗಂಟಲು ನೀಲಿ ಬಣ್ಣಕ್ಕೆ ತಿರುಗುತ್ತ ನೀಲಕಂಠ ಅಥವಾ ವಿಷಕಂಟನಾಗುತ್ತಾನೆ. ಅದಾಗ್ಯೂ ವಿಷ ದೇಹವನ್ನು ಸೇರಿ ದೇಹ ಊದಿಕೊಳ್ಳುತ್ತದೆ, ವಿಷ ಪರಿಣಾಮ ಕಡಿಮೆ ಮಾಡಲು ನೀಡು ಅರ್ಪಿಸಲಾಗಿತ್ತು. ಇದರ ನಂಬಿಕೆಗಾಗಿ ಪ್ರತಿ ವರ್ಷ ಪವಿತ್ರ ನದಿಗಳಿಂದ ತಂದ ನೀರಿನಿಂದ ಶಿವಲಿಂಗಕ್ಕೆ ಪೂಜೆ ಸಲ್ಲಿಸಲಾಗುತ್ತೆ. ಮತ್ತೊಂದು ನಂಬಿಕೆಯ ಪ್ರಕಾರ, ಶಿವ ಭಕ್ತ ಪರಶುರಾಮ ಮೊದಲು ಈ ಪದ್ದತಿಯನ್ನು ಆರಂಭಿಸಿದ ಎನ್ನಲಾಗುತ್ತೆ. ಪರಶುರಾಮ್ ಶಿವನ ಆರಾಧನೆಗಾಗಿ ಶ್ರಾವಣ ಮಾಸದಲ್ಲಿ ಪ್ರತಿ ಸೋಮವಾರ ಗಂಗಾಜಲ ತಂದು ಪೂಜಿಸುತ್ತಿದ್ದ ಎಂದು ನಂಬಲಾಗುತ್ತೆ.
ಕಾಲ್ನಡಿಗೆ ಪ್ರಯಾಣ:
ಕನ್ವರ್ ಯಾತ್ರೆ ಕಾಲ್ನಡಿಗೆಯ ಅತ್ಯಂತ ಕಷ್ಟಕರವಾದ ಪ್ರಯಾಣ. ಇದು 100 ಕಿಲೋಮೀಟರ್ಗಳಷ್ಟು ವಿಸ್ತರಾವಾಗಿರಬಹುದು. ವೃದ್ಧರು, ಯುವಕರು, ಮಹಿಳೆಯರು, ಪುರುಷರು, ಮಕ್ಕಳು, ಮತ್ತು ವಿಕಲಚೇತನರು ಸೇರಿ ಎಲ್ಲ ವರ್ಗದ ಜನರು ಇದರಲ್ಲಿ ಭಾಗಿಯಾಗುತ್ತಾರೆ.
‘ಬೋಲ್ ಬಾಮ್’ ಮತ್ತು ‘ಜೈ ಶಿವಶಂಕರ್’ ಎಂದು ಜಪಿಸುವ ಈ ಭಕ್ತಾದಿಗಳು ಗಂಗೋತ್ರಿ, ಗೌಮುಖ್, ಮತ್ತು ಹರಿದ್ವಾರ ಮುಂತಾದ ಪವಿತ್ರ ನದಿ ಸಂಗಮಗಳ ತಾಣಗಳಲ್ಲಿ ಸೇರುತ್ತಾರೆ. ಪಶ್ಚಿಮ ಉತ್ತರ ಪ್ರದೇಶ, ಪಂಜಾಬ್, ಹರಿಯಾಣ ಮತ್ತು ದೆಹಲಿಯಂತಹ ರಾಜ್ಯಗಳ ಭಕ್ತರು ಸಾಮಾನ್ಯವಾಗಿ ಉತ್ತರಾಖಂಡಕ್ಕೆ ಪ್ರಯಾಣಿಸಿದರೇ, ಅಯೋಧ್ಯೆ ಮತ್ತು ಹತ್ತಿರದ ಜಿಲ್ಲೆಗಳಿಂದ ಬರುವ ಭಕ್ತರು ಬಿಹಾರದ ಭಾಗಲ್ಪುರ್ ಜಿಲ್ಲೆಯ ಗಂಗಾನದಿ ಮೂಲಕ ಸುಲ್ತಂಗಂಜ್ಗೆ ಹೋಗುತ್ತಾರೆ.
ಕೆಲವರು ಜಾರ್ಖಂಡ್ನ ದಿಯೋಘರ್ನಲ್ಲಿರುವ ಬಾಬಾ ಬೈದ್ಯನಾಥ ಧಮ್ಗೆ ಪವಿತ್ರ ನೀರನ್ನು ಅರ್ಪಿಸಲಾಗುತ್ತೆ. ಇನ್ನು ಕೆಲವರು ಜಾರ್ಖಂಡ್ನ ದುಮ್ಕಾ ಜಿಲ್ಲೆಯ ಬಾಬಾ ಬಸುಕಿನಾಥ್ ಧಾಮ್ಗೆ ಪ್ರಯಾಣಿಸುತ್ತಾರೆ. ಪೂರ್ವ ಯುಪಿಯ ಜನರು ಅಯೋಧ್ಯೆಯ ಸರಯು ನದಿಯಿಂದ ನೀರನ್ನು ತೆಗೆದುಕೊಂಡು ಪಟ್ಟಣದ ಕ್ಷೀರೇಶ್ವರ ಮಹಾದೇವ್ ದೇವಸ್ಥಾನಕ್ಕೆ ಅರ್ಪಿಸುತ್ತಾರೆ. ಇತರರು ವಾರಣಾಸಿಗೆ ಹೋಗಿ ಕಾಶಿ ವಿಶ್ವನಾಥರಿಗೆ ಗಂಗಾ ನೀರು ಅರ್ಪಿಸುತ್ತಾರೆ.
ಕನ್ವರ್ ಯಾತ್ರೆಯ ಕಠಿಣ ನಿಯಮಗಳು:
ಯಾತ್ರೆ ಕೆಲವು ಕಠಿಣ ನಿಯಮಗಳನ್ನು ಅನುಸರಿಸುತ್ತದೆ, ಕೆಲವು ಭಕ್ತರು ಪ್ರಯಾಣದ ವೇಳೆ, ನಿದ್ದೆ ಮಾಡುವಾಗ, ಊಟ ಮಾಡುವ ಸಮಯದಲ್ಲಿ ಪ್ರತಿ ಬಾರಿ ತಮ್ಮನ್ನು ತಾವು ನಿವಾಳಿಸಿಕೊಳ್ಳುತ್ತಾರೆ. ಪವಿತ್ರ ನೀರಿನಿಂದ ತುಂಬಿದ ಹೂಜಿ ಎಂದಿಗೂ ನೆಲವನ್ನು ಮುಟ್ಟಬಾರದು. ಹೂಜಿ ತುಂಬಿದ ನಂತರ, ದೇವಾಲಯಗಳಿಗೆ ಯಾತ್ರೆ ಸಂಪೂರ್ಣವಾಗಿ ಕಾಲ್ನಡಿಗೆಯಲ್ಲಿರಬೇಕು.
ಕೊರೊನಾ ಸಂಕಷ್ಟ ಮತ್ತು ಭದ್ರತೆ:
ಸದ್ಯ ಕೊರೊನಾ ಎರಡನೇ ಅಲೆ ಅಂತ್ಯವಾದರೂ ಮೂರನೇ ಅಲೆಯ ಭೀತಿ ಇದೆ. ಎರಡನೇ ಅಲೆಯಲ್ಲಿ ಉತ್ತರ ಪ್ರದೇಶ ಸೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೋಂಕು ಹೆಚ್ಚಾಗಲು ಕುಂಭಮೇಳ ಕಾರಣವಾಯ್ತು ಎನ್ನುವ ಆರೋಪವಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಕನ್ವರ್ ಯಾತ್ರೆಗೆ ಅನುಮತಿ ನೀಡಿದ್ದಲ್ಲಿ ಸೋಂಕು ಹೆಚ್ಚಾಗಲು ದಾರಿ ಮಾಡಿಕೊಟ್ಟಂತಾಗಲಿದೆ ಎನ್ನುವ ಭೀತಿ ಇದೆ. ಇದರ ಜೊತೆ ಕೋಟ್ಯಾಂತರ ಭಕ್ತಾಧಿಗಳು ಅಂತರ ರಾಜ್ಯಗಳ ನಡುವೆ ದೊಡ್ಡ ಪ್ರಮಾಣದಲ್ಲಿ ಸಂಚಾರ ಮಾಡುವುದರಿಂದ ಸೋಂಕು ವ್ಯಾಪಿಸಬಹುದು ಎನ್ನುವ ಆತಂಕವೂ ಇದೆ.
ಇದೇ ಆತಂಕವನ್ನು ಪ್ರಕರಣದ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್ ನ ನ್ಯಾ. ಆರ್ ಎಫ್ ನಾರಿಮನ್ ಪೀಠ ವ್ಯಕ್ತಪಡಿಸಿದೆ. ಒಂದು ಕಡೆ ಕೊರೊನಾ ಮತ್ತೊಂದು ಕಡೆ ಇಷ್ಟು ದೊಡ್ಡ ಜನ ಸಂಖ್ಯೆ ಭದ್ರತೆ ವ್ಯವಸ್ಥೆ ಕಲ್ಪಿಸುವ ಕಷ್ಟ ಎಂದು ಹೇಳಲಾಗುತ್ತಿದೆ. ಈ ಕಾರಣಗಳಿಂದ ಉತ್ತರಾಖಂಡ ಸರ್ಕಾರ ಯಾತ್ರೆಗೆ ಅನುಮತಿ ನಿರಾಕರಿಸಿದೆ. ಆದರೆ ಉತ್ತರ ಪ್ರದೇಶ ಯಾತ್ರೆ ನಡೆಸುವ ಸಿದ್ದತೆಯಲ್ಲಿದೆ. ಸದ್ಯ ಪ್ರಕರಣ ಸುಪ್ರೀಂಕೋರ್ಟ್ ನಲ್ಲಿದ್ದು,ಕೋರ್ಟ್ ಅನುಮತಿ ನೀಡುವ ಬಗ್ಗೆ ಏನು ಹೇಳಲಿದೆ ಕಾದು ನೋಡಬೇಕು.