ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ಕೊರೊನಾ ಸೋಂಕಿತರ ಪ್ರಕರಣಗಳ ಜೊತೆಗೆ ಸಾವಿನ ಸಂಖ್ಯೆಯೂ ನಿಧಾನಗತಿಯಲ್ಲಿ ಏರಿಕೆಯಾಗುತ್ತಿದೆ. ಇಂದು ಇಬ್ಬರು ಕೊರೊನಾ ಸೋಂಕಿನಿಂದ ಮೃತಪಟ್ಟಿರುವುದಾಗಿ ಜಿಲ್ಲಾಡಳಿತ ತಿಳಿಸಿದೆ.
ಭಟ್ಕಳ ತಾಲೂಕಿನ ತೆಂಗಿನಗುಂಡಿ ಹೆಬಳೆಯ 45 ವರ್ಷದ ವ್ಯಕ್ತಿ ಹಲವು ವರ್ಷದಿಂದ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದು, ತಾಲೂಕು ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು. ಮಂಗಳವಾರ ಕೂಡ ಚಿಕಿತ್ಸೆಗೆ ಬಂದು ದಾಖಲಾಗಿದ್ದರು. ಆದರೆ ಆರೋಗ್ಯ ತೀರಾ ಹದಗೆಟ್ಟು ತಡರಾತ್ರಿ ಸಾವನ್ನಪ್ಪಿದ್ದರು. ನಿನ್ನೆಯೇ ಮೃತ ವ್ಯಕ್ತಿಯ ಗಂಟಲು ದ್ರವವನ್ನು ತೆಗೆದು ಪರೀಕ್ಷೆಗೆ ಕಳುಹಿಸಲಾಗಿದ್ದು, ಇಂದು ವರದಿಯಲ್ಲಿ ಸೋಂಕು ದೃಢಪಟ್ಟಿದೆ. ಸದ್ಯ ಮೃತನ ಕುಟುಂಬಸ್ಥರ, ಸಂಪರ್ಕಿತರ ಮಾಹಿತಿಯನ್ನು ತಾಲೂಕಾಡಳಿತ ಕಲೆ ಹಾಕುತ್ತಿದ್ದು, ಎಲ್ಲರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಿದೆ.
Advertisement
Advertisement
ಇನ್ನೊಂದು ಪ್ರಕರಣದಲ್ಲಿ ಅನಾರೋಗ್ಯದ ನಿಮಿತ್ತ ಮಂಗಳೂರಿನಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಭಟ್ಕಳ ಮೂಲದ 78 ವರ್ಷದ ಧರ್ಮಗುರುಗಳು ಮೃತಪಟ್ಟಿದ್ದಾರೆ. ಇವರಿಗೆ ಮೃತ ಸೋಂಕಿತ ನವವರನಿಂದಾಗಿ ಸೋಂಕು ತಗುಲಿತ್ತು. ಹೀಗಾಗಿ ಚಿಕಿತ್ಸೆ ಮುಂದುವರಿದಿತ್ತು. ಬಳಿಕ ಇವರ ಗಂಟಲು ದ್ರವದ ವರದಿ ಕೂಡ ನೆಗೆಟಿವ್ ಬಂದಿತ್ತು. ಆದರೆ ಇನ್ನಿತರ ಆರೋಗ್ಯ ಸಮಸ್ಯೆಯಿಂದಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈವರೆಗೆ ಭಟ್ಕಳದಲ್ಲಿ ಮೂವರು ಮೃತಪಟ್ಟಿದ್ದು ಜಿಲ್ಲೆಯಲ್ಲಿ 8 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ.