ಬೆಂಗಳೂರು: ಅಲ್ಪಸಂಖ್ಯಾತ ಸಮುದಾಯದ ಮಕ್ಕಳು ಶಿಕ್ಷಣದಿಂದ (Education) ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹಮದ್ (Zameer Ahmed) ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸೋಮವಾರ ಬೆಂಗಳೂರಿನಲ್ಲಿ (Bengaluru) ಅವರು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ (Minority Welfare Department) ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ಈ ವೇಳೆ ಅಲ್ಪಸಂಖ್ಯಾತ ಸಮುದಾಯದ ಮಕ್ಕಳು ಯಾವುದೇ ಹಂತದಲ್ಲೂ ಶಿಕ್ಷಣದಿಂದ ವಂಚಿತರಾಗದಂತೆ ಎಚ್ಚರಿಕೆ ವಹಿಸಬೇಕು. ಮುಖ್ಯವಾಗಿ ಉನ್ನತ ಶಿಕ್ಷಣದ ವೇಳೆ ಶಿಕ್ಷಣದಿಂದ ದೂರ ಸರಿಯದಂತೆ ನೋಡಿಕೊಳ್ಳಬೇಕು. ರಾಜ್ಯದ ಎಲ್ಲಾ ತಾಲೂಕುಗಳಲ್ಲೂ ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೆ ಶಾಲೆ, ಕಾಲೇಜ್, ವಸತಿ ಶಾಲೆ ವ್ಯವಸ್ಥೆ ಕಡ್ಡಾಯವಾಗಿ ಇರಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಬೈಕ್ ಟ್ಯಾಕ್ಸಿಗಳ ಸಂಚಾರಕ್ಕೆ ಸುಪ್ರೀಂ ತಡೆ
Advertisement
Advertisement
ಅಲ್ಪಸಂಖ್ಯಾತ ಕಾಲೋನಿ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಕಳೆದ 5 ವರ್ಷಗಳ ಕಾಮಗಾರಿಯಲ್ಲಿ ಗುತ್ತಿಗೆದಾರರಿಗೆ ಪಾವತಿಸಿದ ಹಣದ ಮಾಹಿತಿಯನ್ನು ಕೇಳಿದ್ದಾರೆ. ಅಲ್ಲದೇ ಮುಂದೆ ಕಾಲೋನಿಗಳ ಅಭಿವೃದ್ಧಿ ಪ್ರಸ್ತಾವನೆಗಳು ಬಂದರೆ ಸ್ಥಳಕ್ಕೆ ಹೋಗಿ ಆ ಕಾಮಗಾರಿಯ ಅಗತ್ಯದ ಬಗ್ಗೆ ಪರಿಶೀಲಿಸಬೇಕು. ಅದರ ವರದಿ ನೀಡಲು ತಜ್ಞರ ತಂಡ ರಚನೆ ಮಾಡಬೇಕು ಎಂದು ತಿಳಿಸಿದ್ದಾರೆ.
Advertisement
ಕಾಮಗಾರಿ ಪೂರ್ಣಗೊಂಡು ಬಿಲ್ ಪಾವತಿ ಹಂತದಲ್ಲೂ ಇದೇ ತಂಡ ಪರಿಶೀಲಿಸಿ ವರದಿ ನೀಡುವಂತಾಗಬೇಕು. ರಾಜ್ಯದಲ್ಲಿರುವ 126 ಅಲ್ಪಸಂಖ್ಯಾತ ವಸತಿ ಶಾಲಾ ಕಾಲೇಜುಗಳ ಪೈಕಿ 29 ಬಾಡಿಗೆ ಕಟ್ಟಡದಲ್ಲಿವೆ. ಮುಂದಿನ ಒಂದು ವರ್ಷದಲ್ಲಿ ಎಲ್ಲವೂ ಸ್ವಂತ ಕಟ್ಟಡದಲ್ಲಿ ಕಾರ್ಯ ನಿರ್ವಹಣೆ ಮಾಡಬೇಕು. ಅಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದರೆ ಹೆಚ್ಚಿಸಬೇಕು. ನಿಗದಿತ ವಿದ್ಯಾರ್ಥಿಗಳಿಗಿಂತ ಬೇಡಿಕೆ ಹೆಚ್ಚಾಗಿದ್ದರೆ ಹೆಚ್ಚುವರಿ ಕಟ್ಟಡ ನಿರ್ಮಿಸಿ ವ್ಯವಸ್ಥೆ ಕಲ್ಪಿಸಬೇಕು ಎಂದಿದ್ದಾರೆ.
Advertisement
ವಿದ್ಯಾಸಿರಿ ಯೋಜನೆಯಡಿಯಲ್ಲಿ ಹಾಸ್ಟೆಲ್ ವ್ಯವಸ್ಥೆ ಸಿಗದ 18.800 ವಿದ್ಯಾರ್ಥಿಗಳಿಗೆ ವಾರ್ಷಿಕ 27 ಕೋಟಿ ರೂ. ಪಾವತಿ ಆಗುತ್ತಿದೆ. ಅದನ್ನು ತಪ್ಪಿಸಲು ಅಗತ್ಯ ಇರುವ ಕಡೆ ಹೊಸ ಹಾಸ್ಟೆಲ್ ಕಟ್ಟಡ ನಿರ್ಮಾಣ ಮಾಡಿ ಅದಕ್ಕೆ ಬೇಕಾದ ಜಾಗವನ್ನು ಗುರುತಿಸುವಂತೆ ನಿರ್ದೇಶನ ನೀಡಿದ್ದಾರೆ. ಮೌಲಾನ ಅಜಾದ್ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕೆಲವೆಡೆ ಎರಡು ಅಂಕಿ ದಾಟದಿದ್ದರೂ ಶಿಕ್ಷಕರು ಹಾಗೂ ಸಿಬ್ಬಂದಿ ಹೆಚ್ಚುವರಿ ಆಗಿ ಇರುವ ಬಗ್ಗೆ ಪರಿಶೀಲಿಸಿ ಅಗತ್ಯ ಇರುವ ಕಡೆಗೆ ವ್ಯವಸ್ಥೆ ಕಲ್ಪಿಸುವ ಬಗ್ಗೆ ಚಿಂತನೆ ನಡೆಸುವಂತೆ ಸಲಹೆ ನೀಡಿದ್ದಾರೆ.
ಕೊಳೆಗೇರಿಗಳಲ್ಲೂ ಮುಸ್ಲಿಂ (Muslim) ಕಾಲೋನಿಗಳ ಅಭಿವೃದ್ಧಿ ಹೆಸರಿನಲ್ಲಿ ಬಿಲ್ ಪಾವತಿ ಆಗಿರುವ ಬಗ್ಗೆ ಹಾಗೂ ಬೆಂಗಳೂರಿನಲ್ಲಿಯೇ ಹೆಚ್ಚು ಅನುದಾನ ಬಳಕೆ ಆಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಜಿಲ್ಲಾ ಹಾಗೂ ತಾಲೂಕು ಪ್ರವಾಸದ ಸಂದರ್ಭದಲ್ಲಿ ಪ್ರತಿ ಕಾಮಗಾರಿಯ ಪರಿಶೀಲನೆ ನಡೆಸುತ್ತೇನೆ. ಈ ವೇಳೆ ಯಾವುದೇ ಕಾಮಾಗಾರಿಗಳಲ್ಲಿ ದುರುಪಯೋಗ ಅಥವಾ ಲೋಪ ಕಂಡು ಬಂದರೆ ಅಲ್ಲೇ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಎರಡು ತಿಂಗಳ GST ಪಾಲು ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ- ಕರ್ನಾಟಕಕ್ಕೆ ಸಿಕ್ಕಿದೆಷ್ಟು?