ಬಹುಪಾಲು ಜನರ ಖುಷಿಗೆ, ಬೇಸರಕ್ಕೆ, ಥರ ಥರದ ಭಾವಗಳಿಗೆ ಸರಿಕಟ್ಟಾಗಿ ಸಾಥ್ ಕೊಡುತ್ತಿದ್ದ ಚಿತ್ರಮಂದಿರಗಳೀಗ ಬೀಗ ಜಡಿದುಕೊಂಡಿವೆ. ಅದೇನೇ ಬ್ಯುಸಿ, ಕಷ್ಟ ಕಾರ್ಪಣ್ಯಗಳಿದ್ದರೂ ಸಿನಿಮಾ ಮಂದಿರಗಳಿಗೆ ತೆರಳಿ ಸಿನಿಮಾ ನೋಡಿ ನಿರಾಳವಾಗುತ್ತಿದ್ದ ಜನರೆಲ್ಲ ಆ ಅವಕಾಶವಿಲ್ಲದೆ ಏನೋ ಕಳೆದುಕೊಂಡಾಗ ಕಸಿವಿಸಿಗೊಳಗಾಗಿದ್ದಾರೆ. ಆ ನೀರವವನ್ನು ಕೊಂಚ ನೀಗಿರೋದು ಅಮೇಜಾನ್ ಪ್ರೈಮ್ನ ಆನ್ಲೈನ್ ಮೂಲಗಳು. ಇದೀಗ ಹಲವಾರು ಕನ್ನಡ ಸಿನಿಮಾಗಳು ಈ ಮೂಲಕವೇ ಹೆಚ್ಚಿನ ಪ್ರಮಾಣದಲ್ಲಿ ಪ್ರೇಕ್ಷಕರನ್ನು ತಲುಪಿಕೊಳ್ಳುತ್ತಿದೆ. ಸಿನಿಮಾ ಮಂದಿರಗಳಲ್ಲಿ ತೆರೆಕಂಡು ಯಶ ಕಂಡಿದ್ದ ಮುಂದಿನ ನಿಲ್ದಾಣ ಚಿತ್ರವೂ ಇದೀಗ ಅಮೇಜಾನ್ ಪ್ರೈಮ್ಗೆ ಅಡಿಯಿರಿಸಿದೆ.
Advertisement
ಯುವಪ್ರತಿಭೆ ವಿನಯ್ ಭಾರದ್ವಾಜ್ ನಿರ್ದೇಶನ ಮಾಡಿರೋ ಮುಂದಿನ ನಿಲ್ದಾಣದ ನವಿರಾದ ಕಥೆಗೆ, ಯುವ ಸಮುದಾಯದ ಸೂಕ್ಷ್ಮ ತಲ್ಲಣಗಳನ್ನು ದೃಶ್ಯಗಳಲ್ಲಿ ಹಿಡಿದಿಟ್ಟ ಕಲಾತ್ಮಕತೆಗೆ ಮತ್ತು ಅದೆಲ್ಲವನ್ನೂ ಕಮರ್ಶಿಯಲ್ ಹಾದಿಯಲ್ಲಿಯೇ ಪ್ರೇಕ್ಷಕರಿಗೆ ಮುಟ್ಟಿಸಿದ ಜಾಣ್ಮೆಯ ಬಗ್ಗೆ ವಿಮರ್ಶಕರು ಮಾತ್ರವಲ್ಲದೆ ಪ್ರೇಕ್ಷಕರ ಕಡೆಯಿಂದಲೂ ಈ ಸಿನಿಮಾಗೆ ಮೆಚ್ಚುಗೆಗಳು ಸಿಕ್ಕಿದ್ದವು. ಹೊಸ ಅಲೆಯ, ಹೊಸ ಆಲೋಚನೆಯ ಸಿನಿಮಾಗಳನ್ನು ಕನ್ನಡದ ಪ್ರೇಕ್ಷಕರು ಕೈ ಹಿಡಿದೇ ತೀರುತ್ತಾರೆಂಬುದಕ್ಕೆ ಉದಾಹರಣೆ ಎಂಬಂತೆ ಮುಂದಿನ ನಿಲ್ದಾಣ ಗೆದ್ದು ಬೀಗಿತ್ತು.
Advertisement
Advertisement
ಇದೀಗ ಕೊರೊನಾ ಕಾಲದಲ್ಲಿ ಮುಂದಿನ ನಿಲ್ದಾಣ ಚಿತ್ರ ಅಮೇಜಾನ್ ಪ್ರೈಮ್ಗೆ ಅಡಿಯಿರಿಸಿದೆ. ಹೀಗೆ ಆಗಮಿಸಿದ ಕ್ಷಣದಿಂದಲೇ ಈ ಚಿತ್ರ ಹೆಚ್ಚೆಚ್ಚು ವೀಕ್ಷಣೆ ಪಡೆದುಕೊಳ್ಳುತ್ತಾ ಮುಂದೆ ಸಾಗುತ್ತಿದೆ. ಅಮೇಜಾನ್ ಪ್ರೈಮ್ನಲ್ಲಿಯೇ ಲಾಕ್ಡೌನ್ ಅವಧಿಯ ತುಂಬಾ ಕನ್ನಡದ ನಾನಾ ಸಿನಿಮಾಗಳು ಮತ್ತೆ ಹಿಟ್ ಆಗಿವೆ. ಮುಂದಿನ ನಿಲ್ದಾಣ ಕೂಡ ಆ ಆದಿಯಲ್ಲಿ ಸೇರ್ಪಡೆಗೊಳ್ಳೋ ಲಕ್ಷಣಗಳೇ ದಟ್ಟವಾಗಿವೆ. ಈ ವಿದ್ಯಮಾನ ವಿಶಿಷ್ಟವಾದ ಆಲೋಚನಾ ಕ್ರಮದಿಂದ ಜೀವ ಪಡೆದ ಸಿನಿಮಾಗಳು ಎಲ್ಲ ಕಾಲದಲ್ಲಿಯೂ ಪ್ರೇಕ್ಷಕರ ಪ್ರೀತಿ ಗಿಟ್ಟಿಸಿಕೊಳ್ಳುತ್ತದೆಂಬುದಕ್ಕೊಂದು ತಾಜಾ ಉದಾಹರಣೆ.
Advertisement
ಪ್ರವೀಣ್ ತೇಜ್, ರಾಧಿಕಾ ನಾರಾಯಣ್, ಅನನ್ಯಾ ಕಶ್ಯಪ್ ಮುಂತಾದವರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಮುಂದಿನ ನಿಲ್ದಾಣ ಸಾಫ್ಟ್ವೇರ್ ಜಗತ್ತಿನ ಮನಸ್ಥಿತಿಗಳ ಕಥೆ ಹೇಳುತ್ತಲೇ ನಾನಾ ದಿಕ್ಕುಗಳನ್ನು ಕಾಣಿಸಿತ್ತು. ನವಿರಾದ ತ್ರಿಕೋನ ಪ್ರೇಮಕಥೆ, ಅದಕ್ಕೆ ಪಟವಿಟ್ಟಂತಹ ಸದಾ ಗುನುಗಿಸಿಕೊಳ್ಳುತ್ತಿರೋ ಚೆಂದದ ಹಾಡುಗಳೊಂದಿಗೆ ಮುಂದಿನ ನಿಲ್ದಾಣದಲ್ಲಿ ಸಿನಿಮಾಸಕ್ತ ಮನಸುಗಳು ಸದಾ ತಂಗುತ್ತಲೇ ಬರುತ್ತಿವೆ. ಇದೀಗ ಅಮೇಜಾನ್ ಪ್ರೈಮ್ ಮೂಲಕ ಮತ್ತೆ ಮುಂದಿನ ನಿಲ್ದಾಣದಲ್ಲಿ ನಿಂತು ಮತ್ತೊಮ್ಮೆ ಮುದಗೊಳ್ಳೋ ಸದವಕಾಶ ಸಿನಿಮಾ ಪ್ರೇಮಿಗಳಿಗೆ ಸಿಕ್ಕಿದೆ. ನೀವೂ ಕೂಡ ಮಿಸ್ ಮಾಡಿಕೊಳ್ಳದೆ ಮುಂದಿನ ನಿಲ್ದಾಣದ ಮುದಗಳಿಗೆ ಮನಸೊಡ್ಡಿಕೊಳ್ಳಿ.