ಉಡುಪಿ: ಜಿಲ್ಲೆಯಲ್ಲಿ ಇಂದು ಮಳೆಯ ಅಬ್ಬರ ಕಮ್ಮಿ ಇದ್ದರೂ ಅರಬ್ಬಿ ಸಮುದ್ರದಲ್ಲಿ ಅಲೆಗಳ ಅಬ್ಬರ ವಿಪರೀತವಾಗಿದೆ. ಇದರಿಂದ ಉಡುಪಿ- ಕಾಪು ಮೀನುಗಾರಿಕಾ ರಸ್ತೆಗೆ ಸಮುದ್ರದ ನೀರು ನುಗ್ಗಿದೆ.
ಇಂದು ಮಧ್ಯಾಹ್ನದಿಂದ ಕಡಲು ಆರ್ಭಟ ಹೆಚ್ಚುತ್ತಿದ್ದು, ಇಂದು ಕೂಡ ಕಾಪು ತಾಲೂಕಿನ ಕಡೆಕಾರು ವ್ಯಾಪ್ತಿಯಲ್ಲಿ ಅರಬ್ಬಿ ಸಮುದ್ರದ ಅಲೆಗಳ ಅಬ್ಬರ ವಿಪರೀತವಾಗಿದೆ. ಹರಿದ ನೀರು ಮೀನುಗಾರಿಕಾ ರಸ್ತೆಯನ್ನು ದಾಟಿ ನದಿ ಸೇರಿದೆ. ಒಂದು ವಾರದಿಂದ ಜಿಲ್ಲೆಯಾದ್ಯಂತ ವಿಪರೀತ ಮಳೆ ಸುರಿಯುತ್ತಿದ್ದು, ನದಿಗಳು ತುಂಬಿ ಹರಿಯುತ್ತಿದೆ.
Advertisement
Advertisement
ಪಶ್ಚಿಮಘಟ್ಟದ ತಪ್ಪಲಿನಲ್ಲಿ ಭಾರೀ ಮಳೆಯಾಗಿರುವುದರಿಂದ ನೀರು ಕರಾವಳಿ ಕಡೆ ಹರಿದುಬರುತ್ತಿದೆ. ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಂತೆ, ಅರಬ್ಬಿ ಸಮುದ್ರದಲ್ಲಿ ಮೂರರಿಂದ ಐದು ಅಡಿ ಎತ್ತರದ ಅಲೆಗಳು ಮೇಲೇಳುವ ಸೂಚನೆಯಿದೆ. ಸ್ಥಳೀಯ ಮೀನುಗಾರರು ಮತ್ತು ಯುವಕರು ರಸ್ತೆಗೆ ಬಿದ್ದ ಕಲ್ಲು ಮಣ್ಣನ್ನು ತೆರವುಗೊಳಿಸಿ ಸಂಚಾರಕ್ಕೆ ಸುಗಮ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದಾರೆ.
Advertisement
Advertisement
ಪಡುಕೆರೆ ವ್ಯಾಪ್ತಿಯಲ್ಲಿ ಆಧುನಿಕ ಶೈಲಿಯಲ್ಲಿ ತಡೆಗೋಡೆ ನಿರ್ಮಾಣ ಮಾಡಿದ್ದು, ಇದೇ ನಿರಂತರ ಕಡಲ್ಕೊರೆತಕ್ಕೆ ಕಾರಣ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಸಮುದ್ರವನ್ನು ಅದರಷ್ಟಕ್ಕೆ ಬಿಡಬೇಕು. ಸಮುದ್ರಕ್ಕೆ ತಡೆಗೋಡೆ ಕಟ್ಟಿದರೆ ಅಪಾಯ ಕಟ್ಟಿಟ್ಟಬುತ್ತಿ ಎಂದು ಸ್ಥಳೀಯ ಸೂರಜ್ ಸಾಲಿಯಾನ್ ಹೇಳಿದ್ದಾರೆ. ಮನೆಗಳಿರುವ ಪ್ರದೇಶದಲ್ಲಿ ಹೆಚ್ಚುವರಿ ಕಲ್ಲು ತಂದು ಹಾಕುವ ಪ್ರಕ್ರಿಯೆ ನಾಳೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.