ಬೆಂಗಳೂರು: ಕೊರೊನಾ ಲಾಕ್ಡೌನ್ನಿಂದ ಊರಿಗೆ ತೆರಳಿರುವ ಸಿಇಟಿ ಬರೆಯುತ್ತಿರೋ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಗುಡ್ ನ್ಯೂಸ್ ನೀಡಿದೆ.
ಹೌದು. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿದ್ಯಾರ್ಥಿಗಳು ಇರುವ ಕಡೆಯಲ್ಲೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿಕೊಟ್ಟಿದೆ. ಈ ನಿಟ್ಟಿನಲ್ಲಿ ಹೆಚ್ಚುವರಿಯಾಗಿ 75 ಕೇಂದ್ರಗಳನ್ನು ಹೊಸದಾಗಿ ಗುರುತಿಸಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು ತಾವು ಇರುವ ಹತ್ತಿರದ ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಬಹುದುದಾಗಿದೆ.
Advertisement
Advertisement
ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಪರೀಕ್ಷಾ ಕೇಂದ್ರ ಬದಲಾವಣೆ ಮಾಡಿಕೊಳ್ಳಲು ಎರಡು ದಿನಗಳ ಅವಕಾಶ ನೀಡಲಾಗಿದೆ. ಮೇ 20 ಸಂಜೆ 6 ಗಂಟೆಯಿಂದ ಮೇ 22ರ ಸಂಜೆ 6 ಗಂಟೆಯೊಳಗೆ ಅರ್ಜಿ ಸಲ್ಲಿಸಿ ಕೇಂದ್ರ ಬದಲಾವಣೆ ಮಾಡಿಕೊಳ್ಳಬಹುದು. ವಿದ್ಯಾರ್ಥಿಗಳು ಆದ್ಯತೆ ಮೇರೆಗೆ 3 ಆಯ್ಕೆ ಕೊಡಬೇಕು. ಈ ಮೂಲಕ ಪರೀಕ್ಷಾ ಕೇಂದ್ರದ ಲಭ್ಯತೆಯ ಆಧಾರದ ಮೇಲೆ ಪರೀಕ್ಷಾ ಪ್ರಾಧಿಕಾರವು ವಿದ್ಯಾರ್ಥಿಗಳಿಗೆ ಕೇಂದ್ರವನ್ನ ಹಂಚಿಕೆ ಮಾಡಲಿದೆ.
Advertisement
ಜುಲೈ 30, 31 ರಂದು ಸಿಇಟಿ ಪರೀಕ್ಷೆ ನಡೆಯಲಿದ್ದು, ಜುಲೈ 30 ಜೀವಶಾಸ್ತ್ರ, ಗಣಿತ ಪರೀಕ್ಷೆ ಇದ್ದರೆ ಜುಲೈ 31 ರಂದು ಭೌತಶಾಸ್ತ್ರ, ರಸಾಯನ ಶಾಸ್ತ್ರ ಪರೀಕ್ಷೆ ನಡೆಯಲಿವೆ. ಆಗಸ್ಟ್ 1ರಂದು ಹೊರನಾಡು – ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಕನ್ನಡ ಪರೀಕ್ಷೆ ನಡೆಯಲಿದೆ.
Advertisement
ಈ ಹಿಂದೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ್, ಜುಲೈ 30 ಮತ್ತು 31 ರಂದು ಸಿಇಟಿ ಪರೀಕ್ಷೆ ನಡೆಯಲಿದೆ. ಎಂದಿನಂತೆ ಆಫ್ ಲೈನ್ನಲ್ಲಿ ಈ ಬಾರಿಯೂ ಪರೀಕ್ಷೆ ನಡೆಯಲಿದ್ದು, ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಂಡು ಪರೀಕ್ಷೆ ನಡೆಸಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದ್ದರು.
ಸಿಇಟಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕಾಗುತ್ತದೆ. ಸಾಮಾಜಿಕ ಅಂತರವನ್ನು ಕಾಪಾಡಬೇಕಾಗಿರುವ ಕಾರಣ ಕೊಠಡಿಯಲ್ಲಿ ಕಡಿಮೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಕೂರಿಸಬೇಕಾಗುತ್ತದೆ. ಹೀಗಾಗಿ ಈ ಬಾರಿ ಪರೀಕ್ಷಾ ಕೇಂದ್ರಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ವಿವರಿಸಿದ್ದರು.