– ಜನವಸತಿ ಸಮೀಪದಲ್ಲಿ ಸ್ಮಶಾನ, ಸ್ಥಳೀಯರ ವಿರೋಧ
ಧಾರವಾಡ: ಕೊರೊನಾದಿಂದ ಮೃತಪಟ್ಟವರ ಅಂತ್ಯಯಸಂಸ್ಕಾರವನ್ನು ಜನವಸತಿ ಪ್ರದೇಶದ ಬದಿಯ ಸ್ಮಶಾನದಲ್ಲಿ ಮಾಡುವುದರ ಜೊತೆಗೆ, ಅಂತ್ಯಸಂಸ್ಕಾರದ ಬಳಿಕ ಪಿಪಿಇ ಕಿಟ್ಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗಿದ್ದರಿಂದ ಆಕ್ರೋಶಗೊಂಡ ಸ್ಥಳೀಯರು, ದಿಢೀರ್ ಪ್ರತಿಭಟನೆಗೆ ಇಳಿದ ಘಟನೆ ನಡೆದಿದೆ.
ನಗರದ ದಾನೇಶ್ವರಿ ನಗರ 3ನೇ ಅಡ್ಡರಸ್ತೆಯಲ್ಲಿರುವ ಸ್ಮಶಾನದಲ್ಲಿ ಇತ್ತೀಚೆಗೆ ಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತಿದೆ. ಧಾರವಾಡ ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ ಹೆಚ್ಚುತ್ತಿದ್ದು, ಈ ಹಿನ್ನೆಲೆ ಬೇರೆ ಕಡೆಯ ಸ್ಮಶಾನಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಆದರಂತೆ ದಾನೇಶ್ವರಿ ನಗರದಲ್ಲಿನ ಸ್ಮಶಾನದಲ್ಲಿಯೂ ಈಗಾಗಲೇ ಕೆಲವರ ಅಂತ್ಯಸಂಸ್ಕಾರ ಮಾಡಲಾಗಿದೆ.
Advertisement
Advertisement
ಸ್ಮಶಾನ ಮತ್ತು ರಸ್ತೆಯ ಕಡಿಮೆ ಅಂತರದ ಜಾಗದಲ್ಲಿಯೇ ಕೊರೊನಾದಿಂದ ಸತ್ತವರ ಅಂತ್ಯಸಂಸ್ಕಾರ ಮಾಡುವುದರ ಜೊತೆಗೆ ಅಂತ್ಯಸಂಸ್ಕಾರ ಮಾಡಿದ ಬಳಿಕ ಸಿಬ್ಬಂದಿ ಬಳಸಿರುವ ಪಿಪಿಇ ಕಿಟ್ ಮತ್ತು ಹ್ಯಾಂಡ್ ಗ್ಲೌಸ್ ಗಳನ್ನು ಬೇಕಾಬಿಟ್ಟಿಯಾಗಿ ಎಸೆದು ಹೋಗಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು, ಇಂದು ಮತ್ತೊಂದು ಮೃತದೇಹ ತೆಗೆದುಕೊಂಡು ಬಂದಾಗ, ಅಧಿಕಾರಿಗಳನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ. ಇಲ್ಲಿ ಯಾವುದೇ ನಿಯಮ ಪಾಲನೆಯಾಗುತ್ತಿಲ್ಲ. ಹೀಗಾಗಿ ನಮ್ಮ ಏರಿಯಾದ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.