ಮಡಿಕೇರಿ: ಎಸ್ಟೇಟ್ ಮಾಲೀಕರು ಕಾಫಿ ತೋಟದಲ್ಲಿ ಹಾಕಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಆನೆ ಹಾಗೂ ಹುಲಿ ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿವೆ.
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಸಿದ್ಧಾಪುರ ಭಾಗದ ಕಾಫಿ ಎಸ್ಟೇಟ್ನ ಸಿಸಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು, ಜೂನ್ 13 ರ ರಾತ್ರಿ 11 ಗಂಟೆಗೆ ಕಾಫಿ ತೋಟದೊಳಗೆ ಕ್ಯಾಮೆರಾ ಎದುರು ಕಾಡಾನೆ ಸಾಗಿದೆ. ಹಾಗೆಯೇ 14ರ ರಾತ್ರಿ 10.55 ಗಂಟೆಗೆ ಹುಲಿ ಅದೇ ದಾರಿಯಲ್ಲಿ ಗಾಂಭೀರ್ಯದಿಂದ ನಡೆದು ಹೋಗಿರುವುದು ಅಚ್ಚರಿ ಜೊತೆಗೆ ಆತಂಕವನ್ನು ಮೂಡಿಸಿದೆ.
Advertisement
Advertisement
ಆನೆ, ಹುಲಿಗಳು ತಿಂಗಳಿಗೆ ಒಂದೆರಡು ಬಾರಿ ಅಪರೂಪಕ್ಕೆ ಬಂದು ಹೋಗುವ ಅತಿಥಿಗಳಾಗಿವೆ. ಹಸು, ಎಮ್ಮೆ, ಕರುವನ್ನು ಬೇಟೆಯಾಡುತ್ತಿದ್ದ ಹುಲಿಯ ಚಲನ ವಲನಗಳನ್ನು ಕಂಡು ಸ್ಥಳೀಯರಲ್ಲಿ ಭೀತಿ ಎದುರಾಗಿದೆ. ಕಾಫಿ ತೋಟದ ನಡುವಿನಲ್ಲೇ ಸುಳಿದಾಡುವ ಅಪರೂಪದ ಅತಿಥಿ ಇಲ್ಲಿಯವರೆಗೆ ಮನುಷ್ಯರಿಗೆ ಹಾನಿ ಮಾಡಿಲ್ಲ. ಕಾರ್ಮಿಕರ ಕಣ್ಣ ಮುಂದೆಯೇ ಸುಳಿದಾಡಿದರೂ ಯಾವುದೇ ಆತಂಕ ಸೃಷ್ಟಿಸದೆ ಬೇಟೆ ಮುಗಿಸಿ ಕಾಡಿಗೆ ಸೇರುತ್ತಿವೆ.
Advertisement
ಮೂರು ವರ್ಷಗಳಿಂದ ವಾಲ್ನೂರು ಗ್ರಾಮದ ಅಮ್ಮಂಗಾಲದ ಪೊನ್ನಪ್ಪ ಅವರ ಟ್ರಸ್ಟ್ ಲ್ಯಾಂಡ್ ಎಸ್ಟೇಟ್ಗೆ ಹುಲಿ ಬಂದು ಹೋಗುತ್ತಿದ್ದು, ಇಲ್ಲಿಯವರೆಗೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ಸೆರೆ ಹಿಡಿಯಲು ಸಾಧ್ಯವಾಗಿಲ್ಲ. ಕಾರಣ ಹುಲಿ ಅಪರೂಪಕ್ಕೆ ಬಂದು ಹೋಗುತ್ತಿದ್ದರಿಂದ ಅವುಗಳ ಪತ್ತೆ ಕಷ್ಟವಾಗಿದೆ.
Advertisement
ಮೂರು ವರ್ಷಗಳಲ್ಲಿ ಹಲವು ಬಾರಿ ಅರಣ್ಯ ಸಿಬ್ಬಂದಿ ಬಂದು ಹುಲಿ ಸೆರೆಗೆ ಪ್ರಯತ್ನಿಸಿದ್ದಾರೆ. ಬಂದ ಹುಲಿ ಮರಳಿ ಮೀನುಕೊಲ್ಲಿ ಮೂಲಕ ದುಬಾರೆ ಅರಣ್ಯ ಸೇರಿಕೊಳ್ಳುತ್ತಿದೆ ಎಂದು ಅರಣ್ಯ ಇಲಾಖೆ ಹೇಳುತ್ತಿದೆ. ಆದರೆ ಹುಲಿ ಯಾವಾಗ ಬರುತ್ತೋ, ಏನು ಮಾಡುತ್ತೋ ಎನ್ನುವ ಆತಂಕ ವಾಲ್ನೂರು ಹಾಗೂ ಅಮ್ಮಂಗಾಲ ಭಾಗದ ಜನರಲ್ಲಿ ಇದೆ.