ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಗಂಡು ಜೀಬ್ರಾ ಏಕಾಏಕಿ ಮೃತಪಟ್ಟಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಇಸ್ರೇಲ್ ನಿಂದ ಪ್ರಾಣಿಯ ವಿನಿಮಯ ಒಪ್ಪಂದದ ಅಡಿಯಲ್ಲಿ 4 ವರ್ಷಗಳ ಹಿಂದೆ ಎರಡು ಹೆಣ್ಣು, ಎರಡು ಗಂಡು ಜೀಬ್ರಾಗಳನ್ನು ತರಲಾಗಿತ್ತು. ಈ ತಂಡದಲ್ಲಿ ಇದ್ದ ಗಂಡು ಜೀಬ್ರಾ ಸಾವನ್ನಪ್ಪಿರುವುದಕ್ಕೆ ಪ್ರಾಣಿ ಪ್ರೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.
ಇಸ್ರೇಲ್ ನಿಂದ ತಂದಿದ್ದ ಜೀಬ್ರಾಗಳಲ್ಲಿ ಕಳೆದ ವರ್ಷವಷ್ಟೇ ಗರ್ಭಿಣಿಯಾಗಿದ್ದ ಜೀಬ್ರಾವೊಂದು ಗಿಡ ನೆಡಲು ತೆಗೆಯಲಾಗಿದ್ದ ಗುಂಡಿಗೆ ಬಿದ್ದು ಸಾವನ್ನಪ್ಪಿತ್ತು. ಆದಾದ ಒಂದು ವರ್ಷದ ಮತ್ತೊಂದು ಜೀಬ್ರಾ ಸಾವನ್ನಪ್ಪಿದೆ. ಉದ್ಯಾನವನದ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಅಂದು ಜೀಬ್ರಾ ಮೃತಪಟ್ಟಿತ್ತು. ಈ ಘಟನೆ ಮಾಸುವ ಮುನ್ನವೇ ಈಗ ಮತ್ತೊಂದು ಜೀಬ್ರಾ ಸಾವನ್ನಪ್ಪಿದೆ.
ಜೀಬ್ರಾ ಸಾವಿನ ಮಾಹಿತಿಗಾಗಿ ಮರಣೋತ್ತರ ಪರೀಕ್ಷೆ ಯನ್ನು ಉದ್ಯಾನವನದ ವೈದ್ಯರ ತಂಡ ಕೈಗೊಂಡಿದ್ದು, ಇದೀಗ ಉದ್ಯಾನವನದಲ್ಲಿ ವಿದೇಶದಿಂದ ತರಲಾಗಿರುವ ನಾಲ್ಕು ಜೀಬ್ರಾಗಳಲ್ಲಿ ಕೇವಲ 2 ಜೀಬ್ರಾಗಳು ಮಾತ್ರ ಉಳಿದಿವೆ.
ಜೀಬ್ರಾ ಬಂದ ಆರಂಭದಲ್ಲಿ ಇವುಗಳನ್ನು ಪ್ರತ್ಯೇಕವಾಗಿ ಇರಿಸಿ ನೋಡಲಾಗಿತ್ತು. ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡ ಬಳಿಕವೇ ಪ್ರವಾಸಿಗರ ವೀಕ್ಷಣೆಗೆ ಅವಕಾಶ ನೀಡಲಾಗಿತ್ತು.