ಬೆಂಗಳೂರು: ರಾಜಧಾನಿ ಸೇರಿದಂತೆ ರಾಜ್ಯದ ಹಲವೆಡೆ ದಿಢೀರ್ ಮಳೆಯಾಗಿದೆ. ಉಡುಪಿ, ಚಿಕ್ಕಮಗಳೂರು, ಬೆಂಗಳೂರಿನಲ್ಲಿ ಮಳೆ ಆಗುತ್ತಿದೆ. ಉಡುಪಿ ಭಾಗದಲ್ಲಿ ಗುಡುಗು ಸಹಿತ ಅರ್ಧ ಗಂಟೆ ಮಳೆ ಸುರಿದಿದೆ. ಚಿಕ್ಕಮಗಳೂರಿನ ಮಲೆನಾಡಿನ ಭಾಗದಲ್ಲಾದ ಮಳೆ ಮಲೆನಾಡಿಗರ ಮೊಗದಲ್ಲಿ ಮಂದಹಾಸ ತರಿಸಿದೆ.
ಇಂದು ಸಂಜೆ ಏಕಾಏಕಿ ಮೋಡ ಕವಿದು ಭಾರಿ ಗಾಳಿ ಮಳೆ ಬಿದ್ದಿದೆ. ಮಳೆಯ ರಭಸಕ್ಕೆ ಬ್ರಹ್ಮಾವರ ತಾಲೂಕು ಸಮೀಪದ ಸಂತೆಕಟ್ಟೆಯಲ್ಲಿ ಬೃಹತ್ ಮರವೊಂದು ಉರುಳಿ ಬಿದ್ದಿದೆ. ಕಳೆದೆರಡು ದಿನಗಳಿಂದ ವಿಪರೀತ ಬಿಸಿಲು ಇತ್ತು. ಸಂಜೆಯಾಗುತ್ತಿದ್ದಂತೆ ಪೂರ್ವದಿಕ್ಕಿನಲ್ಲಿ ಕಾರ್ಮೋಡ ಆವರಿಸಿ, ಕ್ಷಣಮಾತ್ರದಲ್ಲಿ ಗುಡುಗು ಸಿಡಿಲು ಸಹಿತ ವ್ಯಾಪಕ ಮಳೆಯಾಗಿದೆ.
Advertisement
Advertisement
ಸುಮಾರು ಅರ್ಧ ಗಂಟೆಗಳ ಕಾಲ ಸುರಿದ ಮಳೆಯಿಂದ ನಗರವಾಸಿಗಳ ಜೀವನ ಅಸ್ತವ್ಯಸ್ತವಾಯ್ತು. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಮುಂದಿನ ಎರಡು ದಿನಗಳ ಕಾಲ ಸಾಧಾರಣ ಮಳೆ ಬೀಳಲಿದೆ. ಭಾರೀ ಗಾಳಿ ಮಳೆ ಬಂದ ಕಾರಣ ವಾತಾವರಣ ತಂಪಾಗಿದೆ.
Advertisement
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಮೂಡಿಗೆರೆ, ಕಳಸ, ಬಾಳೆಹೊನ್ನೂರಲ್ಲಿ ಒಂದು ಗಂಟೆಗೂ ಅಧಿಕ ಕಾಲ ಮಳೆಯಾಗಿದೆ. ದಿಢೀರ್ ಆರಂಭವಾದ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತು.
Advertisement
ಬೆಂಗಳೂರಿನ ಯಶವಂತಪುರ, ಮತ್ತಿಕೆರೆ, ಹೆಬ್ಬಾಳ, ಯಲಹಂಕ, ಸುಂಕದಕಟ್ಟೆ, ವಿಜಯನಗರ ರಾಜಾಜಿನಗರ ಸೇರಿದಂತೆ ಹಲವೆಡೆ ತುಂತುರು ಮಳೆಯಾಗಿದೆ. ಇಂದು ಮಧ್ಯಾಹ್ನದಿಂದಲೇ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು.
ಆಂಧ್ರಪ್ರದೇಶದಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಮಳೆಯಾಗಲಿದೆ. ರಾಜ್ಯದಲ್ಲಿ ಸಾಧರಾಣದಿಂದ ಹಗುರ ಮಳೆಯಾಗುವ ಸಾಧ್ಯತೆ ಇದೆ. ಆದರೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆ ಹೆಚ್ಚಿರುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು ನಗರ, ಮೈಸೂರು, ಶಿವಮೊಗ್ಗ, ಹಾಸನ, ಕೊಡಗು, ಚಾಮರಾಜ ನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಮಂಡ್ಯ, ತುಮಕೂರಿನಲ್ಲಿ ಮುಂದಿನ ಮೂರು ದಿನ ಮಳೆ ಜೋರಿರಲಿದೆ. ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಹಗುರ ಮಳೆಯಾಗಲಿದೆ ಎಂದು ಪಬ್ಲಿಕ್ ಟಿವಿಗೆ ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್ ಪಾಟೀಲ್ ತಿಳಿಸಿದ್ದಾರೆ.