ರಾಯಚೂರು: ರಾಜ್ಯದಲ್ಲೇ ಮೊದಲ ಝಿಕಾ ವೈರಸ್ (Zika Virus) ಪ್ರಕರಣ ರಾಯಚೂರಿನಲ್ಲಿ (Raichur) ಪತ್ತೆಯಾಗಿರುವ ಹಿನ್ನೆಲೆ ರಾಜ್ಯ ಸರ್ಕಾರ ಅಲರ್ಟ್ ಆಗಿದೆ. ರಾಜ್ಯ, ಕೇಂದ್ರ ತಂಡಗಳು ರಾಯಚೂರಿನಲ್ಲಿ ಬೀಡು ಬಿಟ್ಟಿವೆ. ಗರ್ಭಿಣಿಯರ ಮೇಲೆ ವೈರಸ್ ಹೆಚ್ಚು ಪರಿಣಾಮ ಬೀರುವುದರಿಂದ ಆರೋಗ್ಯ ಇಲಾಖೆ (Health Department) ಕಾಂಡೋಮ್ (Condom) ವಿತರಣೆ ಮಾಡುತ್ತಿದೆ.
Advertisement
ರಾಯಚೂರಿನ ಮಾನ್ವಿಯ ಕೋಳಿ ಕ್ಯಾಂಪ್‌ನ ಬಾಲಕಿಯಲ್ಲಿ ಝಿಕಾ ವೈರಸ್ ಪತ್ತೆಯಾಗಿರುವುದು ರಾಜ್ಯದ ಮೊದಲ ಪ್ರಕರಣವಾಗಿರುವುದರಿಂದ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲು ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಹೀಗಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತರು ಕೋಳಿ ಕ್ಯಾಂಪ್ ಸುತ್ತಮುತ್ತಲ ಗ್ರಾಮಗಳಲ್ಲಿ ಸೊಳ್ಳೆಗಳ ನಿಯಂತ್ರಣ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ನಿರಂತರ ಫಾಗಿಂಗ್ ನಡೆಸಲಾಗುತ್ತಿದೆ.
Advertisement
Advertisement
ಕೋಳಿ ಕ್ಯಾಂಪ್ ಸುತ್ತಮುತ್ತಲ 5 ಕಿ.ಮೀ ವ್ಯಾಪ್ತಿಯ ಗ್ರಾಮಗಳಲ್ಲಿ ಲಾರ್ವಾ ಸರ್ವೆ, ಗರ್ಭಿಣಿಯರ ರಕ್ತ ಪರೀಕ್ಷೆ, ಜ್ವರದ ಪ್ರಕರಣ ಪತ್ತೆ ಕಾರ್ಯ ನಡೆದಿದೆ. ಗರ್ಭಿಣಿಯರಲ್ಲಿ ಝಿಕಾ ವೈರಸ್ ಪತ್ತೆಯಾದರೆ ಹುಟ್ಟುವ ಮಗುವಿನ ಮೇಲೆ ಗಂಭೀರ ಪರಿಣಾಮ ಬೀರುವುದರಿಂದ ಗರ್ಭಿಣಿಯರ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಜೊತೆಗೆ ಮಗುವನ್ನು ಬಯಸುವವರು ಇನ್ನೂ 6 ತಿಂಗಳು ಮುಂದೂಡಿ ಎಂದು ಜಾಗೃತಿ ಮೂಡಿಸುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ ದಂಪತಿಗೆ ಕಾಂಡೋಮ್ ವಿತರಣೆ ಮಾಡುತ್ತಿದ್ದಾರೆ. ಮನೆ ಮನೆಗೆ ತೆರಳಿ ತಪಾಸಣೆ ಮಾಡುವುದರ ಜೊತೆಗೆ ಅರಿವು ಮೂಡಿಸುತ್ತಿದ್ದಾರೆ. ಇದನ್ನೂ ಓದಿ: ಗಡಿ ವಿವಾದದ ನಡುವೆಯೂ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಭೇಟಿ
Advertisement
ವೈರಸ್ ಪತ್ತೆಗೆ ಕಾರಣ ತಿಳಿಯುವ ಹಿನ್ನೆಲೆ ಕೇಂದ್ರ ತಜ್ಞರ ತಂಡ, ವೈದ್ಯರು, ಅಧಿಕಾರಿಗಳು ನಿರಂತರ ಸಭೆ ನಡೆಸುತ್ತಿದ್ದಾರೆ. ಜಿಲ್ಲೆಯ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಯ ಮಕ್ಕಳ ತಜ್ಞರು, ಸ್ತ್ರೀರೋಗ ತಜ್ಞರು, ಮಲೇರಿಯಾ ವಿಭಾಗದ ವೈದ್ಯರು ಝಿಕಾ ವೈರಸ್ ನಿಂದ ಆರೋಗ್ಯದ ಮೇಲೆ ಉಂಟಾಗಬಹುದಾದ ದುಷ್ಪರಿಣಾಮಗಳು ಹಾಗೂ ನಿಯಂತ್ರಣ ಬಗ್ಗೆ ಚರ್ಚೆ ನಡೆಸಿದ್ದಾರೆ. ಗ್ರಾಮಗಳಲ್ಲಿ ಸಂಗ್ರಹಿಸಿರುವ ರಕ್ತ ಮಾದರಿಗಳನ್ನು ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಅಧಿಕಾರಿಗಳು, ವೈದ್ಯರು ವೈರಸ್ ಪತ್ತೆಯಾದ ಬಾಲಕಿ ಮನೆಗೆ ಪದೇ ಪದೇ ಬಂದು ಹೋಗುತ್ತಿರುವುದಕ್ಕೆ ಬಾಲಕಿ ಕುಟುಂಬಸ್ಥರು ಗಾಬರಿಗೊಂಡಿದ್ದಾರೆ.
ಒಟ್ಟಿನಲ್ಲಿ ರಾಜ್ಯದಲ್ಲಿ ಪತ್ತೆಯಾದ ಮೊದಲ ಝಿಕಾ ಪ್ರಕರಣ ಅಧಿಕಾರಿಗಳನ್ನು ಅಲರ್ಟ್ ಮಾಡಿದೆ. ಕೇಂದ್ರದಿಂದ ಬಂದ ತಂಡ ರಾಯಚೂರು ಜಿಲ್ಲೆಯಲ್ಲಿನ ತ್ಯಾಜ್ಯ ವಿಲೆವಾರಿ ನಿರ್ವಹಣೆ ವೈಫಲ್ಯ, ಗ್ರಾಮೀಣ ಪ್ರದೇಶಗಳಲ್ಲಿನ ಸ್ವಚ್ಛತೆ ಕೊರತೆ ಬಗ್ಗೆ ಅಸಮಧಾನ ವ್ಯಕ್ತಪಡಿಸಿದೆ. ಸೊಳ್ಳೆ ಕಚ್ಚುವುದರಿಂದ ಮಾತ್ರ ವೈರಸ್ ಹರಡುವುದರಿಂದ ಜನ ಗಾಬರಿಗೊಳ್ಳಬಾರದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಜನರಿಗೆ ಧೈರ್ಯ ನೀಡುತ್ತಿದ್ದಾರೆ. ಇದನ್ನೂ ಓದಿ: ಭಾರತ-ಚೀನಾ ಗಡಿ ಸಂಘರ್ಷ – ಅರುಣಾಚಲ ಪ್ರದೇಶದಲ್ಲಿ ವಾಯು ಗಸ್ತು ಆರಂಭಿಸಿದ ಭಾರತೀಯ ಸೇನೆ
Live Tv