ಪುಣೆ: ಪನೀರ್ ಡೆಲಿವರಿ ಮಾಡುವ ಬದಲು ಚಿಕನ್ ಡೆಲಿವರಿ ಮಾಡಿದ್ದಕ್ಕೆ ಗ್ರಾಹಕರ ನ್ಯಾಯಾಲಯ ಆನ್‍ಲೈನ್ ಆಹಾರ ಮಾರಾಟ ಸಂಸ್ಥೆ ಝೊಮ್ಯಾಟೊ ಹಾಗೂ ಹೋಟೆಲ್‍ಗೆ 55 ಸಾವಿರ ರೂ. ದಂಡ ವಿಧಿಸಿದೆ.
ವಕೀಲರೊಬ್ಬರು ಆನ್‍ಲೈನ್ ಆಹಾರ ಮಾರಾಟ ಜಾಲತಾಣ ಝೊಮ್ಯಾಟೊದಲ್ಲಿ ಪನೀರ್ ಆರ್ಡರ್ ಮಾಡಿದ್ದಾನೆ. ಆದರೆ ಡೆಲಿವರಿ ಬಾಯ್ ಮಾತ್ರ ಚಿಕನ್ ತಂದು ಕೊಟ್ಟಿದ್ದಾನೆ. ಈ ಕುರಿತು ವಕೀಲ ಷಣ್ಮುಖ ದೇಶಮುಖ್ ಗ್ರಾಹಕರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರು.
ಪ್ರಕರಣದ ವಿಚಾರಣೆ ನಡೆಸಿದ ಶುಭಾಂಗಿ ದುನಾಖೆ ಮತ್ತು ಅನಿಲ್ ಜವಲೇಕರ್ ಅವರಿದ್ದ ಪೀಠ, ಪುಣೆಯ ಕೇಂದ್ರ ಕಚೇರಿ, ಗುರ್ಗಾಂವ್ ಕೇಂದ್ರ ಕಚೇರಿ ಹಾಗೂ ಪುಣೆಯ ಹೋಟೆಲ್ ಪ್ರೀತ್ ಪಂಜಾಬಿ ಸ್ವಾದ್ ಹೋಟೆಲ್‍ಗೆ 55 ಸಾವಿರ ರೂ. ದಂಡ ವಿಧಿಸಿದ್ದು, 45 ದಿನಗಳಲ್ಲಿ ದಂಡವನ್ನು ಗ್ರಾಹಕರಿಗೆ ಪಾವತಿಸವಂತೆ ಸೂಚಿಸಿದೆ. ತಡವಾದರೆ ಅದಕ್ಕೆ ಅನ್ವಯವಾಗುವ ಬಡ್ಡಿಯನ್ನು ಸೇರಿಸಿ ಹಣ ನಿಡುವಂತೆ ಸೂಚಿಸಿದೆ.
ಸಂಸ್ಥೆಯು ಕೇವಲ ಒಂದು ಬಾರಿಯಲ್ಲ ಎರಡು ಬಾರಿ ಇದೇ ರೀತಿ ಮಾಡಿದ್ದು, ವಕೀಲ ದೇಶಮುಖ್ ಅವರು ಪನೀರ್ ಬಟರ್ ಮಸಾಲಾ ಆರ್ಡರ್ ಮಾಡಿದ್ದಾರೆ. ಆದರೆ, ಸಂಸ್ಥೆ ಬಟರ್ ಚಿಕನ್ ಡೆಲಿವರಿ ಮಾಡಿದೆ. ಎರಡೂ ಒಂದೇ ರೀತಿ ಕಾಣುವುದರಿಂದ ಅರಿವಾಗದೆ ಗ್ರಾಹಕ ಅದನ್ನು ತಿಂದಿದ್ದಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಝೊಮ್ಯಾಟೊ ಸ್ಪಷ್ಟಪಡಿಸಿದ್ದು, ವಕೀಲರು ಆಪ್‍ನಲ್ಲಿಯೇ ದೂರು ನೀಡಿದ್ದರು. ಈಗಾಗಲೇ ಅವರ ಹಣವನ್ನು ಮರುಪಾವತಿ ಮಾಡಲಾಗಿದೆ ಎಂದು ತಿಳಿಸಿದೆ. ಅಲ್ಲದೆ ಬೇರೆ ಪದಾರ್ಥ ಡೆಲಿವರಿ ಮಾಡಿರುವುದು ಹೋಟೆಲ್ ತಪ್ಪು ಎಂದು ಝೊಮ್ಯಾಟೊ ವಾದಿಸಿದೆ. ಹೋಟೆಲ್‍ನಷ್ಟೇ ತಪ್ಪು ಸಂಸ್ಥೆಯದ್ದೂ ಇದೆ ಎಂದು ಗ್ರಾಹಕರ ನ್ಯಾಯಾಲಯ ತಿಳಿಸಿದೆ. ಹೋಟೆಲ್ ಸಹ ತನ್ನ ತಪ್ಪನ್ನು ಒಪ್ಪಿಕೊಂಡಿದೆ.
ಝೊಮ್ಯಾಟೊ ಹಾಗೂ ಹೋಟೆಲ್ ಎರಡೂ ಸೇರಿ ಕೆಲಸದಲ್ಲಿನ ಎಡವಟ್ಟು ಹಾಗೂ ಮಾನಸಿಕ ಕಿರುಕುಳ ನೀಡಿದ್ದಕ್ಕೆ 50 ಸಾವಿರ ರೂ. ದಂಡ ನೀಡುವಂತೆ ಸೂಚಿಸಿದೆ.