– ರಾಸಾಯನಿಕ ಮುಕ್ತ ತರಕಾರಿ ಬೆಳೆಯುತ್ತಿರುವ ಯುವ ರೈತ ಉದ್ಯಮಿ
ರಾಯಚೂರು: ಜನರನ್ನು ಇಂದು ಕಾಡುತ್ತಿರುವ ನಾನಾ ರೋಗಗಳಿಗೆ ರಾಸಾಯನಿಕಯುಕ್ತ ಆಹಾರವೇ ಕಾರಣವಾಗಿದೆ. ಇದನ್ನ ಮನಗಂಡು ರಾಯಚೂರಿನಲ್ಲೊಬ್ಬ ಯುವಕ ಎಂಜಿನಿಯರಿಂಗ್ ಓದಿದ್ದರೂ ನೈಸರ್ಗಿಕ ಕೃಷಿ ಮೂಲಕ ತರಕಾರಿ ಬೆಳೆದು ಮಾರಾಟ ಮಾಡುತ್ತಿದ್ದಾರೆ. ತಾತ ಮಾಜಿ ಸಚಿವರಾಗಿದ್ದರೂ ಮೊಮ್ಮಗ ಮಾತ್ರ ಹೆಮ್ಮೆಯ ನೈಸರ್ಗಿಕ ಪದ್ಧತಿಯ ಕೃಷಿಕನಾಗಿ ಮಾದರಿಯಾಗಿದ್ದಾರೆ.
Advertisement
ರೈತರ ಮಕ್ಕಳು ಸಹ ಕೃಷಿ ಅಂದ್ರೆ ಮೂಗು ಮುರಿತಾರೆ. ಸ್ವಂತ ಜಮೀನನ್ನ ಬಿಟ್ಟು ಪಟ್ಟಣ, ನಗರ ಪ್ರದೇಶಗಳಿಗೆ ತಿಂಗಳ ಸಂಬಳಕ್ಕೆ ಹೋಗುತ್ತಲೇ ಇದ್ದಾರೆ. ಇಂತಹದರಲ್ಲಿ ರಾಯಚೂರಿನ ಮಾಜಿ ಸಚಿವ ಎಂ.ಎಸ್.ಪಾಟೀಲ್ ಮೊಮ್ಮಗ ಶರಣಬಸಪ್ಪ ಪಾಟೀಲ್ ಎಂಜಿನಿಯರಿಂಗ್ ಓದಿದ್ದರೂ ಪಕ್ಕಾ ಕೃಷಿಕನಾಗಿದ್ದಾರೆ. ರಾಯಚೂರು ತಾಲೂಕಿನ ಏಗನೂರು ಗ್ರಾಮದಲ್ಲಿ ನೈಸರ್ಗಿಕ ಪದ್ಧತಿಯಲ್ಲಿ ತರಕಾರಿ ಬೆಳೆಗಳನ್ನ ಬೆಳೆದು ಪರಿಚಯಸ್ಥರಿಗೆ ಮಾರಾಟ ಮಾಡುತ್ತಿದ್ದಾರೆ. ನೈಸರ್ಗಿಕ ತರಕಾರಿ ಬಯಸುವವರು ಇವರ ಜಮೀನಿಗೆ ಬಂದು ಕೈಯಾರ ತರಕಾರಿ ತೆಗೆದುಕೊಂಡು ಹೋಗುತ್ತಾರೆ. ಹೋಂ ಡೆಲಿವರಿ ವ್ಯವಸ್ಥೆಯನ್ನು ಮಾಡಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದಿಟ್ಟು ಮೊಬೈಲ್ ಆ್ಯಪ್ ಮೂಲಕ ತಾಜಾ ನೈಸರ್ಗಿಕ ತರಕಾರಿ ಮಾರಾಟ ಮಾಡುವ ಯೋಚನೆಯಲ್ಲಿ ಈ ಯುವಕ ಇದ್ದಾರೆ.
Advertisement
Advertisement
ತಾತನ 10 ಎಕರೆ ಜಮೀನಿನಲ್ಲಿ ಹಸಿ ಮೆಣಸಿನಕಾಯಿ, ಟೊಮೇಟೊ, ಬದನೆಕಾಯಿ, ಬೆಂಡೆಕಾಯಿ, ಬೀನ್ಸ್, ಕಾಲಿಫ್ಲವರ್, ಮೆಂತ್ಯಪಲ್ಲೆ, ಕೊತ್ತಂಬರಿ ಪಲ್ಲೆ ಸೇರಿದಂತೆ ನಾನಾ ನಮೂನೆಯ ತರಕಾರಿ ಬೆಳೆ ಹಾಗೂ ಇತರ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಆರಂಭದಲ್ಲಿ ಅರ್ಧ ಎಕರೆ, ಒಂದು ಎಕರೆ ಹೀಗೆ ಹಂತ ಹಂತವಾಗಿ ನಾನಾ ತರಕಾರಿ ಬೆಳೆಗಳನ್ನ ಬೆಳೆಯಲು ಆರಂಭಿಸಿದ್ದು, ಎರಡು ಮೂರು ವರ್ಷಗಳಲ್ಲಿ ಈಗ ಐದು ಎಕರೆಯಲ್ಲಿ ತರಕಾರಿ ಬೆಳೆಯುತ್ತಿದ್ದಾರೆ. ಮುಂದೆ 10 ಎಕರೆಯಲ್ಲೂ ತರಕಾರಿ ಬೆಳೆಯುವ ಉದ್ದೇಶ ಹೊಂದಿದ್ದಾರೆ.
Advertisement
ರಾಸಾಯನಿಕ ಗೊಬ್ಬರ, ಕ್ರಿಮಿನಾಶಕಗಳನ್ನ ಬಳಕೆ ಮಾಡದೆ, ತಾವೇ ತಯಾರಿಸಿದ ಜೀವಾಮೃತ, ಅಗ್ನಿ ಅಸ್ತ್ರ, ನೀಮಾಸ್ತ್ರ, ಕಷಾಯಗಳನ್ನ ಬಳಸಿ ವ್ಯವಸಾಯ ಮಾಡುತ್ತಿದ್ದಾರೆ. ಇವರ ಜಮೀನಿನಲ್ಲಿ ಎಲ್ಲಿ ಮಣ್ಣನ್ನ ತೆಗೆದರೂ ರೈತನ ಮಿತ್ರ ಎರೆಹುಳುಗಳು ಸಿಗುತ್ತಿರುವುದೇ ಇವರ ನೈಸರ್ಗಿಕ ಕೃಷಿಗೆ ಸಾಕ್ಷಿಯಾಗಿದೆ. ಆದಾಯದ ವಿಷಯದಲ್ಲಿ ಸದ್ಯ ಅಷ್ಟೇನೂ ದೊಡ್ಡ ಮಟ್ಟದ ಲಾಭವಿಲ್ಲದಿದ್ದರೂ ಜನರಲ್ಲಿ ಆಸಕ್ತಿ ಹೆಚ್ಚುತ್ತಿದೆ. ಕೃಷಿ ಖರ್ಚು ಕಡಿಮೆಯಿದ್ದು, ನೈಸರ್ಗಿಕ ಪದ್ದತಿಯಲ್ಲಿ ಬೆಳೆದ ತರಕಾರಿ ಕೊಳ್ಳುವವರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ತರಕಾರಿ ಪ್ರತೀದಿನ ಕೊಳ್ಳುವ ಗ್ರಾಹಕರು ಖುಷಿ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಕೃಷಿಯನ್ನ ನಂಬಿ ಭೂತಾಯಿ ಸೇವೆಗೆ ಅಲ್ಲಲ್ಲಿ ಯುವಕರು ಮುಂದೆ ಬರುತ್ತಿರುವುದು ನಿಜಕ್ಕೂ ಉತ್ತಮ ಬೆಳವಣಿಗೆ. ಉದ್ಯೋಗ ಇಲ್ಲವೇ ವ್ಯಾಪಾರ ಮಾಡಿಕೊಂಡು ಒಳ್ಳೆಯ ಹಣ ದುಡಿಯುವ ಅವಕಾಶಗಳನ್ನ ಬಿಟ್ಟು ಶರಣಬಸಪ್ಪ ಪಾಟೀಲ್ ನೈಸರ್ಗಿಕ ಕೃಷಿಕನಾಗಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಅವರಿಗೆ ಯಶಸ್ಸು ದೊರೆಯಲಿ ಎನ್ನುವುದು ಎಲ್ಲರ ಆಶಯವಾಗಿದೆ.