ಹುಬ್ಬಳ್ಳಿ: ಲಾಕ್ಡೌನ್ ಪೂರ್ವದಲ್ಲಿಯೇ ಧ್ಯಾನ ಅಧ್ಯಯನಕ್ಕಾಗಿ ಆಸ್ಟ್ರೇಲಿಯಾ ದೇಶದಿಂದ ಹುಬ್ಬಳ್ಳಿಗೆ ಆಗಮಿಸಿದ ಮಹಿಳೆಯನ್ನು ಇಂದು ಹುಬ್ಬಳ್ಳಿಯಿಂದ ಬೆಂಗಳೂರು, ದೆಹಲಿ ಮಾರ್ಗವಾಗಿ ಆಸ್ಟ್ರೇಲಿಯಾ ದೇಶಕ್ಕೆ ತಲುಪಿಸುವ ಕಾರ್ಯಕ್ಕೆ ಧಾರವಾಡ ಜಿಲ್ಲಾಡಳಿತ ಮುಂದಾಗಿದೆ. ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ನೇತೃತ್ವದಲ್ಲಿಂದು ಖಾಸಗಿ ವಾಹನದಲ್ಲಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಮಹಿಳೆಯನ್ನು ಕಳಿಸಿ ಕೊಡಲಾಗಿದೆ.
ಮೈಶಿಯಾನ್ ನಿಯಾಂಗ್ ಅವರು ಮೂರು ತಿಂಗಳ ಹಿಂದೆಯಷ್ಟೇ ಹುಬ್ಬಳ್ಳಿಗೆ ಆಗಮಿಸಿದ್ದು, ಲಾಕ್ಡೌನ್ ಘೋಷಣೆಯಿಂದಾಗಿ ಹುಬ್ಬಳ್ಳಿಯ ರೇಣುಕಾ ಲಾಡ್ಜ್ ನಲ್ಲಿ ವಾಸ್ತವ್ಯ ಹೂಡಿದ್ದರು. ನಿನ್ನೆಯಷ್ಟೇ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ತಮ್ಮ ಅಳಲನ್ನು ತೋಡಿಕೊಂಡಿದ್ದರು. ಮಹಿಳೆಯ ಸಮಸ್ಯೆಯನ್ನು ಆಲಿಸಿದ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಅವರಿಗೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಎಸ್ಪಿ ವರ್ತಿಕಾ ಕಟಿಯಾರ್ ಅವರು ಆಸ್ಟ್ರೇಲಿಯಾಕ್ಕೆ ಕಳಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ಇಂದು ಅವರನ್ನು ಕಳಿಸಿಕೊಡಲಾಯಿತು.
Advertisement
Advertisement
ಈ ಕುರಿತು ಮಾಧ್ಯಮದ ಜೊತೆಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್, ಸುಮಾರು ಮೂರು ತಿಂಗಳ ಹಿಂದೆಯಷ್ಟೇ ಮಹಿಳೆ ಆಧ್ಯಾತ್ಮಿಕ ಧ್ಯಾನ ಯೋಗ ಕಲಿಕೆಯ ಹಿನ್ನೆಲೆಯಲ್ಲಿ ಹುಬ್ಬಳ್ಳಿಗೆ ಆಗಮಿಸಿದ್ದರು. ಲಾಕ್ಡೌನ್ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಉಳಿದುಕೊಂಡಿದ್ದರು. ನಿನ್ನೆ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಇಂದು ಕ್ಯಾಬ್ ಮೂಲಕ ಬೆಂಗಳೂರಿಗೆ ಕಳಿಸಲಾಗುತ್ತಿದೆ. ಬಳಿಕ ಮಹಿಳೆಯು ಬೆಂಗಳೂರಿನಿಂದ ದೆಹಲಿ ಹಾಗೂ ದೆಹಲಿಯಿಂದ ಆಸ್ಟ್ರೇಲಿಯಾಗೆ ತೆರಳಿಲಿದ್ದಾರೆ ಎಂದು ತಿಳಿಸಿದರು.
Advertisement
ದೆಹಲಿಯಲ್ಲಿ ನಮ್ಮ ಸ್ನೇಹಿತರಿದ್ದು, ಅವರ ಮೂಲಕ ಆಸ್ಟ್ರೇಲಿಯಾ ದೇಶಕ್ಕೆ ಕಳಿಸಿಕೊಡಲಾಗುತ್ತದೆ. ಅಲ್ಲದೇ ಮಹಿಳೆಗೆ ನಮ್ಮ ಸಿಬ್ಬಂದಿಗಳು ಕೂಡ ಆರ್ಥಿಕ ಸಹಾಯ ಮಾಡಿದ್ದೇವೆ ಎಂದರು. ಈ ಸಂದರ್ಭದಲ್ಲಿ ಡಿಸಿಪಿ ಪಿ.ಕೃಷ್ಣಕಾಂತ, ಗ್ರಾಮೀಣ ಪೊಲೀಸ್ ಸಿಪಿಐ ಡಿಸೋಜಾ, ಉಪನಗರ ಠಾಣೆಯ ಸಿಪಿಐ ಸುಂದರೇಶ ಹೊಳೆಣ್ಣವರ ಸೇರಿದಂತೆ ಇತರರು ಉಪಸ್ಥಿತರಿದ್ದರು.