ಬೆಂಗಳೂರು: ಕೇರಳದಲ್ಲಿ ಕಮ್ಯುನಿಸ್ಟ್ ಪಕ್ಷಗಳ ನೇತೃತ್ವದ ಎಲ್ಡಿಎಫ್ ಹಾಗೂ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಭಾರತೀಯ ರಾಜಕಾರಣದಲ್ಲಿ ಅಪ್ರಸ್ತುತವಾಗಿವೆ. ಆ ರಾಜ್ಯದ ಜನರು ಈ ಬಾರಿ ಬದಲಾವಣೆ ಬಯಸುತ್ತಿದ್ದಾರೆಂದು ಕೇರಳ ರಾಜ್ಯದ ಬಿಜೆಪಿ ಸಹ ಪ್ರಭಾರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಬೆಂಗಳೂರಿನಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೇರಳದಲ್ಲಿ ಇವೆರಡೂ ರಾಜಕೀಯ ಒಕ್ಕೂಟಗಳು ಸಂಪೂರ್ಣ ವಿಫಲವಾಗಿವೆ. ಕೇವಲ ವೋಟ್ಬ್ಯಾಂಕ್ ಪಾಲಿಟಿಕ್ಸ್ ಮಾಡಿಕೊಂಡು ಕಳೆದ ಎಪ್ಪತ್ತು ವರ್ಷಗಳಿಂದ ಆ ರಾಜ್ಯವನ್ನು ಕತ್ತಲೆಯಲ್ಲೇ ಇಟ್ಟಿವೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಒಲವು ವ್ಯಕ್ತವಾಗುತ್ತಿದೆ ಎಂದರು.
Advertisement
Advertisement
ಈಗಿನ ಎಲ್ಡಿಎಫ್ ಸರಕಾರವಂತೂ ರಾಜಕೀಯ ಕಿರುಕುಳ ನೀಡುವುದು, ರಾಜಕೀಯ ಕೊಲೆಗಳು ಹಾಗೂ ಸೇಡಿನ ರಾಜಕೀಯದಲ್ಲಿ ನಿರತವಾಗಿದೆ ಎಂದು ಆರೋಪಿಸಿದ ಡಿಸಿಎಂ, ಈ ಎರಡೂ ರಾಜಕೀಯ ಒಕ್ಕೂಟಗಳು ಎಲ್ಲ ಜನರಿಗೂ ಸಲ್ಲುವ ಪಕ್ಷಗಳಲ್ಲ. ಕೇವಲ ಜಾತಿ-ಜಾತಿಗಳ ನಡುವೆ ವೈಷಮ್ಯ ಭಿತ್ತಿ ಆ ಮೂಲಕ ರಾಜಕೀಯ ಲಾಭ ಪಡೆಯುತ್ತಿವೆ ಎಂದು ಟೀಕಿಸಿದರು.
Advertisement
ನಮ್ಮ ಭಾರತೀಯ ಸಂಸ್ಕೃತಿ, ಆಚಾರ ವಿಚಾರಕ್ಕೆ ವಿರುದ್ಧವಾಗಿರುವ ಎಲ್ಡಿಎಫ್ನಿಂದ ಕೇರಳಕ್ಕೆ ತುಂಬಾ ಹಾನಿಯಾಗಿದೆ. ಕಮ್ಯುನಿಸ್ಟ್ ಪಕ್ಷಗಳು ನಮ್ಮ ದೇಶದಲ್ಲಿ ಅಪ್ರಸ್ತುತವಾಗಿವೆ. ಎಲ್ಲ ಕಡೆ ಅಧಿಕಾರ ಕಳೆದುಕೊಂಡು ಈ ಕೇರಳದಲ್ಲೂ ನಿರ್ನಾಮದ ಹಂತದಲ್ಲಿದೆ. ಅದೇ ರೀತಿ ಕಾಂಗ್ರೆಸ್ ಪಕ್ಷವೂ ದೇಶಾದ್ಯಂತ ಹೇಳ ಹೆಸರಿಲ್ಲದೆ ಹೋಗುತ್ತಿದೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.
Advertisement
ಬಿಜೆಪಿ ಬಗ್ಗೆ ಕೇರಳದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅನೇಕ ಪಕ್ಷಗಳಿಗೆ ಅಲ್ಲಿ ನಾಯಕತ್ವವೇ ಇಲ್ಲ. ಆ ರಾಜ್ಯದ ಉದ್ದಗಲಕ್ಕೂ ನಮ್ಮ ಕಾರ್ಯಕರ್ತರು ಇದ್ದಾರೆ. ಈ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.