-ಸಮುದ್ರದ ಅಬ್ಬರಕ್ಕೆ ಕಡಲ ಕೊರೆತ
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಸಾಕಷ್ಟು ಹಾನಿಯಾಗಿದ್ದು ಕರಾವಳಿ, ಮಲೆನಾಡು ಭಾಗದ ಹಲವು ಪ್ರದೇಶಗಳಲ್ಲಿ ನೀರು ನುಗ್ಗಿ ನಷ್ಟ ತಂದೊಡ್ಡಿದೆ.
ಜಿಲ್ಲೆಯ ಕರಾವಳಿ ಭಾಗದ ಅಂಕೋಲದ ಗಂಗಾವಳಿ ನದಿ ತೀರ ಪ್ರದೇಶದಲ್ಲಿ ನೀರು ಪ್ರವಾಹದಿಂದ 15 ಕ್ಕೂ ಹೆಚ್ಚು ಮನೆಗಳಿಗೆ ಹಾಗೂ ಕೃಷಿ ಜಮೀನುಗಳಿಗೆ ನೀರು ನುಗ್ಗಿದೆ. ಯಲ್ಲಾಪುರ ತಾಲೂಕಿನ ಮಂಚಿಕೇರಿಯ ಸಂಪರ್ಕಿಸುವ ರಸ್ತೆ ಕೊಚ್ಚಿಹೋಗಿ ನಗರ ಸಂಪರ್ಕ ಕಡಿತಗೊಂಡಿದೆ. ಕುಮಟಾದ ಗೋಕರ್ಣ ದಲ್ಲಿ ಮಳೆಯ ನೀರಿನಿಂದ ರಸ್ತೆ ಸಂಪೂರ್ಣ ಆವರಿಸಿದ್ದು, ಸ್ಥಳೀಯ ದೇವಸ್ಥಾನ ಮುಳುಗಡೆಯಾಗಿದೆ. ಮಲೆನಾಡಿನ ಸಿದ್ದಾಪುರದಲ್ಲಿ ಸೋಮ ನದಿ ಹಾಗೂ ಸಮಸಾಳೆ ಹಳ್ಳ ತುಂಬಿ ಹರಿದಿದ್ದರಿಂದ ಇಲ್ಲಿನ ಬಿಳಗಿ, ಹೆಮ್ಮನಬೈಲಿನಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಕೃಷಿ ಜಮೀನುಗಳಿಗೆ ನೀರು ನುಗ್ಗಿದ್ದು ರಸ್ತೆ ಸಂಚಾರ ಸಹ ಬಂದ್ ಆಗಿದೆ.
Advertisement
Advertisement
ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಜೀವಹಾನಿ ಸಹ ಆಗಿದ್ದು ಪ್ರವಾಹದ ನೀರಿಗೆ ಕೊಚ್ಚಿಹೋಗಿದ್ದ ಹೊನ್ನಾವರದ ಸತೀಶ್ ನಾಯ್ಕ್ ಎಂಬವರು ಮೃತಪಟ್ಟಿದ್ದಾರೆ. ಮೃತ ಕುಟುಂಬಕ್ಕೆ ಐದು ಲಕ್ಷ ಪರಿಹಾರವನ್ನು ಜಿಲ್ಲಾಡಳಿತ ಘೋಷಿಸಿದೆ. ಕದ್ರಾ ಜಲಾಶಯದಿಂದ ಆರು ಗೇಟ್ ತೆರೆದಿದ್ದು 58 ಸಾವಿರ ಕ್ಯೂಸೆಕ್ಸ್ ನೀರು ಹೊರಬಿಡಲಾಗಿದೆ.
Advertisement
Advertisement
ಪ್ರವಾಹ ನಿಯಂತ್ರಣಕ್ಕೆ ಸಿದ್ಧತೆ: ಜಿಲ್ಲೆಯಲ್ಲಿ 17 ಗ್ರಾಮಗಳಿಗೆ ಮಳೆಯಿಂದ ಆತಂಕವಿದ್ದು, ಒಂದು ಮನೆಗೆ ಹಾನಿಯಾಗಿದೆ. 54 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಜಾನುವಾರುಗಳಿಗೆ ತೊಂದರೆಯಾಗಿಲ್ಲ. ಪ್ರಸ್ತುತ ಮಳೆ ಕಡಿಮೆಯಾಗಿದ್ದು, ಮುಂದಿನ ವಾರದಲ್ಲಿ ಮತ್ತೆ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ. ಜಿಲ್ಲೆಯಲ್ಲಿ ವ್ಯಾಪಕ ಮುಂಜಾಗ್ರತೆ ಕೈಗೊಂಡಿದ್ದು, ರೆವೆನ್ಯೂ ಅಧಿಕಾರಿಗಳು ಫೀಲ್ಡಲ್ಲಿದ್ದಾರೆ. ಎಸಿ, ಇಒ ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆದು ಒಂದು ವಾರದಲ್ಲಿ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ಸಭೆ ನಡೆಸಿದ್ದೇವೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ಹೇಳಿದ್ದಾರೆ.
ಕೆಪಿಸಿಎಲ್ನ ಸಭೆ ಕರೆದು, ಮುಂಜಾಗ್ರತಾ ಕ್ರಮವಾಗಿ ಮೊದಲೇ ನೀರು ಬಿಟ್ಟು ಡ್ಯಾಂನಲ್ಲಿ ಸ್ಟೋರೇಜ್ ಪ್ರಮಾಣ ಕಡಿಮೆ ಇರಿಸುತ್ತಿದ್ದೇವೆ. ಇದರಿಂದ ಮಳೆ ಬಂದರೂ ಜಿಲ್ಲೆಯಲ್ಲಿ ಪ್ರವಾಹ ನಿಯಂತ್ರಣವಾಗುತ್ತದೆ. ಶರಾವತಿ ನದಿಯಿಂದಲೂ ಪ್ರವಾಹ ಬಾರದಂತೆ ಯೋಜನೆ ಹಾಕಿದ್ದು, ಶರಾವತಿ, ಕಾಳಿ ನದಿಯ ಡ್ಯಾಂಗಳ ಅವಲೋಕನ ಮಾಡಲಾಗಿದ್ದು ಮುಂಜಾಗ್ರತೆ ಕೈಗೊಳ್ಳಲಾಗಿದೆ. ಸಿಎಂ ದೂರವಾಣಿ ಕರೆ ಮಾಡಿ ಪರಿಸ್ಥಿತಿ ಅವಲೋಕನ ಮಾಡಿದ್ದಾರೆ. ಕಂದಾಯ ಸಚಿವರು ಕೂಡಾ ಎರಡು ಬಾರಿ ಕರೆ ಮಾಡಿ ಸಹಕಾರ, ನೆರವು ಒದಗಿಸುವುದಾಗಿ ತಿಳಿಸಿದ್ದಾರೆ. ಹೊನ್ನಾವರ, ಕುಮಟಾ, ಅಂಕೋಲಾ, ಸಿದ್ಧಾಪುರದಲ್ಲಿ ಕಾಳಜಿ ಕೇಂದ್ರವನ್ನು ಅಗತ್ಯಕ್ಕೆ ತಕ್ಕಂತೆ ತೆರೆಯುತ್ತಿದ್ದು, ಇಂದು ಮುಚ್ಚಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ತಿಳಿಸಿದ್ದಾರೆ.
ಕೃತಕ ಪ್ರವಾಹ ಉಂಟಾದ್ರೆ ಅಧಿಕಾರಿಗಳೇ ಹೊಣೆಗಾರರು: ಜಲಾಶಯಗಳ ಹೆಚ್ಚುವರಿ ನೀರಿನಿಂದಾಗಿ ಕೃತಕ ಪ್ರವಾಹ ಉಂಟಾದಲ್ಲಿ ಕೆ.ಪಿ.ಸಿ ಅಧಿಕಾರಿಗಳನ್ನೆ ಹೊಣೆಗಾರರನ್ನಾಗಿ ಮಾಡಲಾಗುವದೆಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.