ಮಂಡ್ಯ: ಜಿಲ್ಲೆಯ ಅರ್ಕೇಶ್ವರ ದೇವಸ್ಥಾನದ ಮೂವರು ಅರ್ಚಕರನ್ನು ಬರ್ಬರಾಗಿ ಹತ್ಯೆ ಮಾಡಿದ್ದ ಮೂವರು ಹಂತಕರ ಮೇಲೆ ಪೊಲೀಸರು ಶೂಟ್ಔಟ್ ಮಾಡಿದ್ದು, ಶೂಟ್ಔಟ್ನಲ್ಲಿ ಹಂತಕರಿಗೆ ಗಂಭೀರ ಗಾಯಗಳಾಗಿವೆ. ಇದನ್ನೂ ಓದಿ: ಮಂಡ್ಯದಲ್ಲಿ ಮೂವರು ಅರ್ಚಕರ ಹತ್ಯೆ – ತಲಾ 5 ಲಕ್ಷ ಪರಿಹಾರ ಘೋಷಣೆ
ಇಂದು ಬೆಳಗ್ಗೆ ಮದ್ದೂರು ಮಳವಳ್ಳಿ ರಸ್ತೆಯ ಸಾದೊಹಳ್ಳಿ ಗೇಟ್ ಬಳಿ ಈ ಘಟನೆ ನಡೆದಿದೆ. ಆರೋಪಿಗಳನ್ನು ಆಂಧ್ರ ಮೂಲದ ವಿಜಿ (25), ಮದ್ದೂರಿನ ಅರೆಕಲ್ ದೊಡ್ಡಿಯ ಗಾಂಧಿ (28) ಮತ್ತು ತೊಪ್ಪನಹಳ್ಳಿಯ ಮಂಜು (30) ಎಂದು ಗುರುತಿಸಲಾಗಿದೆ.
Advertisement
Advertisement
ಹಂತಕರು ಈ ಸ್ಥಳದಲ್ಲಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಹೋಗಿದ್ದಾರೆ. ಈ ವೇಳೆ ಹಂತಕರು ಪೊಲೀಸರ ಮೇಲೆ ಚಾಕು ಹಾಗೂ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಆಗ ಐಪಿಎಸ್ ಶರತ್ಕುಮಾರ್ ಹಾಗೂ ಓರ್ವ ಪೇದೆಗೆ ಗಾಯಗಳಾಗಿವೆ. ಹೀಗಾಗಿ ಪೊಲೀಸರು ತಮ್ಮ ರಕ್ಷಣೆಗಾಗಿ ಎದುರಿನಲ್ಲಿ ಇದ್ದ ಮೂವರು ಹಂತಕರ ಮೇಲೆ ಗುಂಡು ಹಾರಿಸಿದ್ದಾರೆ.
Advertisement
Advertisement
ಈ ವೇಳೆ ಹಂತರಿಗೂ ತೀವ್ರವಾದ ಗಾಯಗಳಾಗಿವೆ. ಸದ್ಯ ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಹಂತಕರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಶುಕ್ರವಾರ ಮಂಡ್ಯದ ಅರ್ಕೇಶ್ವರ ದೇವಸ್ಥಾನಕ್ಕೆ ನುಗ್ಗಿ ಮೂವರು ಅರ್ಚಕರನ್ನು ಬರ್ಬರವಾಗಿ ಕೊಂದು ದೇವಸ್ಥಾನದ ಹುಂಡಿಯನ್ನು ದರೋಡೆ ಮಾಡಿ ಈ ಹಂತಕರು ಪರಾರಿಯಾಗಿದ್ದರು. ಹಂತಕರ ಸೆರೆಗಾಗಿ ಪೊಲೀಸ್ ಇಲಾಖೆ ನಾಲ್ಕು ತಂಡವನ್ನು ರಚನೆ ಮಾಡಲಾಗಿತ್ತು.
ಏನಿದು ಪ್ರಕರಣ?
ಸೆಪ್ಟೆಂಬರ್ 11 ರಂದು ಮಂಡ್ಯ ಜಿಲ್ಲೆಯ ಗುತ್ತಲಿನಲ್ಲಿರುವ ಅರ್ಕೇಶ್ವರ ದೇವಾಲಯದ ಆವರಣದಲ್ಲೇ ಕೊಲೆ ನಡೆದಿತ್ತು. ಮಲಗಿದ್ದ ಮೂವರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಜೊತೆಗೆ ಹುಂಡಿ ಹೊತ್ತೊಯ್ದು ದೇವಾಲಯದ ಹೊರಗೆ ಬೀಸಾಡಿದ್ದರು. ಕೊಲೆಯಾದ ಮೂವರನ್ನು ಗಣೇಶ್, ಪ್ರಕಾಶ್ ಮತ್ತು ಆನಂದ್ ಎಂದು ಗುರುತಿಸಲಾಗಿದೆ. ಈ ಮೂವರಲ್ಲಿ ದೇವಸ್ಥಾನದಲ್ಲಿ ಅರ್ಚಕರಾಗಿಯೂ ಮತ್ತು ಸೆಕ್ಯೂರಿಟಿಯಾಗಿಯೂ ಕೆಲಸ ಮಾಡುತ್ತಿದ್ದರು.
ಸಿಎಂ ಯಡಿಯೂರಪ್ಪ ಅವರು ಹತ್ಯೆಯಾದ ಮೂವರು ಅರ್ಚಕರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರವನ್ನು ನೀಡಿದ್ದರು. “ಮಂಡ್ಯದ ಅರ್ಕೇಶ್ವರ ದೇವಸ್ಥಾನದ ಪೂಜಾರಿಗಳಾಗಿದ್ದ ಗಣೇಶ್, ಪ್ರಕಾಶ್ ಮತ್ತು ಆನಂದ್ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿ ದೇವಸ್ಥಾನದ ಹುಂಡಿಯನ್ನು ಕಳ್ಳತನ ಮಾಡಿರುವ ವಿಷಯ ತಿಳಿದು ಅತ್ಯಂತ ನೋವಾಗಿದೆ. ಹತ್ಯೆಗೊಳಗಾದ ದೇವಸ್ಥಾನದ ಪೂಜಾರಿಗಳ ಕುಟುಂಬಕ್ಕೆ ತಲಾ 5.00 ಲಕ್ಷ ರೂ. ಪರಿಹಾರ ನೀಡಲಾಗಿದೆ. ತಪ್ಪಿತಸ್ಥರ ವಿರುದ್ಧ ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಸಿಎಂ ತಿಳಿಸಿದ್ದರು.