– ಪೋಷಕರು ಶುಲ್ಕವನ್ನು ಕಟ್ಟಿಲ್ಲ
– ಚಿನ್ಮಯ ವಿದ್ಯಾ ಕೇಂದ್ರ ಪ್ರೌಢಶಾಲೆಯಿಂದ ರಾಜ್ಯಪಾಲರಿಗೆ ಮನವಿ
ಬೆಂಗಳೂರು: ಕೊರೊನಾ ಸಂಕಷ್ಟದ ಕಾಲದಲ್ಲಿ ಅನುದಾನ ರಹಿತ ಶಾಲೆಗಳು ಹಲವಾರು ತೊಂದರೆಗಳನ್ನು ಅನುಭವಿಸುತ್ತಿದೆ. ಹೀಗಾಗಿ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಕಲ್ಯಾಣ ನಿಧಿಯಿಂದ ಸಂಕಷ್ಟಕ್ಕೊಳಗಾಗಿರುವ ರಾಜ್ಯ ಅನುದಾನ ರಹಿತ ರಾಜ್ಯ ಪಠ್ಯಕ್ರಮದ ಶಾಲೆಗಳ ಶಿಕ್ಷಕರಿಗೆ 2020-21 ನೇ ಸಾಲಿಗೆ ಆರ್ಥಿಕ ಸಹಾಯ ಮಾಡುವಂತೆ ಈಜಿಪುರದ ಚಿನ್ಮಯ ವಿದ್ಯಾ ಕೇಂದ್ರ ಪ್ರೌಢಶಾಲೆ ರಾಜ್ಯಪಾಲರಲ್ಲಿ ಮನವಿ ಮಾಡಿದೆ.
ಈ ಕುರಿತಂತೆ ಸುದೀರ್ಘ ಮನವಿ ಪತ್ರವನ್ನು ನೀಡಿರುವ ಚಿನ್ಮಯ ವಿದ್ಯಾ ಕೇಂದ್ರ ಪ್ರೌಢಶಾಲೆಯ ಕಾರ್ಯದರ್ಶಿ ಡಾ.ವಿ.ರಾಘವೇಂದ್ರರಾವ್ ಅವರು, ಅನುದಾನರಹಿತ ಶಾಲೆಗಳು ರಾಜ್ಯದಲ್ಲಿ ಹಲವಾರು ತೊಂದರೆಗಳನ್ನು ಅನುಭವಿಸುತ್ತಿವೆ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಈ ಶಾಲೆಗಳ ಶಿಕ್ಷಕರಿಗೆ ಈಗ ಆರ್ಥಿಕ ಸಹಾಯದ ಅಗತ್ಯವಿದೆ. ಸರ್ಕಾರವು ಕೂಡ ಇಂತ ಶಿಕ್ಷಕರಿಗೆ ಯಾವುದೇ ಸಹಾಯಧನ ನೀಡುತ್ತಿಲ್ಲ. ಹೀಗಾಗಿ ಶಿಕ್ಷಕರ ಹಾಗೂ ವಿದ್ಯಾರ್ಥಿ ಕಲ್ಯಾಣ ನಿಧಿಯಲ್ಲಿ ಕೋಟ್ಯಾಂತರ ರೂ. ಇದೆ. ಇಂತಹ ಕಷ್ಟದ ಕಾಲದಲ್ಲಿ ಈ ಹಣವನ್ನು ಶಿಕ್ಷಕರಿಗೆ ನೀಡಿದರೆ ಅವರ ಬದುಕು ಹಸನಾಗುತ್ತದೆ ಎಂದು ವಿವರಿಸಿದ್ದಾರೆ.
Advertisement
Advertisement
ಅನುದಾನ ರಹಿತ ರಾಜ್ಯ ಶಾಲೆಗಳು ಕಳೆದ ವರ್ಷದಿಂದಲೂ ಶಿಕ್ಷಣ ಇಲಾಖೆಯ ಗೊಂದಲಗಳ ಆದೇಶಗಳು, ಸುತ್ತೋಲೆಗಳು ಮತ್ತು ಸೂಚನೆಗಳಿಂದ ಪೋಷಕರು ಕೂಡ ಗೊಂದಲದಲ್ಲಿದ್ದು, ಶಾಲೆಗಳಿಗೆ ಕಟ್ಟಬೇಕಾದ ಶುಲ್ಕವನ್ನು ಕಟ್ಟುತ್ತಿಲ್ಲ. ಇದರಿಂದ ಸಾವಿರಾರು ಸಂಸ್ಥೆಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದೇವೆ. ಇದರಿಂದ ಶಿಕ್ಷಕರಿಗೆ ವೇತನ ಕೊಡಲಾಗದಂತಹ ಅಸಹಾಕತೆಯಲ್ಲಿದ್ದೇವೆ ಎಂದು ತಮ್ಮ ನೋವನ್ನು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
Advertisement
2019-20ರ ಕೊರೊನಾ ಸಂಕಷ್ಟದಲ್ಲಿ ಶಾಲೆಗಳನ್ನು ಬಂದ್ ಮಾಡಿದ ವೇಳೆ ವಿದ್ಯಾರ್ಥಿಗಳು ಕಟ್ಟಬೇಕಾದ ಶಾಲಾ ಶುಲ್ಕವನ್ನು ಕಟ್ಟಿರಲಿಲ್ಲ. ಹಲವಾರು ವಿದ್ಯಾರ್ಥಿಗಳು ಬಾಕಿ ಉಳಿಸಿಕೊಂಡಿದ್ದರು. ಸರ್ಕಾರದ ಗೊಂದಲದ ಹೇಳಿಕೆಗಳಿಂದ ಪೋಷಕರು ಕಟ್ಟಬೇಕಾದ ಶುಲ್ಕಗಳನ್ನು ಕಟ್ಟಲಿಲ್ಲ. ಇದು ಪೋಷಕರ ತಪ್ಪೂ ಅಲ್ಲ. ಸರ್ಕಾರ ನೀಡಿದ ಗೊಂದಲದ ಹೇಳಿಕೆಗಳೂ ಹಾಗೂ ಸುತ್ತೋಲೆಗಳಿಂದ ಅನಿವಾರ್ಯ ಪರಿಸ್ಥಿತಿಯಲ್ಲಿ ಶುಲ್ಕವನ್ನು ಪೋಷಕರು ತುಂಬದೆ ಮೌನ ವಹಿಸಿದ್ದರು. ಇದರಿಂದ ಶಾಲೆಗಳು ತೀವ್ರ ಸಂಕಷ್ಟಕ್ಕೊಳಗಾಗಿದ್ದವು.
Advertisement
ಅದಾದ ನಂತರ ಶಾಲೆಗಳು ಆರಂಭವಾದವು, ಇನ್ನೇನು ಸಲೀಸಾಗಿ ನಡೆಯುತ್ತವೆ ಎನ್ನುವ ಹೊತ್ತಿಗೆ ಬಂದ ಎರಡನೇ ಅಲೆ ಇಡೀ ಬದುಕನ್ನೇ ನುಂಗಿದೆ. ಈ ವೇಳೆ ಶಿಕ್ಷಣ ಸಚಿವರು ಹೊರಡಿಸಿದ ಸುತ್ತೋಲೆಯಿಂದ ನಿಜಕ್ಕೂ ಖಾಸಗಿ ಅನುದಾನಿತ ಶಾಲೆಗಳ ಪರಿಸ್ಥಿತಿ ಶೋಚನೀಯವಾಗಿದೆ. ವಿದ್ಯಾಗಮ ಶುರುವಾಗುತ್ತಿದ್ದಂತೆ ಬಂದ ಎರಡನೇ ಅಲೆಯಿಂದ ಅದು ಕೂಡ ಸ್ಥಗಿತಗೊಂಡಿತು. ವಿದ್ಯಾರ್ಥಿಗಳು ಇಂತ ಹೊತ್ತಿನಲ್ಲಿ ಗೊಂದಲಕ್ಕೀಡಾದರು. ಈ ಸಮಯದಲ್ಲೇ ಶಿಕ್ಷಣ ಸಚಿವರು ಹೊರಡಿಸಿದ ಇನ್ನೊಂದು ಸುತ್ತೋಲೆ ಕೂಡ ಮತ್ತಷ್ಟು ಸಂಕಷ್ಟಕ್ಕೆ ಕಾರಣವಾಗಿದೆ. ಶಾಲೆಗೆ ದಾಖಲಾಗದಿದ್ದರೂ ಕೂಡ ಮಕ್ಕಳನ್ನು ಉತ್ತೀರ್ಣ ಮಾಡಿ ಮುಂದಿನ ತರಗತಿಗೆ ಅವಕಾಶ ನೀಡಬೇಕು ಎನ್ನುವುದು, ಆದರೆ ಶಿಕ್ಷಣ ನೀತಿಯ ಪ್ರಕಾರ ಯಾವುದೇ ಕಾರಣಕ್ಕೂ ವಿದ್ಯಾರ್ಥಿ ದಾಖಲಾಗದೆ ಮುಂದಿನ ತರಗತಿಗೆ ಉತ್ತೀರ್ಣ ಮಾಡುವಂತಿಲ್ಲ. ಆದರೂ ಶಿಕ್ಷಣ ಸಚಿವರ ಈ ಸುತ್ತೋಲೆ ಈಗ ಒಂದು ರೀತಿ ಗೊಂದಲಕ್ಕೆ ಕಾರಣವಾಗಿದೆ.
ಇದರಿಂದ ಆಡಳಿತ ಮಂಡಳಿಗಳು ಹಾಗೂ ಶಿಕ್ಷಕರ ಪಾಡು ನಿಜಕ್ಕೂ ಶೋಚನೀಯವಾಗಿದೆ ಇಂತಹ ಅನುದಾನ ರಹಿತ ಶಾಲೆಗಳು ಶಿಕ್ಷಕರಿಗೆ ವೇತನವೂ ನೀಡಲಾಗದೆ ತೀವ್ರ ತೊಂದರೆಗಳನ್ನು ಅನುಭವಿಸುತ್ತಿವೆ. ಈ ಎಲ್ಲಾ ತಂತ್ರಗಳಿಂದ ಹೊರಬರಲು 2021-22ನೇ ಸಾಲಿನಲ್ಲಿ ಮಕ್ಕಳ ದಾಖಲಾತಿಯನ್ನು ಕಡ್ಡಾಯವಾಗಿ ಮಾಡುವಂತೆ ಪೋಷಕರಿಗೆ ತಿಳಿಸುವ ಸ್ಪಷ್ಟವಾದ ಸುತ್ತೋಲೆ ಹೊರಡಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿ ಶಾಲೆಗಳಿಗೆ ಸಹಾಯ ಮಾಡಬೇಕು ಎನ್ನುವುದು ನಮ್ಮ ಮನವಿ. ಈ ಎಲ್ಲಾ ವಿಷಯಗಳನ್ನು ತಾವು ಮನಗಂಡು ತಾವು ಶಿಕ್ಷಕರ ಸಹಾಯಕ್ಕೆ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.