– ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದವರಿಗಾಗಿ ಹುಡುಕಾಟ
ಕೋಲಾರ: ಮಧುಮೇಹಕ್ಕೆ ಆಸ್ಪತ್ರೆಗೆ ದಾಖಲಾದ ಮಹಿಳೆ ಶಂಕಿತ ಕೊರೊನಾ ರೋಗದಿಂದ ಮೃತಪಟ್ಟಿದ್ದಾಳೆ. ವಿಶೇಷತೆ ಎಂದರೆ ಪರೀಕ್ಷಾ ವರದಿ ಆಕೆಯ 11ನೇ ದಿನದ ತಿಥಿ ಕಾರ್ಯದ ದಿನ ಬಂದಿದೆ. ಮತ್ತೊಬ್ಬರ ವರದಿ 13 ದಿನದ ಬಳಿಕ ಬಂದಿದ್ದು ಪ್ರಾಥಮಿಕ ಸಂಪರ್ಕಿತರಲ್ಲಿ ಸೋಂಕು ತಗುಲಿರುವ ಆತಂಕ ಎದುರಾಗಿದೆ.
ಕಳೆದ ಹನ್ನೊಂದು ದಿನಗಳ ಹಿಂದೆ ಅಂದರೆ ಜುಲೈ 14ರಂದು ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದ ಕೋಲಾರದ ಗಾಂಧಿನಗರದ 50 ವರ್ಷದ ಮಹಿಳೆಯೊಬ್ಬಳು ಮಧುಮೇಹದಿಂದ ಮೃತಪಟ್ಟಿದ್ದರು. ಈ ವೇಳೆ ಮೃತರಿಗೆ ಕೋವಿಡ್ ಪರೀಕ್ಷೆಗೆ ಗಂಟಲು ದ್ರವ ನೀಡಲಾಗಿತ್ತು. ಆದರೆ ವರದಿ ಇಂದು ಅಂದರೆ ಹನ್ನೊಂದು ದಿನಗಳ ನಂತರ ಅವರ ತಿಥಿ ಕಾರ್ಯದ ದಿನ ಬಂದಿದೆ. ಪರಿಣಾಮ ಮೃತಳ ಪ್ರಾಥಮಿಕ ಸಂಪರ್ಕಿತರನ್ನು ಹಾಗೂ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದವರನ್ನು ಹುಡುಕಾಟ ಮಾಡಲಾಗುತ್ತಿದೆ.
Advertisement
Advertisement
ಕೋಲಾರ ನಗರದ ಕಾರಂಜಿ ಕಟ್ಟೆ ಬಡಾವಣೆಯ ವ್ಯಕ್ತಿಯೊಬ್ಬರು ಇದೆ ತಿಂಗಳ 13ರಂದು ಕೊರೊನಾ ತಪಾಸಣೆಗೊಳಗಾಗಿದ್ದರು. ಈ ವ್ಯಕ್ತಿಯ ವರದಿ ಇಂದು ಬಂದಿದ್ದು ಸೋಂಕು ಇರುವುದು ದೃಢಪಟ್ಟಿದೆ. ಸಕ್ರಿಯ ಸೋಂಕಿತರ ಸಂಖ್ಯೆ 453ಕ್ಕೆ ಏರಿಕೆಯಾಗಿದ್ದು, ಕೊರೊನಾದಿಂದ ಸಾವನ್ನಪ್ಪಿರುವವರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಸಂಸದ ಮುನಿಸ್ವಾಮಿ, ಜಿಲ್ಲಾಧಿಕಾರಿ ದಿಢೀರ್ ಎಂದು ಇಂದು ಏಕಾಏಕಿ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ಕರೆದ್ದರು.
Advertisement
Advertisement
ವರದಿ ತಡವಾಗುತ್ತಿರುವುದರಿಂದಲೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ತೀರ್ಮಾನಿಸಿ, ಇನ್ನೊಂದು ವಾರದೊಳಗೆ ಆರು ಕೋವಿಡ್ ಟೆಸ್ಟ್ ಮಿಷನ್ಗಳನ್ನು ಖರೀದಿ ಮಾಡಲು ಪ್ರಸ್ತಾವನೆ ಸಿದ್ಧಪಡಿಸಿ ಪ್ರತಿ ತಾಲೂಕಿಗೊಂದರಂತೆ ಪ್ರಯೋಗಾಲಯ ಮಾಡಲು ತೀರ್ಮಾನ ಮಾಡಲಾಗಿದೆ. ಜೊತೆಗೆ ಸಂಸದ ಮುನಿಸ್ವಾಮಿ ಕೂಡಾ ತಾವೇ ಪಿಪಿಇ ಕಿಟ್ ಹಾಕಿಕೊಂಡು ಕೋವಿಡ್ ಆಸ್ಪತ್ರೆಯೊಳಗೆ ಭೇಟಿ ನೀಡಿ ಸೋಂಕಿತರ ಸಮಸ್ಯೆಗಳನ್ನು ಆಲಿದರು.