ಚಿಕ್ಕಮಗಳೂರು: ಎಸ್ಮಾ-ಗಿಸ್ಮಾಕ್ಕೆಲ್ಲಾ ತೆಲೆ ಕೆಡಿಸಿಕೊಳ್ಳಲ್ಲ. ಇಂತಹ ಎಸ್ಮಾಗಳ ಧಮ್ಕಿಯನ್ನ ಬಹಳ ನೋಡಿದ್ದೇವೆ. ನಮ್ಮ ಹೋರಾಟ ನಿಲ್ಲಲ್ಲ. ಆರನೇ ವೇತನ ಆಯೋಗ ಜಾರಿಗೆ ಬರಬೇಕು. ಇದು ಸರ್ಕಾರ ಕೊಟ್ಟ ಎಚ್ಚರಿಕೆಗೆ ಸಾರಿಗೆ ನೌಕರರ ಪ್ರತಿಕ್ರಿಯೆ.
ಚಿಕ್ಕಮಗಳೂರಿನಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಾರಿಗೆ ನೌಕರರು, ಸಿಎಂ ಮನುಷ್ಯರಂತೆ ಯೋಚಿಸಿ ಮುಖ್ಯಮಂತ್ರಿಯಂತೆ ಆರ್ಡರ್ ಮಾಡಬೇಕೆಂದು ಮನವಿ ಮಾಡಿದ್ದಾರೆ. ನಮ್ಮ ಇಲಾಖೆಯಲ್ಲಿ ಕೆಲಸ ಮಾಡಿಸಿಕೊಳ್ಳುವಾಗ ಸೇವೆ ಅಂತಾರೆ. ಆದರೆ ಸಂಬಳ ನೀಡುವಾಗ ಮಾತ್ರ ಲಾಭ-ನಷ್ಟ ಅಂತಾರೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
Advertisement
Advertisement
ಕೆ.ಎಸ್.ಆರ್.ಟಿ.ಸಿಯದ್ದು 25 ಸಾವಿರ ಕೋಟಿ ಆಸ್ತಿ ಇದೆ. ನಾವು ನೌಕರರು ಕಷ್ಟಪಡದೆ, ದುಡಿಯದೆ ಅಷ್ಟು ಆಸ್ತಿ ಬಂತಾ ಎಂದು ಸರ್ಕಾರಕ್ಕೆ ಪ್ರಶ್ನಿಸಿದರು. ಈ 25 ಸಾವಿರ ಕೋಟಿ ಆಸ್ತಿಯನ್ನ ಲಾಭಕ್ಕೆ ಪರಿಗಣಿಸುತ್ತಿರೋ ನಷ್ಟಕ್ಕೆ ಪರಿಗಣಿಸುತ್ತಿರೋ ಎಂದು ಕೇಳಿದ್ದಾರೆ. ಒಂದೇ ದೇಶ ಒಂದೇ ಕಾನೂನು ಅಂತಾರೆ. ಒಂದೇ ಸಂಬಳ ಕೊಡಿ ಅಂದ್ರೆ ಆಗಲ್ಲ ಅಂತಾರೆ. ಇದನ್ನ ಅವರೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದರು. ಇದನ್ನೂ ಓದಿ: ಏನಿದು ಎಸ್ಮಾ? ಸರ್ಕಾರಿ ನೌಕರರಿಗೆ ಭಯ ಯಾಕೆ?
Advertisement
Advertisement
ಡಿಸೆಂಬರ್ ನಲ್ಲಿ ಸಚಿವ ಲಕ್ಷ್ಮಣ ಸವದಿಯವರು ಎಂತದ್ದೇ ಪರಿಸ್ಥಿತಿ ಬಂದರೂ ಆರನೇ ವೇತನ ಆಯೋಗವನ್ನ ಜಾರಿಗೆ ಮಾಡುತ್ತೇನೆ ಎಂದಿದ್ದರು. ಅವರು ಭರವಸೆ ಕೊಟ್ಟಿದ್ದಕ್ಕೆ ಇಷ್ಟು ದಿನ ಕಾದಿದ್ದೇವೆ. ಅವರು ಈಗ ಹೇಳಿರುವ 8 ಪರ್ಸೆಂಟ್ ಸ್ಯಾಲರಿ ಹೈಕ್ನ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಕೋರ್ಟ್ ಮೊರೆ ಹೋಗಿ ಅನುಮತಿ ಪಡೆದಿದ್ದೇವೆ. ಕೋರ್ಟ್ ಕೂಡ ಅನುಮತಿ ನೀಡಿದೆ. ಹಾಗಾಗಿ ಎಸ್ಮಾಗೆಲ್ಲಾ ಹೆದರಲ್ಲ. ಎಸ್ಮಾ ಜಾರಿಯಾಗಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರತಿ ಹೋರಾಟದಲ್ಲೂ ಎಸ್ಮಾ ಜಾರಿ ಮಾಡುತ್ತೇವೆ ಎಂದು ಹೆದರಿಸುತ್ತಾರೆ. ಆದರೆ ಎಸ್ಮಾ ಅವರು ಹೇಳಿದಷ್ಟು ಸುಲಭವಲ್ಲ. ನಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯೋ ಮಾತೇ ಇಲ್ಲ ಎಂದಿದ್ದಾರೆ.