ಬೆಂಗಳೂರು: ಮಹಾತ್ಮ ಗಾಂಧಿ ಸೇವಾ ಟ್ರಸ್ಟ್ ಆಶ್ರಯದಲ್ಲಿ ಕೋವಿಡ್ ನಿಂದ ಪೋಷಕರನ್ನ ಕಳೆದುಕೊಂಡು ಅನಾಥರಾದ ಮಕ್ಕಳ ವಿದ್ಯಾಭ್ಯಾಸ ಹಾಗೂ ಉದ್ಯೋಗದ ಜವಾಬ್ದಾರಿಯನ್ನ ತೆಗೆದುಕೊಳ್ಳುವ ನಿಟ್ಟಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಆಯೋಜಿಸಿದ್ದ ನೀವು ಅನಾಥರಲ್ಲ ಕಾರ್ಯಕ್ರಮಕ್ಕೆ ಕಂದಾಯ ಸಚಿವ ಆರ್ ಅಶೋಕ್ ಚಾಲನೆ ನೀಡಿದರು.
Advertisement
ಈ ವೇಳೆ ಮಾತನಾಡಿದ ಸಚಿವ ಅಶೋಕ್, ಟ್ರಸ್ಟ್ ನ ಸಂಸ್ಥಾಪಕರಾದ ವಿನಯ್ ಗುರೂಜಿಯವರು ಮಹತ್ಕಾರ್ಯವನ್ನು ಮಾಡುತ್ತಿದ್ದಾರೆ. ಇಲ್ಲಿ ಯಾರೂ ಅನಾಥರಲ್ಲ. ನಾವೆಲ್ಲಾ ಬಂಧುಗಳಿದ್ದಂತೆ. ಇದೊಂದು ಸಂಕಷ್ಟದ ಕಾಲ. ಈ ಸಮಯದಲ್ಲಿ ನಾವು ಮಾಡುವ ಚಿಕ್ಕ ಪುಟ್ಟ ನೆರವು ಕೂಡಾ ಕಷ್ಟದಲ್ಲಿರುವವರಿಗೆ ಆಸರೆಯಾಗುತ್ತದೆ. ಸರ್ಕಾರ ಕೂಡಾ ನೋವಿನಲ್ಲಿರುವವರಿಗೆ ಜೊತೆಯಾಗಲು ಎಲ್ಲ ಸಹಾಯವನ್ನ ಮಾಡುತ್ತಿದೆ. ಈಗಾಗಲೇ ಮುಖ್ಯಮಂತ್ರಿಗಳು ಸೋಂಕಿನಿಂದ ಪ್ರಾಣ ಕಳೆದುಕೊಂಡ ಬಿಪಿಎಲ್ ಕುಟುಂಬದ ಒಬ್ಬ ಸದಸ್ಯರಿಗೆ 1 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ನಾನು ಕೂಡಾ ನನ್ನ ಕ್ಷೇತ್ರದಲ್ಲಿ ವೈಯಕ್ತಿಕವಾಗಿ ನೆರವಾಗುವ ಕಾರ್ಯಗಳನ್ನ ಮಾಡುತ್ತಿದ್ದೇನೆ.
Advertisement
Advertisement
ನಾನಾ ಕಾರಣಗಳಿಂದ ಸಂಬಂಧಿಗಳು ಮುಂದೆ ಬರದಿದ್ದಾಗ ನೂರಾರು ಜನರ ಅಸ್ಥಿಗಳನ್ನ ಕಾವೇರಿಯಲ್ಲಿ ವಿಸರ್ಜನೆ ಮಾಡಿ ಬಂದೆ. ನಾವು ಆತ್ಮಸಾಕ್ಷಿಗೆ ಅನುಗುಣವಾಗಿ ಮಾನವೀಯತೆಯಿಂದ ನಡೆದುಕೊಳ್ಳಬೇಕಾದ ಕಾಲ. ಯಾವುದೇ ರೀತಿಯಲ್ಲಿ ಸಹಾಯ ಮಾಡಿದರು ಅದು ದೇವರ ಕಾರ್ಯ. ಗುರೂಜಿಯವರ ಆಶೀರ್ವಾದ ಹಾಗೂ ಮಾರ್ಗದರ್ಶನದಲ್ಲಿ ಅವರ ಅನುಯಾಯಿಗಳು ಮಾಡುತ್ತಿರುವ ಈ ಕಾರ್ಯ ಎಲ್ಲರಿಗೂ ಪ್ರೇರಣೆಯಾಗಲಿ ಎಂದು ಹೇಳಿದರು.
Advertisement
ಟ್ರಸ್ಟ್ ನ ಸಂಸ್ಥಾಪಕರಾದ ಅವಧೂತ ಶ್ರೀ ವಿನಯ್ ಗುರೂಜಿ ಮಾತನಾಡಿ, ಇದೊಂದು ಅನಿರೀಕ್ಷಿತ ಸಂದರ್ಭ. ನಾವೆಲ್ಲಾ ಸರ್ಕಾರದ ಜೊತೆಗೆ, ಸರ್ಕಾರದಂತೆಯೇ ಕೆಲಸ ಮಾಡಬೇಕಿದೆ. ಇಂತಹ ನೂರು ಸಮಸ್ಯೆಗಳು ಬಂದರು ನಾವೆಲ್ಲಾ ಜೊತೆಯಾಗಿ ನಿಂತು ಪರಿಹರಿಸಬೇಕು. ಈಗಾಗಲೇ ಟ್ರಸ್ಟ್ ವತಿಯಿಂದ ಅನ್ನ ಅಭಿಯಾನ, ಔಷಧಿ ಅಭಿಯಾನ, ರೈತ ನಿಧಿ, ವಿಧವಾ ನಿಧಿ, ಮಂಗಳಮುಖಿಯರಿಗೆ ಸುಹಾಸಿನಿ ಕಾರ್ಯಕ್ರಮ, ಕಾಡು ಪ್ರಾಣಿಗಳಿಗೆ ನೀರು ನೀಡುವುದು ಹೀಗೆ ನಾನಾ ಕಾರ್ಯಗಳನ್ನ ಮಾಡುತ್ತಿದ್ದೇವೆ. ಇದನ್ನೂ ಓದಿ: ಅರ್ಜಿ ಸಲ್ಲಿಸದೇ ವೃದ್ಧಾಪ್ಯ ವೇತನ ಮನೆ ಬಾಗಿಲಿಗೆ: ಆರ್.ಅಶೋಕ್
ಅದರ ಮುಂದುವರೆದ ಭಾಗವಾಗಿ ಪೋಷಕರನ್ನ ಕಳೆದುಕೊಂಡ ಪ್ರತಿ ಜಿಲ್ಲೆಯಲ್ಲಿಯೂ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಹಾಗೂ ಮದುವೆ ಮತ್ತು ಗಂಡು ಮಕ್ಕಳಿಗೆ ವಿದ್ಯೆ ಮತ್ತು ಉದ್ಯೋಗದ ಜವಾಬ್ದಾರಿ ತೆಗೆದುಕೊಳ್ಳಬೇಕೆಂದು ನಿರ್ಧರಿಸಲಾಯಿತು. ಈ ಕುರಿತಂತೆ ಹಲವು ಕಂಪನಿಗಳ ಜೊತೆ ಮಾತನಾಡಿ ಕೈ ಜೋಡಿಸಲು ಕರೆ ನೀಡಲಾಗಿದೆ. ಸಮಸ್ಯೆಗಳು ಬರುತ್ತಲೇ ಇರುತ್ತವೆ. ಅವುಗಳನ್ನ ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳುವುದು ಅಗತ್ಯ, ಎಂದರು.
ಮಹಾತ್ಮ ಗಾಂಧಿ ಸೇವಾ ಟ್ರಸ್ಟ್ ಆಶ್ರಯದಲ್ಲಿ ಪೂಜ್ಯರಾದ ಅವಧೂತ ಶ್ರೀ ವಿನಯ್ ಗುರೂಜಿ ಅವರ ಅನುಯಾಯಿಗಳು ಮಾಡುತ್ತಿರುವ ಸೇವಾ ಕಾರ್ಯಕ್ಕೆ ಇಂದು ದೊಡ್ಡಬಳ್ಳಾಪುರದಲ್ಲಿ ಚಾಲನೆ ನೀಡಲಾಯಿತು. ಕೋವಿಡ್ ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ವಿಧ್ಯಾಭ್ಯಾಸ ಹಾಗೂ ಉದ್ಯೋಗಾವಕಾಶ ಕಲ್ಪಿಸುವ ಮಹತ್ಕಾರ್ಯವನ್ನು ಗುರೂಜಿ ಅವರು ಮಾಡುತ್ತಿದ್ದಾರೆ.(1/2) pic.twitter.com/pbVpO0KoOX
— R. Ashoka (ಆರ್. ಅಶೋಕ) (@RAshokaBJP) June 15, 2021
ಈ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎಂ ಕೃಷ್ಣಪ್ಪ, ದೊಡ್ಡಬಳ್ಳಾಪುರ ಶಾಸಕ ಟಿ ವೆಂಕಟರಮಣಯ್ಯ, ಟ್ರಸ್ಟ್ ನ ಅಧ್ಯಕ್ಷರಾದ ಬೇಳೂರು ರಾಘವೇಂದ್ರ ಶೆಟ್ಟಿ, ಬಿಜೆಪಿ ಮುಖಂಡರಾದ ಧೀರಜ್ ಮುನಿರಾಜು, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ ಶ್ರೀನಿವಾಸ್ ಉಪಸ್ಥಿತರಿದ್ದರು.