– ಪಬ್ಲಿಕ್ ಟಿವಿ ಅಭಿಯಾನದ ಎಫೆಕ್ಟ್
ಬೆಂಗಳೂರು: ಬಿಎಂಟಿಸಿ ಟಿಕೆಟ್ ವ್ಯವಸ್ಥೆ ಮಾಡಬೇಕು ಎಂದು ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದು, ಈ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ಈ ವರದಿಯ ಬೆನ್ನಲ್ಲೇ ಬಿಎಂಟಿಸಿ ಇಂದಿನಿಂದ ಪ್ರಯಾಣಿಕರಿಗೆ ಟಿಕೆಟ್ ನೀಡಲು ಶುರು ಮಾಡಿದೆ. ಹೀಗಾಗಿ ಇವತ್ತಿನಿಂದ ಪ್ರಯಾಣಿಕರು ಬಿಎಂಟಿಸಿಯಲ್ಲಿ ಟಿಕೆಟ್ ಪಡೆದು ಪ್ರಯಾಣಿಸಬಹುದು.
ಈಗಾಗಲೇ ಬಿಎಂಟಿಸಿ ಬಸ್ಗಳ ಓಡಾಟ ಶುರುವಾಗಿದ್ದು, ಪಾಸ್ ಇದ್ದವರಿಗಷ್ಟೇ ಅಲ್ಲ, ಟಿಕೆಟ್ ಪಡೆದೂ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಅಷ್ಟೇ ಅಲ್ಲದೇ ಇವತ್ತಿನಿಂದ ಹೆಚ್ಚುವರಿಯಾಗಿ 4 ಸಾವಿರ ಬಿಎಂಟಿಸಿ ಬಸ್ಗಳ ಸಂಚಾರ ಆರಂಭ ಮಾಡುತ್ತಿವೆ.
Advertisement
Advertisement
ಲಾಕ್ಡೌನ್ ಬಳಿಕ ಪ್ರಯಾಣಿಕರಿಗೆ ಅನುಕೂಲವಾಗಲಿ ಅಂತ ಸರ್ಕಾರ ಬೆಂಗಳೂರಲ್ಲಿ ಬಿಎಂಟಿಸಿ ಬಸ್ ಓಡಿಸಲು ನಿರ್ಧಾರ ಮಾಡಿತ್ತು. ಕಳೆದ 8 ದಿನಗಳಿಂದ ಟಿಕೆಟ್ ವಿತರಣೆ ಮಾಡದೇ ದೈನಂದಿನ ಪಾಸ್ ತೆಗೆದುಕೊಂಡು ಬಸ್ ಹತ್ತಲು ಹೇಳಿತ್ತು. ದಿನದ ಪಾಸ್ 70 ರುಪಾಯಿ, ವಾರದ ಪಾಸ್ 300 ರುಪಾಯಿ, ತಿಂಗಳ ಪಾಸ್ 1,150 ರುಪಾಯಿ ಅಂತ ನಿಗದಿ ಮಾಡಿದ್ದರು. ಇದರಿಂದ ಜನ ಸಾಮಾನ್ಯರು ತೊಂದರೆ ಅನುಭವಿಸಿದ್ದೇ ಹೆಚ್ಚು. ಕೇವಲ 5 ರೂಪಾಯಿ ಕೊಟ್ಟು ಹೋಗಬೇಕಾದ ಸ್ಥಳಕ್ಕೆ 70 ರೂಪಾಯಿ ಕೊಡಬೇಕು ಅಂದರೆ ಹೇಗೆ ಅಂತ ಜನ ಆರಂಭದ ದಿನಂದಲೇ ಆಕ್ರೋಶ ಹೊರಹಾಕಿದ್ದರು.
Advertisement
Advertisement
ಪ್ರಯಾಣಿಕರ ಸಮಸ್ಯೆ ಅರಿತ ಪಬ್ಲಿಕ್ ಟಿವಿ ಅವರ ನೋವಿಗೆ ಧ್ವನಿಯಾಗಿ ಈ ಬಗ್ಗೆ ನಿರಂತರವಾಗಿ ವರದಿ ಬಿತ್ತರಿಸಿತ್ತು. ಆದರೂ ಪ್ರಯಾಣದರ ಕಡಿಮೆಯಾಗಲೇ ಇಲ್ಲ. ಪಬ್ಲಿಕ್ ಟಿವಿ ವರದಿಯ ಬೆನ್ನಲ್ಲೆ ಮಣಿದ ಸರ್ಕಾರ ಹಾಗೂ ಬಿಎಂಟಿಸಿ ಆಡಳಿತ ದುಬಾರಿ ದರಕ್ಕೆ ಬ್ರೇಕ್ ಹಾಕಿದೆ. ದಿನದ ಪಾಸ್ ದರವನ್ನು 70 ರೂಪಾಯಿಯಿಂದ 50 ರೂಪಾಯಿಗೆ ಇಳಿಕೆ ಮಾಡಿದೆ. ಜೊತೆಗೆ ಟಿಕೆಟ್ಗಳನ್ನು ವಿತರಿಸಲು ಒಪ್ಪಿಗೆ ನೀಡಿದ್ದಾರೆ. ಸ್ಟೇಜ್ಗಳ ಆಧಾರದ ಮೇಲೆ ಟಿಕೆಟ್ ದರ ನಿಗದಿ ಮಾಡಲಾಗಿದೆ. ಜೊತೆಗೆ ಅಗತ್ಯ ಇದ್ದರೆಷ್ಟೇ ಪ್ರಯಾಣ ಮಾಡಿ, ಟಿಕೆಟ್ಗೆ ಸರಿ ಹೋಗುವಷ್ಟು ಚಿಲ್ಲರೆ ತನ್ನಿ. ಮಾಸ್ಕ್, ಗ್ಲೌಸ್ ಧರಿಸಿ ಎಂದು ಮನವಿ ಮಾಡಿಕೊಂಡಿದೆ.
ಇನ್ಮುಂದೆ ಪ್ರಯಾಣಿಕರು ಕ್ಯೂ ಆರ್ ಕೋಡ್, ಗೂಗಲ್ ಪೇ, ಫೋನ್ ಪೇ ಮೂಲಕವೂ ಹಣ ಪಾವತಿಸಬಹುದಾಗಿದೆ. 1000 ಬಸ್ಗಳಲ್ಲಿ ಕ್ಯೂ ಆರ್ ಕೋಡ್ ಅಳವಡಿಸಲಾಗುದೆಂದು ಬಿಎಂಟಿಸಿ ಎಂಡಿ ಶಿಖಾ ಹೇಳಿದ್ದಾರೆ.
ಬಿಎಂಟಿಸಿ ಪ್ರಯಾಣಿಕರು ಕಳೆದ ಒಂದು ವಾರದಿಂದ ಸಂಚಾರ ಮಾಡಲು ಕಷ್ಟ ಪಡುತ್ತಿದ್ದರು. ಆದರೆ ಪಬ್ಲಿಕ್ ಟಿವಿ ಸುದ್ದಿ ಪ್ರಸಾರ ಬೆನ್ನಲ್ಲೇ ಎಚ್ಚೆತ್ತ ಬಿಎಂಟಿಸಿ ಪಾಸ್ ದರವನ್ನು ಇಳಿಸಿ, ಮತ್ತಷ್ಟು ವಿವಿಧ ಪಾಸ್ಗಳನ್ನ ನೀಡುವ ತೀರ್ಮಾನ ಮಾಡಿದೆ. ಇಂದಿನಿಂದ ಪ್ರಯಾಣಿಕರು ಯಾವುದೇ ಹೊರೆ ಇಲ್ಲದೆ ಓಡಾಟ ಮಾಡುವ ಅವಕಾಶ ಸಿಕ್ಕಿದೆ.