ತುಮಕೂರು: ಇಂದು ಪ್ರಮಾಣವಚನ ಸ್ವೀಕರಿಸಿದ ನೂತನ ಸಚಿವ ಬಿ.ಸಿ.ನಾಗೇಶ್ ಅವರು ಅಚ್ಚರಿಯ ಆಯ್ಕೆಯಾಗಿದ್ದು, ಹೊಸಬರಿಗೆ ಅವಕಾಶ ನೀಡಬೇಕೆಂಬ ಉದ್ದೇಶದಿಂದ ಬಿಜೆಪಿ ಹೈಮಾಂಡ್ ಈ ನಿರ್ಧಾರ ಕೈಗೊಂಡಿದೆ ಎಂಬ ಚರ್ಚೆ ನಡೆಯುತ್ತಿದೆ. ಆದರೆ ಬಿ.ಇ ಪದವೀಧರರಾಗಿರುವ ನೂತನ ಸಚಿವ ಬಿ.ಸಿ ನಾಗೇಶ್ ಅವರು ತಳಮಟ್ಟದ ಕಾರ್ಯಕರ್ತರಾಗಿ ಬೆಳೆದು ಬಂದ ರೀತಿ ಅಭೂತಪೂರ್ವವಾದುದು.
Advertisement
ವಿಧ್ಯಾರ್ಥಿಯಾಗಿದ್ದ ದಿನಗಳಲ್ಲೇ ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟದಲ್ಲಿ ಸೆರೆಮನೆ ವಾಸ ಅನುಭವಿಸಿದ್ದ ಇವರು, ನಂತರದ ದಿನಗಳಲ್ಲಿ ಎಬಿವಿಪಿ ಬೆಂಗಳೂರು ವಿಭಾಗದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಆರ್ಎಸ್ಎಸ್ ಸ್ವಯಂಸೇವಕರಾಗಿ, ನಂತರದ ದಿನಗಳಲ್ಲಿ ಸಂಘದ ಪ್ರಚಾರಕ್ ಆಗಿ(ಪೂರ್ಣಾವಧಿ ಕಾರ್ಯಕರ್ತ) ಸೇವೆ ಸಲ್ಲಿಸಿ, ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷರಾದರು.
Advertisement
Advertisement
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿರ್ವಹಿಸಿದ ಇವರು 2008ರಲ್ಲಿ ತಿಪಟೂರು ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದರು. 2013ರ ಚುನಾವಣೆಯಲ್ಲಿ ಸೋಲನ್ನನುಭವಿಸಿದ ಇವರು, 2018ರ ವಿಧಾನಸಭಾ ಚುನಾವಣೆಯಲ್ಲಿ 25 ಸಾವಿರಕ್ಕೂ ಹೆಚ್ಚು ಮತಗಳಿಂದ ಶಾಸಕರಾಗಿ ಆಯ್ಕೆಯಾದರು. ಸರಳ-ಸಜ್ಜನಿಕೆಗೆ ಹೆಸರುವಾಸಿಯಾಗಿರುವ, ಸಾಮಾನ್ಯ ಜನರ ಸಂಕಷ್ಟಕ್ಕೆ ಸದಾ ಸ್ಪಂದಿಸುವ ನಾಗೇಶ್ ಅವರನ್ನು ಇದೀಗ ಪ್ರಥಮ ಬಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸಂಪುಟದಲ್ಲಿ ಸಚಿವ ಸ್ಥಾನ ನೀಡಲಾಗಿದೆ. ಇದು ಜಿಲ್ಲೆಯ ಜನರಿಗೆ ಹೆಮ್ಮೆಯನ್ನುಂಟು ಮಾಡಿದೆ.