ಉಡುಪಿ: ಕೊರೊನಾ ಕರಾಳತೆಯಿಂದ ಹೊರಬಂದು ದೀಪಾವಳಿಗೆ ಪಟಾಕಿ ಸಿಡಿಸೋಣ ಅಂತ ಜನ ಹಾಕಿದ್ದ ಲೆಕ್ಕಾಚಾರ ಉಲ್ಟಾ ಆಗಿದೆ. ರಾಜ್ಯ ಸರ್ಕಾರ ರಾಸಾಯನಿಕ ಪಟಾಕಿ ನಿಷೇಧ ಮಾಡಿ, ದುಷ್ಪರಿಣಾಮ ರಹಿತ ಪಟಾಕಿಗೆ ಮಣೆ ಹಾಕಿದೆ. ನಿಮ್ಮ ಪಟಾಕಿ ರಗಳೆಯೇ ಬೇಡ ಅಂತ ಉಡುಪಿಯ ಪರ್ಕಳ ಫ್ರೆಂಡ್ಸ್ ತಾವೇ ಪಟಾಕಿ ತಯಾರು ಮಾಡಲು ಮುಂದಾಗಿದ್ದಾರೆ.
ಭೂಮಿ ಅದುರಿ ಬಾನು ಬಿರಿಯುವ ಪಟಾಕಿಗೆ ಈ ಬಾರಿ ಕೊರೊನಾ ಬ್ರೇಕ್ ಹಾಕಿದೆ. ಕಣ್ಣು ಬಿಡಲಾಗದ, ದಟ್ಟ ಹೊಗೆಯಿಂದ ಸುತ್ತಲ ಪರಿಸರ ನಾಶ ಮಾಡುವ ಪಟಾಕಿಯನ್ನು ಸಿಎಂ ಯಡಿಯೂರಪ್ಪ ಬ್ಯಾನ್ ಮಾಡಿದ್ದಾರೆ. ತಮಿಳ್ನಾಡು ಪಟಾಕಿಯೂ ಬೇಡ, ಹಸಿರು ಪಟಾಕಿಯೂ ಬೇಡ ಅಂತ ಉಡುಪಿಯ ಪರ್ಕಳ ಫ್ರೆಂಡ್ಸ್ ಬಿದಿರು ಪಟಾಕಿ ತಯಾರಿಸಿದ್ದಾರೆ.
Advertisement
Advertisement
ಪಕ್ಕದ ಖಾಲಿ ಜಮೀನಿನಲ್ಲಿದ್ದ ಬಿದಿರು ಕಡಿದು ಶುಚಿ ಮಾಡಿದ್ದಾರೆ. ಏಳು ಗಂಟು ಇರುವ ಒಂದು ತುಂಡು ಬಿದಿರು. ಬುಡದ ಒಂದು ಗಂಟು ಬಿಟ್ಟು ಒಂದು ಬದಿಯಲ್ಲಿ ರಂಧ್ರ ಕೊರೆಯಬೇಕು. ಬಿದಿರು ಕೋಲಿನ ಎಲ್ಲಾ ಗಂಟುಗಳನ್ನು ಬಿಡಿಸಿದರೆ ಬಿದಿರು ಪಟಾಕಿ ಅರ್ಧ ರೆಡಿ.
Advertisement
ಬಿದಿರನ್ನು ಅಡ್ಡ ಮಲಗಿಸಿ ರಂಧ್ರಕ್ಕೆ ಸ್ವಲ್ಪ ಸೀಮೆ ಎಣ್ಣೆ ಸುರಿದು, ಸೈಕಲ್ ಪಂಪ್ ನಲ್ಲಿ ಅದೇ ರಂಧ್ರಕ್ಕೆ ಗಾಳಿ ಹಾಕಿ, ಅದೇ ರಂಧ್ರದ ಮೇಲೆ ಬೆಂಕಿ ಸೋಕಿಸಿದರೆ ಸಾಕು ಢಂ..! ಎಂಬ ಶಬ್ದ ಬರುತ್ತದೆ. ಹೊಗೆಯಿಲ್ಲ, ರಾಶಿ ಕಸ ಇಲ್ಲ. ನಯಾ ಪೈಸೆ ಖರ್ಚಿಲ್ಲ. ಮತ್ತೆ ಎರಡು ಚಮಚ ಸೀಮೆಯೆಣ್ಣೆ ತುಂಬಿಸಿ ಗಾಳಿ ಹಾಕಿ ಬೆಂಕಿಯಿಟ್ಟರೆ ದಡಂ ಎಂಬ ಸದ್ದು. ಇದು ದೇಸಿ ಪಟಾಕಿ.
Advertisement
ಇದು ನಮ್ಮ ಪೂರ್ವಜರ ಕೊಡುಗೆ. 30-40 ವರ್ಷಗಳಿಂದ ಈ ಬಗ್ಗೆ ಯಾರಿಗೂ ಮಾಹಿತಿ ಇರಲಿಲ್ಲ. ಯಾರೂ ತಯಾರಿಸಿರಲಿಲ್ಲ. ಸ್ಥಳೀಯರೊಬ್ಬರು ಬಿದಿರು ಪಟಾಕಿ ತಯಾರಿಸುವ ಬಗ್ಗೆ ಐಡಿಯಾ ಕೊಟ್ಟರು. ಗ್ರಾಮೀಣ ಪ್ರದೇಶದಿಂದ ಬಿದಿರು ತಂದು ವೆಲ್ಡಿಂಗ್ ಶಾಪ್ ನಲ್ಲಿ ಅದಕ್ಕೆ ರಂಧ್ರ ಕೊರೆಸಿ ಪಕ್ಕಾ ದೇಸಿ ಪಟಾಕಿಯನ್ನು ಸಿದ್ಧ ಮಾಡಿದ್ದೇವೆ. ಸರ್ಕಾರದ ಆದೇಶವನ್ನು ಉಳಿಸಿದಂತಾಯ್ತು ನಮ್ಮ ಹಳೆಯ ಸಂಪ್ರದಾಯವನ್ನು ಮತ್ತೆ ನೆನಪಿಸಿಕೊಂಡದ್ದು ಆಯಿತು. ನಾವು ಪರ್ಕಳದ ಗೆಳೆಯರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದೇವೆ ಎಂದು ಗಣೇಶ್ ಪರ್ಕಳ ಮಾಹಿತಿ ನೀಡಿದರು.
ಬಿದಿರಲ್ಲಿ ಈ ಶಬ್ದ ಸೃಷ್ಟಿಯಾಗೋದು ಬಹಳ ಸಿಂಪಲ್. ಸೀಮೆಯೆಣ್ಣೆಯಿರುವ ಮುಚ್ಚಿದ ಬಿದಿರಿನೊಳಗೆ ಭಾರೀ ಪ್ರಮಾಣದಲ್ಲಿ ಗಾಳಿ ತುಂಬಿಕೊಂಡಾಗ ಬಿಸಿ ನಿರ್ಮಾಣವಾಗುತ್ತದೆ. ರಂಧ್ರದಿಂದ ಪೈಪ್ ತೆಗೆದು ಬೆಂಕಿ ಸೋಕಿಸಿದಾಗ ದೊಡ್ಡ ಶಬ್ದ ಸೃಷ್ಟಿಯಾಗುತ್ತದೆ. ಹಿಂದಿನ ಕಾಲದಲ್ಲಿ ಗದ್ದೆಗೆ ಬರುವ ಕಾಡು ಪ್ರಾಣಿಗಳನ್ನು ಓಡಿಸಲು ಈ ಟೆಕ್ನಿಕ್ ಬಳಸಲಾಗುತ್ತಿತ್ತು. ರಾಜ್ಯದಲ್ಲಿ ಹಸಿರು ಪಟಾಕಿ ಸ್ಪೋಟವಾಗುವ ಸಂದರ್ಭದಲ್ಲಿ ಉಡುಪಿಯಲ್ಲಿ ಬಿದಿರು ಪಟಾಕಿ ಸೌಂಡು ಮಾಡುತ್ತಿದೆ.