ಬೆಂಗಳೂರು: ಅನ್ನಭಾಗ್ಯ ಯೋಜನೆಯ 2 ಕೆಜಿ ಅಕ್ಕಿ ಕಡಿತ ವಿಚಾರದ ಬಗ್ಗೆ ಈಗ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯ ಸಚಿವ ಜಮೀರ್ ಅಹ್ಮದ್ ಮಧ್ಯೆ ಇದ್ದ ಭಿನ್ನಾಭಿಪ್ರಾಯ ಬಹಿರಂಗವಾಗಿದೆ.
ಬಜೆಟ್‍ನಲ್ಲಿ ಕುಮಾರಸ್ವಾಮಿ ಅವರು ಅನ್ನಭಾಗ್ಯ ಯೋಜನೆಯ 7 ಕೆಜಿ ಅಕ್ಕಿಯನ್ನು 5 ಕೆಜಿಗೆ ಇಳಿಸಿದ್ದರು. ಇದರಿಂದ ಸರ್ಕಾರದ ಮೇಲಾಗುವ 2 ಸಾವಿರ ಕೋಟಿ ರೂ. ಹೊರೆ ತಡೆಯಬಹುದು ಎಂದು ಲೆಕ್ಕ ಹಾಕಿದ್ದರು. ಅನ್ನ ಭಾಗ್ಯದಲ್ಲಿ ಅಕ್ಕಿ ಕಡಿತಗೊಂಡಿದ್ದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಅಕ್ಕಿ ಕಡಿತ ಮಾಡದಂತೆ ಪತ್ರದ ಮೂಲಕ ಕುಮಾರಸ್ವಾಮಿಯವರಿಗೆ ಮನವಿ ಮಾಡಿಕೊಂಡಿದ್ದರು. ಆದರೆ, ಕುಮಾರಸ್ವಾಮಿ ಅವರು ಯಾವುದೇ ಒತ್ತಡಗಳಿಗೆ, ಮನವಿಗೆ ಒಳಗಾಗದೆ ಅಕ್ಕಿಯ ಕಡಿತವನ್ನು ಹಿಂದಕ್ಕೆ ಪಡೆಯಲಿಲ್ಲ. ಈಗ ಆಹಾರ ಸಚಿವ ಜಮೀರ್ ಅಹ್ಮದ್ ಮೊದಲಿನಂತೆ 7 ಕೆಜಿ ಅಕ್ಕಿಯನ್ನು ನೀಡಲಾಗುತ್ತದೆ ಎಂದು ಪಟ್ಟು ಹಿಡಿದಿದ್ದಾರೆ.
Advertisement
ಅಕ್ಕಿ ಕಡಿತದ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ಅವರು ನನ್ನ ಬಳಿ ಚರ್ಚೆ ಮಾಡಬೇಕಿತ್ತು. ಆದರೆ ಹಾಗೇ ಮಾಡಲಿಲ್ಲ. ಹೀಗಾಗಿ ಹಿಂದಿನಂತೆ 7 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದರು.
Advertisement
ವಿಧಾನಸೌಧದಲ್ಲಿ ಸಿಎಂ ಜೊತೆ ಅನಿಲ ಭಾಗ್ಯ ಕುರಿತ ಸಭೆ ಬಳಿಕ ಮಾತನಾಡಿದ ಸಚಿವರು, ಅನಿಲ ಭಾಗ್ಯ ಯೋಜನೆಯ ಮೊದಲ ಹಂತವನ್ನು ಇನ್ನೆರಡು ತಿಂಗಳಲ್ಲಿ ಪೂರ್ಣ ಗೊಳಿಸಲಾಗುತ್ತದೆ. ಈಗಾಗಲೆ 32 ಲಕ್ಷ ಅರ್ಜಿಗಳು ಬಂದಿವೆ. ಮೂರು ಹಂತದಲ್ಲಿ ಯೋಜನೆ ಅನುಷ್ಠಾನ ಮಾಡಲು ಸಭೆಯಲ್ಲಿ ನಿರ್ಧಾರ ಮಾಡಿದ್ದೇವೆ. ಮೊದಲ ಹಂತದಲ್ಲಿ 10 ಲಕ್ಷ ಫಲಾನುಭವಿಗಳಿಗೆ ಸ್ಟೌವ್, ಗ್ಯಾಸ್ ಸಂಪರ್ಕ ನೀಡಲಾಗುತ್ತದೆ. ನಂತರದ ಎರಡು ಹಂತದಲ್ಲಿ ಉಳಿದ ಫಲಾನುಭವಿಗಳಿಗೆ ಯೋಜನೆ ತಲುಪಲಿದೆ ಎಂದು ತಿಳಿಸಿದರು.
Advertisement
ಸರ್ಕಾರವು ಒಂದು ಗ್ಯಾಸ್ ಸಂಪರ್ಕ ಕಲ್ಪಿಸಲು 4,200 ರೂ. ಖರ್ಚು ಮಾಡುತ್ತಿದೆ. ಈಗಾಗಲೇ 1 ಲಕ್ಷ ಸ್ಟೌವ್ ಖರೀದಿ ಮಾಡಲಾಗಿದೆ. ಇನ್ನು ಎರಡು ತಿಂಗಳಲ್ಲಿ ಮೊದಲ ಹಂತದ ವಿತರಣೆಗೆ ನಿರ್ಧಾರ ಕೈಗೊಳ್ಳಲಾಗಿದೆ. ಅನಿಲ ಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರದಿಂದ ಯಾವುದೇ ಅನುದಾನ ಬರುತ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರವೇ ಯೋಜನೆಯ ಸಂಪೂರ್ಣ ಹೊಣೆ ಹೊತ್ತಿದೆ. ಚುನಾವಣೆ ನೀತಿ ಸಂಹಿತೆ ಹಿನ್ನಲೆಯಲ್ಲಿ ಯೋಜನೆ ವಿಳಂಬ ಆಗಿದೆ ಎಂದು ಸ್ಪಷ್ಟಪಡಿಸಿದರು.