– ರಾಯಚೂರು ಸಹಾಯಕ ಆಯುಕ್ತ ಸಂತೋಷ ನೇತೃತ್ವದಲ್ಲಿ ದಾಳಿ
– ಔಷಧ ಅಂಗಡಿಯಲ್ಲಿ ರಾಯಲ್ಟಿ ಮುದ್ರಣ
ರಾಯಚೂರು: ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಖಡಕ್ ಎಚ್ಚರಿಕೆ ಬಳಿಕ ರಾಯಚೂರು ಜಿಲ್ಲಾಡಳಿತ ಅಕ್ರಮ ಮರಳುಗಾರಿಕೆ ವಿಚಾರದಲ್ಲಿ ಚುರುಕುಗೊಂಡಿದೆ. ರಾಯಲ್ಟಿ ದುರ್ಬಳಕೆ ದಂಧೆ ನಡೆಸಿ 60 ಲಕ್ಷ ರೂಪಾಯಿ ಮೌಲ್ಯದ ಜಾಲವನ್ನು ದೇವದುರ್ಗದಲ್ಲಿ ರೆಡ್ ಹ್ಯಾಂಡಾಗಿ ಹಿಡಿದು ಜಪ್ತಿ ಮಾಡಲಾಗಿದೆ.
Advertisement
ಅಕ್ರಮ ಮರಳುಗಾರಿಕೆಯಲ್ಲಿ ಈ ರೀತಿಯ ವಂಚನೆಯೂ ಇರುತ್ತಾ ಎನ್ನುವ ಪ್ರಶ್ನೆ ಮೂಡಿಸುವ ಹಾಗೇ ರಾಯಚೂರಿನಲ್ಲಿ ಖದೀಮರು ರಾಯಲ್ಟಿ ದುರ್ಬಳಕೆ ದಂಧೆ ನಡೆಸುತ್ತಿದ್ದರು. ರಾಯಚೂರು ಸಹಾಯಕ ಆಯುಕ್ತ ಸಂತೋಷ ಕಾಮೇಗೌಡ ನೇತೃತ್ವದ ತಂಡ ದಾಳಿ ನಡೆಸಿ ಹೊಸ ರೀತಿಯ ಅಕ್ರಮವನ್ನು ಬಯಲಿಗೆಳೆದಿದ್ದಾರೆ.
Advertisement
Advertisement
ದೇವದುರ್ಗದ ಭರತ್ ಕುಮಾರ್, ಸಿದ್ದಲಿಂಗ ರೆಡ್ಡಿ, ಚನ್ನನಗೌಡ ಎಂಬವರಿಗೆ ಸೇರಿದ ಔಷಧ ಅಂಗಡಿಯಲ್ಲಿ ಮರಳು ಸಾಗಣೆ ರಾಯಲ್ಟಿ ಮುದ್ರಣ ಮಾಡುತ್ತಿದ್ದ ವೇಳೆ ದಾಳಿ ಮಾಡಿದ ಅಧಿಕಾರಿಗಳು ದಾಳಿಯಲ್ಲಿ ಸುಮಾರು 40 ರಿಂದ 60 ಲಕ್ಷ ಮೌಲ್ಯದ 307 ರಾಯಲ್ಟಿ ಜಪ್ತಿ ಮಾಡಿದ್ದಾರೆ. ಕೊಪ್ಪಳ, ಗದಗ ಜಿಲ್ಲೆಯಲ್ಲಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಹೊಂದಾಣಿಕೆಯಲ್ಲಿ ಖಾಸಗಿ ಜಮೀನಿನ ಮರಳು ಸಾಗಾಣೆಗೆ ಪರವಾನಿಗೆ ಪಡೆದು ರಾಯಲ್ಟಿ ಬಳಸಿ ನದಿಯಿಂದ ಅಕ್ರಮವಾಗಿ ಮರಳು ಸಾಗಣೆ ಮಾಡಲಾಗುತ್ತಿತ್ತು.
Advertisement
ಖಾಸಗಿ ಜಮೀನಿನ ಮರಳು ಸಾಗಣೆಗೆ ಒಂದು ಟನ್ ಗೆ ಕೇವಲ 90 ರೂ ರಾಯಲ್ಟಿಯಿದೆ. ಇನ್ನೂ ಒಂದು ಟಿಪ್ಪರ್ ಗೆ ಕೇವಲ 1,280 ರೂಪಾಯಿಯಿದೆ. ಆದರೆ ನದಿಯಿಂದ ಮರಳು ಸಾಗಣೆ ಮಾಡಲು ಒಂದು ಟಿಪ್ಪರ್ ಗೆ 20 ಸಾವಿರ ವರೆಗೆ ರಾಯಲ್ಟಿ ತುಂಬಬೇಕು. ಹಾಗಾಗಿ ಈ ವಂಚಕರ ತಂಡ ಗುತ್ತಿಗೆದಾರರ ಸಹಕಾರದೊಂದಿಗೆ ಕೊಪ್ಪಳ ಮತ್ತು ಗದಗ ಜಿಲ್ಲೆಯ ರಾಯಲ್ಟಿಗಳನ್ನು ಬಳಸಿ ಮರಳು ಸಾಗಣೆ ನಡೆಸುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಪಡೆದು ದಾಳಿ ಮಾಡಿ ಅಧಿಕಾರಿಗಳು 307 ರಾಯಲ್ಟಿಯನ್ನು ವಶಕ್ಕೆ ಪಡೆದಿದ್ದಾರೆ. ಜಪ್ತಿಯಾದ 307 ರಾಯಲ್ಟಿಯ ಮೊತ್ತ 3 ಲಕ್ಷ 80 ಸಾವಿರ ಆಗಿದೆ.
ಇತ್ತೀಚಿಗೆ ರಾಯಚೂರಿನಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿಲ್ಲೆಯ ಅಕ್ರಮ ಮರಳುಗಾರಿಕೆ ದಂಧೆ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಸದ್ಯ ಜಿಲ್ಲಾಡಳಿತ ಚುರುಕಾದಂತೆ ಕಾಣುತ್ತಿದ್ದು. ದಾಳಿಯಲ್ಲಿ ಓರ್ವ ಆರೋಪಿ ಸಿದ್ದಲಿಂಗ ರೆಡ್ಡಿಯನ್ನು ಬಂಧಿಸಲಾಗಿದೆ. ಅಕ್ರಮ ದಂಧೆಗೆ ರಾಯಲ್ಟಿ ಗುತ್ತಿಗೆ ಪಡೆದಿರುವ ಗುತ್ತಿಗೆದಾರರಾದ ಶಶಿಕಾಂತ್ ಎಸ್ ವಡ್ಡರ್, ಶರಣಬಸ್ಸಪ್ಪ, ಯಲ್ಲಪ್ಪ, ಎಂಎಂ ಬಳ್ಳಾರಿ ಸಾಥ್ ನೀಡಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ದಾಳಿ ಹಿನ್ನೆಲೆ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಓರ್ವ ಆರೋಪಿ ಮಾತ್ರ ಸೆರೆಸಿಕ್ಕಿದ್ದು ಉಳಿದ ಆರೋಪಿಗಳು ಪರಾರಿಯಾಗಿದ್ದಾರೆ.