ನವದೆಹಲಿ:ಜನ್ಮ ಕೊಟ್ಟ ತಂದೆಯನ್ನೇ ಮನೆಯಿಂದ ಹೊರ ಹಾಕಿದ್ದಕ್ಕೆ ಇಬ್ಬರು ಪುತ್ರರಿಗೆ ಸುಪ್ರೀಂ ಕೋರ್ಟ್ ಚಾಟಿ ಬೀಸಿ ವೃದ್ಧಾಪ್ಯದಲ್ಲಿ ಅವರನ್ನು ಕಡೆಗಣಿಸಿದ್ದು ಎಷ್ಟು ಸರಿ ಎಂದು ಖಾರವಾಗಿ ಪ್ರಶ್ನಿಸಿದೆ.
ವಯೋ ವೃದ್ಧನಾಗಿರುವ ನನಗೆ ನಿರ್ವಹಣೆಯ ವೆಚ್ಚವನ್ನೂ ನೀಡದೇ ಬಹು ರಾಷ್ಟ್ರೀಯ ಕಂಪನಿಗಳಲ್ಲಿ ದುಡಿಯುತ್ತಿರುವ ಇಬ್ಬರು ಪುತ್ರರು ಕಡೆಗಣಿಸಿದ್ದಾರೆ ಎಂದು ಆರೋಪಿಸಿ ದೆಹಲಿ ಮೂಲದ ವ್ಯಕ್ತಿಯೊಬ್ಬರು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
Advertisement
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಖಾನ್ವಿಲ್ಕರ್ ನೇತೃತ್ವದ ನ್ಯಾಯಪೀಠ, ನೀವು ತಂದೆಯವರಿಗೆ ಸಹಾಯ ಮಾಡುವುದಿಲ್ಲ ಯಾಕೆ? ಇವರು ನಿಮ್ಮ ತಂದೆ. ವೃದ್ಧಾಪ್ಯದಲ್ಲಿ ಅವರನ್ನು ಕಡೆಗಣಿಸಿದ್ದು ಎಷ್ಟು ಸರಿ? ನೀವು ಈ ಹಂತಕ್ಕೆ ಬರಲು ನಿಮ್ಮ ತಂದೆ ಕಾರಣ ಎಂಬುದನ್ನು ಮರೆಯಬೇಡಿ ಎಂದು ಹೇಳಿ ಇಬ್ಬರು ಸಹೋದರರ ನಿರ್ಲಕ್ಷ್ಯದ ನಡೆಯನ್ನು ಕಟು ಪದಗಳಲ್ಲಿ ಟೀಕಿಸಿತು.
Advertisement
Advertisement
ಅವರ ಶ್ರಮದಿಂದ ಈಗ ನೀವು ಉನ್ನತ ಶಿಕ್ಷಣ ಕಲಿತು ಉದ್ಯೋಗ ಪಡೆದುಕೊಂಡಿದ್ದೀರಿ. ನಿಮಗೆ ಆಸ್ತಿ ಬಂದಿರುವುದೇ ನಿಮ್ಮ ತಂದೆಯಿಂದ. ಹೀಗಿರುವಾಗ ಈ ಸಮಯದಲ್ಲೂ ಮನೆಯಿಂದ ಹೊರಹಾಕಿದ್ದು ಎಷ್ಟು ಸರಿ ಎಂದು ನ್ಯಾಯಪೀಠ ಖಾರವಾಗಿ ಪ್ರಶ್ನಿಸಿತು.
Advertisement
ವಯೋವೃದ್ದ ತಂದೆಯನ್ನು ಮನೆ ಬಿಟ್ಟು ಹೊರಹೋಗುವಂತೆ ಒತ್ತಾಯಿಸುವುದು ಮತ್ತು ಹಣಕಾಸಿನ ನೆರವು ನೀಡಲು ನಿರಾಕರಿಸುವುದು ಕ್ಷಮಾರ್ಹವಲ್ಲ. ತಂದೆಯ ಪೂರ್ವಜರಿಂದ ಬಂದಿರುವ ಆಸ್ತಿಯನ್ನು ನೀವು ಪಡೆದುಕೊಂಡಿದ್ದೀರಿ. ಆದರೆ ಬಾಡಿಗೆಯ ಸ್ವಲ್ಪ ಭಾಗವನ್ನೂ ತಂದೆಗೆ ಯಾಕೆ ನೀಡುವುದಿಲ್ಲ? ಪೂರ್ವಜರ ಆಸ್ತಿಯ ಮೇಲಿರುವ ತಂದೆಯ ಹಕ್ಕನ್ನು ಕಸಿಯಲಾಗದು ಎಂದು ಕೋರ್ಟ್ ಈ ವೇಳೆ ಅಭಿಪ್ರಾಯಪಟ್ಟಿತು.
ನನ್ನನ್ನು ಇಬ್ಬರು ಗಂಡು ಮಕ್ಕಳು ಮನೆಯಿಂದ ಹೊರ ಹಾಕಿದ್ದಾರೆ ಎಂದು ಆರೋಪಿಸಿ ವಯೋ ವೃದ್ಧ ತಂದೆ ಟ್ರಿಬ್ಯುನಲ್ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್ ಇಬ್ಬರು ಪುತ್ರರಿಗೆ ತಂದೆಯ ನಿರ್ವಹಣಾ ವೆಚ್ಚವಾಗಿ ಪ್ರತಿ ತಿಂಗಳು 7 ಸಾವಿರ ರೂ. ಪಾವತಿಸುವಂತೆ ಆದೇಶಿಸಿತ್ತು. ತಂದೆ-ತಾಯಿ ನಿರ್ವಹಣೆ, ಕಲ್ಯಾಣಕ್ಕೆ ಸಬಂಧಿಸಿದಂತೆ 2007ರ ಹಿರಿಯ ನಾಗರಿಕರ ಕಾಯ್ದೆಯ ಅಡಿ ಈ ಆದೇಶವನ್ನು ಪುತ್ರರು ಪ್ರಶ್ನಿಸಿದ್ದರಿಂದ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು.
ಹೈಕೋರ್ಟ್ ತಡೆ ನೀಡಿದ್ದನ್ನು ಪ್ರಶ್ನಿಸಿ ವೃದ್ಧ ತಂದೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ಈ ಕಾಲದಲ್ಲಿ ಜೀವನ ನಿರ್ವಹಣೆಗೆ ಪ್ರತಿ ತಿಂಗಳು 10 ಸಾವಿರ ರೂ. ಪಾವತಿಸುವಂತೆ ಆದೇಶ ನೀಡಬೇಕೆಂದು ತಂದೆಯ ಪರ ವಕೀಲರು ಕೋರ್ಟ್ಗೆ ಮನವಿ ಮಾಡಿದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗಳಿಗೆ ಒಂದು ವಾರದೊಳಗೆ ಉತ್ತರಿಸುವಂತೆ ಸುಪ್ರೀಂ ಕೋರ್ಟ್ ಇಬ್ಬರೂ ಮಕ್ಕಳಿಗೆ ನೋಟಿಸ್ ಜಾರಿ ಮಾಡಿದೆ.