DistrictsKarnatakaLatestTumakuru

ವಿಧಾನಸಭೆ ಆಯ್ತು ಈಗ ತುಮಕೂರು ಜಿಲ್ಲಾ ಪಂಚಾಯ್ತಿಯಲ್ಲೂ ಟಗರುಗಳ ಕಾಳಗ

– ಜಿ.ಪಂ ಅಧ್ಯಕ್ಷೆ, ಉಪಾಧ್ಯಕ್ಷರ ವಿರುದ್ದ ಅವಿಶ್ವಾಸ ಮಂಡನೆಗೆ ನಿರ್ಧಾರ

ತುಮಕೂರು: ವಿಧಾನಸಭೆ ಒಳಗೆ ಮತ್ತು ಹೊರಗೆ ಒಂದೇ ಸಮುದಾಯಕ್ಕೆ ಸೇರಿದ ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಕೆ.ಎಸ್ ಈಶ್ವರಪ್ಪ, ಮಾಜಿ ಶಾಸಕ ಹೆಚ್.ವಿಶ್ವನಾಥ್ ನಡುವಿನ ಮಾತಿನ ಸಮರ ಒಂದು ರೀತಿ ಟಗರು ಕಾಳಗದಂತಾಗಿ ಇಡೀ ರಾಜ್ಯದ ಗಮನ ಸೆಳೆದಿದೆ. ಇತ್ತ ತುಮಕೂರು ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಿರುವ ಕುರುಬ ಸಮುದಾಯದ ಲತಾ ರವಿ ಕುಮಾರ್ ವಿರುದ್ಧ ಅವರ ಸಮುದಾಯದ ಸದಸ್ಯರೇ ತಿರುಗಿ ಬಿದ್ದಿದ್ದು, ಇದು ಕೂಡ ಒಂದು ರೀತಿ ಟಗರು ಕಾಳಗದಂತೆ ಪರಿಣಮಿಸಿದೆ.

ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತಂದ ಬಳಿಕ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಐದು ವರ್ಷಗಳ ಕಾಲ ಬದಲಾಗದಂತೆ ನಿಯಮ ರೂಪಿಸಲಾಗಿದೆ. ಆದರೆ ಸ್ಥಳೀಯವಾಗಿ ಉಭಯ ಪಕ್ಷಗಳ ಮುಖಂಡರ ಒಪ್ಪಂದದಂತೆ ಅಧಿಕಾರವನ್ನ ಅನುಕೂಲಕ್ಕೆ ತಕ್ಕಂತೆ ಹಂಚಿಕೆ ಮಾಡಲಾಗುತ್ತಿದೆ. ಅದರಂತೆ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಮೈತ್ರಿಯಾಗಿ ತುಮಕೂರು ಜಿಲ್ಲಾಪಂಚಾಯ್ತಿ ಅಧಿಕಾರವನ್ನ ಹಿಡಿದಿವೆ. ಬಿಸಿಎಂ(ಎ)ಗೆ ಮೀಸಲಾಗಿದ್ದ ತುಮಕೂರು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನವನ್ನ ಕುರುಬ ಸಮುದಾಯದ ತಾವರೇಕೆರೆ ಕ್ಷೇತ್ರದ ಜೆಡಿಎಸ್‍ನ ಲತಾ ರವಿಕುಮಾರ್ ಅವರಿಗೆ ನೀಡಲಾಗಿದೆ. ಎಸ್‍ಸಿ ಮೀಸಲಾತಿಯ ಉಪಾಧ್ಯಕ್ಷ ಸ್ಥಾನವನ್ನ ಹೆಗ್ಗೆರೆ ಕ್ಷೇತ್ರದ ಬಿಜೆಪಿಯ ಶಾರದ ನರಸಿಂಹ ಮೂರ್ತಿಗೆ ನೀಡಲಾಗಿದ್ದು, ಇಬ್ಬರೂ ನಾಲ್ಕು ವರ್ಷ ಪೂರೈಸಿದ್ದಾರೆ. ಇನ್ನುಳಿದ ಒಂದು ವರ್ಷಕ್ಕಾದರೂ ಬೇರೆಯವರಿಗೆ ಅಧಿಕಾರ ಸಿಗಲೆಂದು ಉಭಯ ಪಕ್ಷಗಳ ಕೆಲ ಸದಸ್ಯರು ಪಕ್ಷಾತೀತವಾಗಿ ಅವಿಶ್ವಾಸ ಮಂಡನೆಗೆ ಮುಂದಾಗಿದ್ದಾರೆ.

ಕುರುಬ ಸಮುದಾಯದ ಸದಸ್ಯರಿಂದಲೇ ಸಹಿ ಸಂಗ್ರಹ:
ಅಧ್ಯಕ್ಷ ಉಪಾಧ್ಯಕ್ಷರ ವಿರುದ್ದದ ಅವಿಶ್ವಾಸ ನಿರ್ಣಯದ ಪತ್ರಕ್ಕೆ ಸಹಿ ಸಂಗ್ರಹ ಮಾಡಲಾಗುತ್ತಿದೆ. ಈ ಸಹಿ ಸಂಗ್ರಹದ ನೇತೃತ್ವವನ್ನ ಕುರುಬ ಸಮುದಾಯ ಸದಸ್ಯರೇ ವಹಿಸಿದ್ದಾರೆ. ಪುರವರ ಕ್ಷೇತ್ರದ ತಿಮ್ಮಣ್ಣ, ಹುಳಿಯಾರು ಕ್ಷೇತ್ರದ ವೈ.ಸಿ ಸಿದ್ದರಾಮಣ್ಣ, ಹೊನ್ನವಳ್ಳಿ ಕ್ಷೇತ್ರದ ನಾರಾಯಣ್ ಇತರೇ ಅತೃಪ್ತ ಸದಸ್ಯರ ಸಹಿ ಸಂಗ್ರಹಕ್ಕೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ಖಾಸಗಿ ಹೋಟೆಲ್‍ನಲ್ಲಿ ಸಭೆ ಸೇರಿದ್ದ ಹನ್ನೊಂದು ಮಂದಿ ಸದಸ್ಯರು ಈ ಬಾರಿಯಾದರೂ ಅವಿಶ್ವಾಸ ಮಂಡನೆ ಮಾಡಿ ಉಳಿದ ಒಂದು ವರ್ಷದ ಅವಧಿಗೆ ಬೇರೆಯವರನ್ನ ಆಯ್ಕೆ ಮಾಡೋಣ ಎಂಬ ನಿರ್ಧಾರಕ್ಕೆ ಬಂದು ಸಹಿ ಸಂಗ್ರಹ ಮಾಡುತ್ತಿದ್ದಾರೆ ಎನ್ನಲಾಗಿದೆ.

ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಮಹಿಳೆಯರಿಗೆ ಮೀಸಲಾಗದಿದ್ದರೂ ಎರಡೂ ಸ್ಥಾನಗಳನ್ನ ಮಹಿಳಾ ಸದಸ್ಯರಿಗೆ ನೀಡಿರೋದು ಇತರೆ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿಯೇ ಈ ಹಿಂದೆ ಎರಡು ಬಾರಿ ಅವಿಶ್ವಾಸ ನಿರ್ಣಯ ಮಂಡಿಸಲು ನಿರ್ಧಾರ ಮಾಡಿದ್ದರು. ಈಗ ಅನುದಾನ ಹಂಚಿಕೆಯಲ್ಲಿ ತಾರತಮ್ಯ, ಸದಸ್ಯರ ಜೊತೆ ವಿಶ್ವಾಸದಿಂದ ಇಲ್ಲ ಎಂಬ ನೆಪವೊಡ್ಡಿ ಅವಿಶ್ವಾಸ ಮಂಡನೆಗೆ ಮುಂದಾಗಿದ್ದು, ಜೆಡಿಎಸ್‍ನ 13 ಮಂದಿ ಬಿಜೆಪಿಯ 5, ಕಾಂಗ್ರೆಸ್ಸಿನ ಇಬ್ಬರು ಸದಸ್ಯರು ಸಹಿ ಹಾಕಿದ್ದಾರೆ ಎಂದು ಹೇಳಲಾಗ್ತಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಗುರುವಾರ ಸಾಮಾನ್ಯ ಸಭೆ ಕರೆಯಲಾಗಿದ್ದು, ಬಹುತೇಕ ಸದಸ್ಯರು ಸಭೆಯನ್ನ ಬಹಿಷ್ಕರಿಸಲಿದ್ದಾರೆ ಎಂದು ಸದಸ್ಯರೊಬ್ಬರು ಹೇಳಿದ್ದಾರೆ.

ಸಮ್ಮಿಶ್ರ ಸರ್ಕಾರ ಪತನದ ಬಳಿಕ ರಾಜ್ಯ ಮಟ್ಟದಲ್ಲಿ ಉಭಯ ಪಕ್ಷಗಳ ನಾಯಕರ ನಡುವೆ ಹೊಂದಾಣಿಕೆ ಇಲ್ಲದಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಇನ್ನ ಜಿಲ್ಲಾ ನಾಯಕತ್ವ ವಹಿಸಿಕೊಂಡಿದ್ದ ಜೆಡಿಎಸ್ ಶಾಸಕ ಎಸ್.ಆರ್ ಶ್ರೀನಿವಾಸ್ ಆ್ಯಂಡ್ ಟೀಂ ಈಗಾಗಲೇ ಜೆಡಿಎಸ್‍ನಿಂದ ಒಂದು ಹೆಜ್ಜೆ ಹೊರಗಿಟ್ಟಿದೆ. ಬಿಜೆಪಿ ನಾಯಕರಲ್ಲೂ ಹೊಂದಾಣಿಕೆ ಇಲ್ಲದ ಹಿನ್ನೆಲೆಯಲ್ಲಿ ಸದಸ್ಯರುಗಳೇ ಈ ನಿರ್ಧಾರಕ್ಕೆ ಬಂದಿದ್ದಾರೆ.

ಮೂಲಗಳ ಪ್ರಕಾರ ಕಾಂಗ್ರೆಸ್ ಜೆಡಿಎಸ್ ಹೊಂದಾಣಿಕೆಯಾಗುವ ಸಾಧ್ಯತೆಗಳಿವೆ. ಹೀಗಾಗಿಯೇ ಕಾಂಗ್ರೆಸ್ ಸದಸ್ಯರು ಅವಿಶ್ವಾಸ ಮಂಡನೆಗೆ ಸಾಥ್ ನೀಡುತ್ತಿದ್ದಾರೆ ಎನ್ನಲಾಗ್ತಿದೆ. ಈ ಎಲ್ಲಾ ಗೊಂದಲ, ಗದ್ದಲಕ್ಕೆ ಉಭಯ ಪಕ್ಷಗಳ ವರಿಷ್ಠರೇ ತೆರೆ ಎಳೆಯುತ್ತಾರಾ ಅಥವ ಹೈಕಮಾಂಡ್‍ಗೆ ಸೆಡ್ಡು ಹೊಡೆದು ಅತೃಪ್ತ ಸದಸ್ಯರು ತಮ್ಮ ಗುರಿ ಸಾಧಿಸುತ್ತಾರಾ ಅನ್ನೋದು ಸದ್ಯದ ಕುತೂಹಲವಾಗಿದೆ.

Leave a Reply

Your email address will not be published.

Back to top button