- ಸ್ಕೂಬಾ ಡೈವಿಂಗ್ ವೇಳೆ ಸಾವನ್ನಪ್ಪಿದ್ದ ಪ್ರಸಿದ್ಧ ಗಾಯಕ
ದಿಸ್ಪುರ: ಸ್ಕೂಬಾ ಡೈವಿಂಗ್ ವೇಳೆ ಸಾವನ್ನಪ್ಪಿದ್ದ ಪ್ರಸಿದ್ಧ ಅಸ್ಸಾಮಿ ಗಾಯಕ ಜುಬೀನ್ ಗಾರ್ಗ್ ಅವರ (Zubeen Garg) ಮರಣೋತ್ತರ ಪರೀಕ್ಷೆ ಸಿಂಗಾಪುರದಲ್ಲಿ ನಡೆಯುತ್ತಿದ್ದು, ಇದೀಗ ಅಸ್ಸಾಂ ಸರ್ಕಾರ (Assam Govt) ಸಾವಿನ ತನಿಖೆ ನಡೆಸಲು ಮುಂದಾಗಿದೆ.
ಈ ಕುರಿತು ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ (Himanta Biswa Sarma) ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಜುಬೀನ್ ಗಾರ್ಗ್ ಸಾವನ್ನಪ್ಪುವ ಮುನ್ನ ಕಾರ್ಯಕ್ರಮ ಆಯೋಜಕರಾದ ಶ್ಯಾಮ್ ಕನು ಮಹಾಂತ ಹಾಗೂ ಸಿದ್ಧಾರ್ಥ ಶರ್ಮಾ ಅವರ ಜೊತೆಗಿದ್ದರು. ಹೀಗಾಗಿ ಈ ಕುರಿತು ಅಸ್ಸಾಂ ಸರ್ಕಾರ ತನಿಖೆ ನಡೆಸಲಿದ್ದು, ಕಾರ್ಯಕ್ರಮ ಆಯೋಜಕರ ವಿರುದ್ಧ ಮೋರಿಗಾಂವ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಸ್ಕೂಬಾ ಡೈವಿಂಗ್ ವೇಳೆ ಬಾಲಿವುಡ್‌ನ ಖ್ಯಾತ ಗಾಯಕ ಜುಬೀನ್ ಗಾರ್ಗ್ ಸಾವು
ಆಯೋಜಕರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ಸಿಐಡಿಗೆ ವರ್ಗಾಯಿಸಿ, ವಿಚಾರಣೆ ನಡೆಸಿ ಎಂದು ಅಸ್ಸಾಂ ಪೊಲೀಸರಿಗೆ ನಿರ್ದೇಶನ ನೀಡಿದ್ದೇನೆ. ಸಿಂಗಾಪುರ ಕಮಿಷನರ್ ಅವರೊಂದಿಗೆ ಮಾತನಾಡಿ ವಿವರವಾಗಿ ತನಿಖೆ ಮಾಡುವಂತೆ ಮನವಿ ಮಾಡಿಕೊಂಡಿದ್ದೇನೆ ಎಂದಿದ್ದಾರೆ.
ಈಶಾನ್ಯ ಉತ್ಸವದಲ್ಲಿ ಪಾಲ್ಗೊಳ್ಳಲು ಜುಬೀನ್ ಗಾರ್ಗ್ ಅವರು ಸಿಂಗಾಪುರಕ್ಕೆ ತೆರಳಿದ್ದರು. ಈ ವೇಳೆ ಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ವೇಳೆ ಅವಘಡಕ್ಕೆ ಸಿಲುಕಿ ಗಂಭೀರ ಸ್ಥಿತಿಯಲ್ಲಿದ್ದ ಗರ್ಗ್ ಅವರನ್ನು ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.
ಜುಬೀನ್ ಗರ್ಗ್ ಅಸ್ಸಾಮಿ ಮತ್ತು ಹಿಂದಿ ಮಾತ್ರವಲ್ಲದೆ, ಬಂಗಾಳಿ, ಮರಾಠಿ, ತಮಿಳು, ತೆಲುಗು ಮತ್ತು ನೇಪಾಳಿ ಸೇರಿದಂತೆ ಹಲವು ಭಾಷೆಗಳಿಗೆ ಹಾಡಿದ್ದಾರೆ. ತಮ್ಮ ಮೂರನೇ ವಯಸ್ಸಿನಲ್ಲೇ ಹಾಡಲು ಪ್ರಾರಂಭಿಸಿದರು. ಅವರ ಮೊದಲ ಆಲ್ಬಂ ‘ಅನಾಮಿಕಾ’ 1992 ರಲ್ಲಿ ಬಿಡುಗಡೆಯಾಯಿತು. ‘ಮಾಯಾ’, ‘ಜುಬೀನೋರ್ ಗಾನ್’, ‘ಕ್ಸಾಬ್ಡಾ’, ‘ಪಾಖಿ’, ‘ಶಿಶು’, ‘ಜಂತ್ರ’ ಅವರ ಅತ್ಯಂತ ಪ್ರೀತಿಯ ಅಸ್ಸಾಮೀಸ್ ಆಲ್ಬಂಗಳಲ್ಲಿ ಕೆಲವು. ಅವರು ‘ದಿಲ್ ಸೆ’, ‘ವಾಸ್ತವ್’, ‘ಫಿಜಾ’, ‘ಅಶೋಕ’, ‘ಕಾಂಟೆ’, ‘ಗ್ಯಾಂಗ್‌ಸ್ಟರ್’, ‘ಕ್ರಿಶ್ 3’ ಮತ್ತು ಇನ್ನೂ ಹೆಚ್ಚಿನ ಹಿಂದಿ ಚಿತ್ರಗಳಿಗೂ ಹಾಡಿದ್ದಾರೆ. ಆದಾಗ್ಯೂ, ಗ್ಯಾಂಗ್‌ಸ್ಟರ್‌ಗಾಗಿ ಅವರು ಹಾಡಿದ್ದ ‘ಯಾ ಅಲಿ’ ಹಾಡು ಅವರಿಗೆ ಅಸ್ಸಾಂನ ಹೊರಗೂ ಜನಪ್ರಿಯತೆ ತಂದುಕೊಟ್ಟಿತು.ಇದನ್ನೂ ಓದಿ: ಮಾರಿಗಲ್ಲು ವೆಬ್ ಸರಣಿ : ಅಪ್ಪು ಕನಸು ನನಸು