ಶಿವಮೊಗ್ಗ: ಮದ್ಯ ನೀಡುವಂತೆ ನಿವೃತ್ತ ಸೈನಿಕರು ಆಗ್ರಹಿಸಿ, ಅಬಕಾರಿ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ಇಂದು ನಗರದಲ್ಲಿ ನಡೆದಿದೆ.
ಕೊರೊನಾ ಲಾಕ್ಡೌನ್ನಿಂದಾಗಿ ಮಿಲಿಟರಿ ಕ್ಯಾಂಟೀನ್ ಸಹ ಬಂದ್ ಆಗಿತ್ತು. ಆದರೆ ಸರ್ಕಾರ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟ ದಿನದಿಂದ ಮಿಲಿಟರಿ ಕ್ಯಾಂಟೀನ್ ಓಪನ್ ಮಾಡಲಾಗಿತ್ತು. ಕಳೆದ ಕೆಲ ದಿನಗಳಿಂದ ಯಾವುದೇ ಸಮಸ್ಯೆ ಇಲ್ಲದೇ ನಿವೃತ್ತ ಸೈನಿಕರು ಕ್ಯಾಂಟೀನ್ನಲ್ಲಿ ಮದ್ಯ ಖರೀದಿ ಮಾಡುತ್ತಿದ್ದರು.
Advertisement
Advertisement
ಶಿವಮೊಗ್ಗ, ದಾವಣಗೆರೆ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಂದ ನೂರಾರು ಮಂದಿ ನಿವೃತ್ತ ಸೈನಿಕರು ಇಂದು ಬೆಳಗ್ಗೆ ನಗರದ ಹೊಳೆ ಬಸ್ ನಿಲ್ದಾಣದ ಸಮೀಪದ ಮಿಲಿಟರಿ ಕ್ಯಾಂಟೀನ್ಗೆ ಮದ್ಯ ಖರೀದಿಸಲೆಂದು ಆಗಮಿಸಿದ್ದರು. ಈ ವೇಳೆ ನಿವೃತ್ತ ಸೈನಿಕರು ಮದ್ಯ ಖರೀದಿಗೆ ಸರದಿ ಸಾಲಿನಲ್ಲೇ ನಿಂತಿದ್ದರು. ಆದರೆ ಸ್ಥಳಕ್ಕೆ ಬಂದ ಅಬಕಾರಿ ಇನ್ಸ್ಪೆಕ್ಟರ್ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ ಎಂದು ಮದ್ಯದ ವ್ಯಾಪಾರವನ್ನು ಸ್ಥಗಿತಗೊಳಿಸಿದ್ದಾರೆ. ಅಷ್ಟೇ ಅಲ್ಲದೆ ಕ್ಯಾಂಟೀನ್ನಲ್ಲಿದ್ದ ಸ್ಟಾಕ್ ಸಹ ಪರಿಶೀಲನೆ ನಡೆಸಿದರು.
Advertisement
ಈ ವೇಳೆ ಎರಡು ಬ್ರಾಂಡ್ನ ಬಾಟಲಿಗಳ ಮೇಲೆ ಪೇಪರ್ ಸೀಲ್ ಇಲ್ಲದಿರುವುದು ಕಂಡು ಬಂದಿದೆ. ಹೀಗಾಗಿ ಅಬಕಾರಿ ಇನ್ಸ್ಪೆಕ್ಟರ್ ಅವರು ಮದ್ಯ ಮಾರಾಟ ನಿಲ್ಲಿಸುವಂತೆ ಮಿಲಿಟರಿ ಅಧಿಕಾರಿಗಳಿಗೆ ಸೂಚಿಸಿ ತೆರಳಿದರು. ಅದರಂತೆ ಕ್ಯಾಂಟೀನ್ನಲ್ಲಿ ಮದ್ಯ ಮಾರಾಟವನ್ನು ಅಧಿಕಾರಿಗಳು ಸ್ಥಗಿತಗೊಳಿಸಲಾಗಿದೆ. ಇದರಿಂದ ಕೆರಳಿದ ನಿವೃತ್ತ ಸೈನಿಕರು ಅಬಕಾರಿ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಮದ್ಯದ ಬಾಟಲಿಗಳು ಕ್ಯಾಂಟೀನ್ಗೆ ತಲುಪುವ ಮುನ್ನ ನಾಲ್ಕೈದು ಕಡೆ ಪರಿಶೀಲನೆ ನಡೆಸಲಾಗುತ್ತದೆ. ಪರಿಶೀಲಿಸಿದ ನಂತರವೇ ಕ್ಯಾಂಟೀನ್ಗೆ ಬರುತ್ತವೆ. ಹೀಗಿರುವಾಗ ಸೀಲ್ ಇಲ್ಲ ಅಂದರೆ ಅದು ಅಬಕಾರಿ ಇಲಾಖೆಯವರ ತಪ್ಪು. ಸೀಲ್ ಇಲ್ಲ ಅಂದ ಮೇಲೆ ಯಾಕೆ ಕಳುಹಿಸಿದರು ಎಂದು ಅಬಕಾರಿ ಸಿಬ್ಬಂದಿ ವಿರುದ್ಧವೇ ನಿವೃತ್ತ ಸೈನಿಕರು ಗುಡುಗಿದರು.
ನಾವು ಕೊರೊನಾ ಪಾಸ್ ಪಡೆದು ಸಾವಿರಾರು ರೂಪಾಯಿ ಖರ್ಚು ಮಾಡಿಕೊಂಡು ದೂರ ದೂರದ ಊರುಗಳಿಂದ ಮದ್ಯ ಖರೀದಿಸಲು ಬಂದಿದ್ದೇವೆ. ನಾವು ಮದ್ಯ ತೆಗೆದುಕೊಂಡೇ ಹೋಗುವುದು. ಒಂದು ವೇಳೆ ನೀವು ಕೊಡದಿದ್ದರೆ ಅಬಕಾರಿ ಇಲಾಖೆ ಕಚೇರಿ ಎದುರೇ ಧರಣಿ ನಡೆಸುತ್ತೇವೆ ಎಂದು ನಿವೃತ್ತ ಸೈನಿಕರು ಎಚ್ಚರಿಕೆ ನೀಡಿದರು.
ಇದರಿಂದಾಗಿ ಅಬಕಾರಿ ಇಲಾಖೆ ಸಿಬ್ಬಂದಿ ಮತ್ತೊಮ್ಮೆ ಪರಿಶೀಲನೆ ನಡೆಸುವ ನೆಪ ಹೇಳಿ, ಸುಮ್ಮನೆ ಯಾಕೆ ನಿವೃತ್ತ ಸೈನಿಕರನ್ನು ಎದುರು ಹಾಕಿಕೊಳ್ಳುವುದು ಎಂಬ ಕಾರಣದಿಂದ ನಾವು ಇದನ್ನು ನಂತರ ಪರಿಶೀಲಿಸುತ್ತೇವೆ. ಸದ್ಯ ನೀವೀಗ ಮದ್ಯ ತೆಗೆದುಕೊಂಡು ಹೋಗಿ ಎಂದು ಹೇಳಿ ಕ್ಯಾಂಟೀನ್ನಲ್ಲಿ ಮದ್ಯ ಮಾರಾಟಕ್ಕೆ ಅನುವು ಮಾಡಿಕೊಟ್ಟರು.