ತುಮಕೂರು: ಜಮೀರ್ ಅಹಮದ್ ಸಾಹೇಬರು ಭವಿಷ್ಯದ ಒಬ್ಬ ಮುಸ್ಲಿಂ ನಾಯಕ. ಮುಂದೆ ಈ ರಾಜ್ಯದಲ್ಲಿ ಮುಸ್ಲಿಮರ ಕಷ್ಟ-ದುಃಖಗಳಿಗೆ ಸ್ಪಂದಿಸುವ ಏಕೈಕ ನಾಯಕರಾಗಿ ಹೊರಹೊಮ್ಮುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೊರಟಗೆರೆ ತಾಲೂಕಿನ ಅಕ್ಕಿರಾಂಪುರದಲ್ಲಿ ನಡೆದ ಉರುಸ್ ಕಾರ್ಯಕ್ರಮದಲ್ಲಿ ಪರಮೇಶ್ವರ್ ಅವರು ಪಾಲ್ಗೊಂಡಿದ್ದರು. ಈ ವೇಳೆ ಮುಸ್ಲಿಮ್ ಸಮುದಾಯದವರನ್ನು ಉದ್ದೇಶಿಸಿ ಮಾತನಾಡುತ್ತಾ ಜಮೀರ್ ರನ್ನು ಹಾಡಿ ಹೊಗಳಿದ್ದಾರೆ. ಹತ್ತು ವರ್ಷದ ಹಿಂದೆಯೇ ಜಮೀರ್ ಅವರನ್ನು ಕಾಂಗ್ರೆಸ್ ಗೆ ತರಲು ನಾನು ಬಹಳ ಕಷ್ಟಪಟ್ಟಿದ್ದೆ. ಜನತಾ ದಳದಲ್ಲಿದ್ದರೆ ಸಾಧನೆ ಮಾಡಲು ಆಗಲ್ಲ ಎಂದು ಜಮೀರ್ ಗೆ ಹೇಳಿದ್ದೆ. ಈಗ ಕಾಲ ಕೂಡಿ ಬಂದಿದೆ. ಜಮೀರ್ ಬಹಳ ಎತ್ತರಕ್ಕೆ ಬೆಳೆಯುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
Advertisement
ಸ್ವತಃ ರಾಹುಲ್ ಗಾಂಧಿಯವರೇ ಜಮೀರ್ ಅವರನ್ನು ಸ್ವಾಗತ ಮಾಡಿ ಅದರ ಫೋಟೋ ನನಗೆ ಕಳುಹಿಸಿದ್ದಾರೆ. ಅಷ್ಟರಮಟ್ಟಿಗೆ ಜಮೀರ್ ಪ್ರಭಾವಶಾಲಿ ನಾಯಕರಾಗಿದ್ದಾರೆ. ಡಿಸೆಂಬರ್ ನಲ್ಲಿ ಜಮೀರ್ ಅಧಿಕೃತವಾಗಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿ ರಾಜ್ಯಾದ್ಯಂತ ಮುಸ್ಲಿಂ ಸಮಾವೇಶ ಮಾಡುತ್ತಾರೆ. ದೇಶದಲ್ಲಿ ಮುಸ್ಲಿಂ ಬಾಂಧವರ ಸಂಖ್ಯೆ ಕಡಿಮೆ ಇದೆ. ಆದ್ರೆ ಕರ್ನಾಟಕದಲ್ಲಿ ಮುಸ್ಲಿಂ ಜನಸಂಖ್ಯೆ ಎರಡನೇ ಸ್ಥಾನದಲ್ಲಿದೆ ಎಂದು ಜಿ.ಪರಮೇಶ್ವರ್ ತಿಳಿಸಿದರು.