ನ್ಯಾಷನಲ್ ಟ್ರಾವೆಲ್ಸ್ ನಲ್ಲಿ ರೈಫಲ್ಸ್ ಸಿಕ್ಕಿದ್ದು ದೇಶದ್ರೋಹ ಅಲ್ವಾ? ಜಮೀರ್​ಗೆ ರೇಣುಕಾಚಾರ್ಯ ಸವಾಲ್

Public TV
1 Min Read
Zameer Renuka

ಬೆಂಗಳೂರು: ಜಮೀರ್ ವರ್ಸಸ್ ಬಿಜೆಪಿ ಶಾಸಕರ ನಡುವಿನ ಕಾದಾಟ ಕಾವೇರುತ್ತಿದೆ. ಆರ್‌ಎಸ್‌ಎಸ್‌ ನಿಷೇಧಿಸಬೇಕು ಎಂಬ ಮಾಜಿ ಸಚಿವ ಜಮೀರ್ ಹೇಳಿಕೆಗೆ ಶಾಸಕ ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ. ಜಮೀರ್ ನ್ಯಾಷನಲ್ ಟ್ರಾವೆಲ್ಸ್ ನಲ್ಲಿ ಬಂದೂಕುಗಳು ಸಿಕ್ಕಿದ್ದವು. ಅದು ದೇಶ ದ್ರೋಹ ಅಲ್ವಾ ಅಂತಾ ಕಿಡಿಕಾರಿದ್ದಾರೆ.

Zameer Ahmed

ವಿಕಾಸ ಸೌಧದಲ್ಲಿ ಸುದ್ದಿಗೋಷ್ಠಿ ಕರೆದಿದ್ದ ರೇಣುಕಾಚಾರ್ಯ, ಜಮೀರ್ ಮತ್ತು ಕುಮಾರಸ್ವಾಮಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು. 2005ರಲ್ಲಿ ಜಮೀರ್ ದುಬೈಗೆ ಹೋಗಿದ್ದರು. ಆಗ ನ್ಯಾಷನಲ್ ಟ್ರಾವೆಲ್ಸ್ ಬಸ್‍ನಲ್ಲಿ ಬಂದೂಕುಗಳು ಸಿಕ್ಕಿದ್ವು, ಅದು ದೇಶ ದ್ರೋಹ ಅಲ್ಲವಾ? ಇನ್ನೊಂದು ಸಾರಿ ಆರ್‌ಎಸ್‌ಎಸ್‌ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ. ಆರ್‌ಎಸ್‌ಎಸ್‌ ಬಗ್ಗೆ ಮಾತನಾಡುವ ಜಮೀರ್, ಖಾದರ್ ದೇಶದ್ರೋಹಿಗಳು. ಆರ್‌ಎಸ್‌ಎಸ್‌ ಬಗ್ಗೆ ಇನ್ನೊಂದು ಸಾರಿ ಮಾತಾಡಬೇಡಿ ಅಂತಾ ಎಚ್ಚರಿಕೆ ಕೊಡ್ತಾ ಇದ್ದೀನಿ ಎಂದು ವಾಗ್ದಾಳಿ ನಡೆಸಿದರು.

renukacharya

ಇನ್ನು ಹೆಚ್‍ಡಿಕೆ ವಿರುದ್ಧವೂ ಕೆಂಡಕಾರಿದ ರೇಣುಕಾಚಾರ್ಯ, ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಪ್ರಕರಣದ ಬಗ್ಗೆ ಕುಮಾರಸ್ವಾಮಿ ಮಾತನಾಡಿ ಯುಗಪುರಷ ಎಂಬುದನ್ನ ಸಾಬೀತು ಮಾಡಿದ್ದಾರೆ ಅಂತಾ ವ್ಯಂಗವಾಡಿದರು. ಜೆಡಿಎಸ್ ಕಾರ್ಯಕರ್ತನ ಮೇಲೆ ಮಂಡ್ಯ ಜಿಲ್ಲೆಯಲ್ಲಿ ದೌರ್ಜನ್ಯ ನಡೆದಾಗ ಇದೇ ಕುಮಾರಸ್ವಾಮಿ, ಮಂಡ್ಯ ಎಸ್ ಪಿಗೆ ಶೂಟ್ ಮಾಡಿ ಅಂತ ಹೇಳಿರಲಿಲ್ಲವೇ? ಇವರು ಸಿಎಂ ಆಗಿದ್ದಾಗ ಇದ್ದ ಪೋಲೀಸರೇ ಈಗಲೂ ಇಲ್ಲವೇ? ನಿಮ್ಮ ರಕ್ಷಣೆಗೆ ಪೊಲೀಸರು ಬೇಕು. ಈಗ ಮಂಗಳೂರು ಘಟನೆ ಕುರಿತು ಪೊಲೀಸರ ನೈತಿಕತೆ ಕುಗ್ಗಿಸುವ ಮಾತುಗಳನ್ನು ಯಾಕೆ ಆಡುತ್ತಿದ್ದೀರಿ, ಬಾಂಬ್‍ಗೆ ಬಳಸಿದ್ದು ಮುಖಕ್ಕೆ ಹಾಕುವ ಪೌಡರ್ ಅಂತ ಹೇಳಿ ನಿಮ್ಮ ಯೋಗ್ಯತೆಗೆ ತಕ್ಕಂತೆ ಮಾತನಾಡಿದ್ದೀರಿ ಎಂದರು.

Share This Article
Leave a Comment

Leave a Reply

Your email address will not be published. Required fields are marked *