ನವದೆಹಲಿ: ಕಾಂಗ್ರೆಸ್ ನಾಯಕ ಜೈ ರಾಮ್ ರಮೇಶ್ ರಾಷ್ಟ್ರೀಯ ಭದ್ರತಾ ಸಲಹೆಗಾರ(ಎನ್ಎಸ್ಎ) ಅಜಿತ್ ದೋವಲ್ ಪುತ್ರ ವಿವೇಕ್ ದೋವಲ್ ಅವರ ಬಳಿ ಕ್ಷಮೆಯಾಚಿಸಿದ್ದಾರೆ. 2019ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಮೆಯಾಚಿಸಿದ್ದು, ದೋವಲ್ ಅವರು ಕ್ಷಮೆಯನ್ನು ಮನ್ನಿಸಿ, ಪ್ರಕರಣದಿಂದ ರಮೇಶ್ ಹೆಸರನ್ನು ಕೈಬಿಟ್ಟಿದ್ದಾರೆ.
Advertisement
ಲೇಖನದಲ್ಲಿ ಮಾನಹಾನಿಯಾಗುವಂತೆ ಪ್ರಕಟಿಸಿದ್ದಕ್ಕೆ ಕಳೆದ ವರ್ಷ ವಿವೇಕ್ ದೋವಲ್ ಅವರು ಕಾಂಗ್ರೆಸ್ ನಾಯಕ ಹಾಗೂ ಪತ್ರಿಕೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಜೈರಾಮ್ ರಮೇಶ್ ಅವರು ಕ್ಷಮೆಯಾಚಿಸಿದ್ದು, ಅವರ ಕ್ಷಮೆಯನ್ನು ಸ್ವೀಕರಿಸಲಾಗಿದೆ ಎಂದು ವಿವೇಕ್ ದೋವಲ್ ಹೇಳಿದ್ದಾರೆ.
Advertisement
ಚುನಾವಣೆ ಸಂದರ್ಭದಲ್ಲಿ ಹೆಚ್ಚು ಚರ್ಚೆ ನಡೆಯುತ್ತಿದ್ದಂತೆ ಅದೇ ಭರದಲ್ಲಿ ವಿವೇಕ್ ದೋವಲ್ ವಿರುದ್ಧ ಹೇಳಿಕೆ ನೀಡಿದ್ದೆ. ಅಲ್ಲದೆ ಹಲವು ಆರೋಪಗಳನ್ನು ಸಹ ಮಾಡಿದ್ದೆ. ಈ ಕುರಿತು ನಾನು ಅದನ್ನು ಪರಿಶೀಲಿಸಬೇಕು ಎಂದು ತಮ್ಮ ಕ್ಷಮೆಯಲ್ಲಿ ವಿವರಿಸಿದ್ದಾರೆ.
Advertisement
Advertisement
ಜನವರಿ 2019ರಂದು ವಿವೇಕ್ ದೋವಲ್ ಅವರು ದೆಹಲಿ ಹೈಕೋರ್ಟ್ನಲ್ಲಿ ಮಾನಹಾನಿ ವರದಿ ಪ್ರಕಟಿಸಿದ್ದಕ್ಕೆ ಕ್ಯಾರವನ್ ಪತ್ರಿಕೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಅಲ್ಲದೆ ಸುದ್ದಿಗೋಷ್ಠಿಯಲ್ಲಿ ಇದೇ ವಿಚಾರವನ್ನು ಒತ್ತಿ ಹೇಳಿದ್ದಕ್ಕೆ ಹಾಗೂ ಮತ್ತೊಮ್ಮೆ ಇದೇ ರೀತಿಯ ಮಾನಹಾನಿ ಬರಹಗಳನ್ನು ಬರೆದಿದ್ದಕ್ಕೆ ಜೈರಾಮ್ ರಮೇಶ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ್ದರು.
ತಮ್ಮ ತಂದೆ ಅಜಿತ್ ದೋವಲ್ ಅವರೊಂದಿಗೆ ಸೇರಿ ವಿವೇಕ್ ಕೋಟ್ಯಂತರ ರೂ. ಅವ್ಯವಹಾರ ನಡೆಸಿದ್ದಾರೆಂದು ಪತ್ರಿಕೆ ವರದಿ ಮಾಡಿತ್ತು. ಆದರೆ ಉದ್ದೇಶಪೂರ್ವಕವಾಗಿ ನಿಂದನೆ ಹಾಗೂ ಅಪಚಾರ ಮಾಡಲಾಗಿದೆ ಎಂದು ದೋವಲ್ ಆರೋಪಿಸಿದ್ದರು. ಈಗ ಕ್ಯಾರವಾನ್ ಪತ್ರಿಕೆ ವಿರುದ್ಧ ಕೇಸ್ ನ್ಯಾಯಾಲಯದಲ್ಲಿ ನಡೆಯುತ್ತಿದೆ.