ಬೆಂಗಳೂರು: ನನಗೆ ಈಗ ಅದೇ ಕಾರು ಬೇಕು. ಅವರು ಬಳಸುತ್ತಿದ್ದ ಕಾರು ಅಂದ್ರೆ ನನಗಿಷ್ಟ. ಸಿದ್ದರಾಮಯ್ಯ ಅಂದ್ರೆ ನನಗಿಷ್ಟ, ಅವರ ಕಾರನ್ನೇ ಕೊಡಿ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯ ಸಚಿವ ಜಮೀರ್ ಅಹ್ಮದ್ ಪಟ್ಟು ಹಿಡಿದಿದ್ದರು. ಯಾಕೆ ನಾನು ಈ ಕಾರು ಬೇಕೆಂದು ಪಟ್ಟು ಹಿಡಿದೆ ಎನ್ನುವುದಕ್ಕೆ ಅವರು ಮಾಧ್ಯಮಗಳ ಮುಂದೆ ಕಾರಣ ಕೊಟ್ಟಿದ್ದಾರೆ.
ನಾನು ಫಾರ್ಚೂನರ್ ಕಾರು ಕೇಳಿರೋದು ನಿಜ. ನನಗೆ ದೊಡ್ಡ ಗಾಡಿಯಲ್ಲಿ ಓಡಾಡಿ ಅಭ್ಯಾಸ. ಫಾರ್ಚೂನರ್ ಕಾರಿನಲ್ಲಿ ಚೆನ್ನಾಗಿ ಇರೋದು ಸಿದ್ದರಾಮಯ್ಯ ಅವರು ಬಳಸುತ್ತಿದ್ದ ಕಾರು ಅದಕ್ಕಾಗಿ ಮಾತ್ರ. ನಾನು ಆ ಫಾರ್ಚೂನರ್ ಕಾರು ಕೇಳಿದ್ದೇನೆ ಹೊರತು ಲಕ್ಕಿ ಅಂತೇನಿಲ್ಲ ಎಂದು ಜಮೀರ್ ಸ್ಪಷ್ಟನೆ ನೀಡಿದರು.
“ದೊಡ್ಡಗಾಡಿಯಲ್ಲಿ ಓಡಾಡಿದ್ರೆ ನಾನು ಮಂತ್ರಿ ಅನ್ನೋದು ಗೊತ್ತಾಗುತ್ತೆ. ಕುಮಾರಸ್ವಾಮಿಯವರು ಬಹಳ ಪಾಪ್ಯುಲರ್. ಅದಕ್ಕೆ ಅವರು ಇನ್ನೂ ಸರ್ಕಾರಿ ಕಾರು ಪಡೆದಿಲ್ಲ. ನನ್ನನ್ನು ಯಾರು ಗುರುತಿಸುತ್ತಾರೆ? ಅದಕ್ಕೆ ದೊಡ್ಡ ಗಾಡಿಯಲ್ಲಿ ಓಡಾಡಿದ್ರೆ ತಾನೇ ಜನರಿಗೆ ಗೊತ್ತಾಗೋದು” ಎಂದು ಹೇಳಿ ತಾನು ಯಾಕೆ ಬೇಡಿಕೆ ಇಟ್ಟೆ ಎನ್ನುವುದಕ್ಕೆ ಜಮೀರ್ ಅಹ್ಮದ್ ಸಮರ್ಥನೆ ಕೊಟ್ಟಿದ್ದಾರೆ.
ಚುನಾವಣೆಯ ಸಂದರ್ಭದಲ್ಲಿ ಜನರ ಜೊತೆ ಮಾತನಾಡುವಾಗ ಸಚಿವನಾದರೆ ಗಿನ್ನೆಸ್ ರೆಕಾರ್ಡ್ ಮಾಡ್ತೇನೆ ಅಂತ ಹೇಳಿದ್ದೆ. ಈಗಲೂ ಅದಕ್ಕೆ ನಾನು ಬದ್ಧನಾಗಿದ್ದೇನೆ. ನನಗೆ ಸ್ವಲ್ಪ ಟೈಮ್ ಕೊಡಿ ಮಾಡಿ ತೋರಿಸುತ್ತೇನೆ ಎಂದು ಜಮೀರ್ ಅಹ್ಮದ್ ಹೇಳಿದರು.
ಏನಿದು ಜಮೀರ್ ಬೇಡಿಕೆ?
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಬಳಸುತ್ತಿದ್ದ ಫಾರ್ಚೂನರ್ ಕಾರು ನನಗೆ ಕೊಡಿ ಎಂದು ಜಮೀರ್ ಅಹ್ಮದ್ ಡಿಪಿಎಆರ್ ಗೆ ಪತ್ರ ಬರೆದಿದ್ದರು. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಎಂ- 01, ಜಿ 5734 ನಂಬರಿನ ಫಾರ್ಚೂನರ್ ಕಾರು ಬಳಸುತ್ತಿದ್ದರು. ಈಗ ಅದೇ ಕಾರು ಬೇಕು ಎಂದು ಜಮೀರ್ ಬೇಡಿಕೆ ಇಟ್ಟಿದ್ದರು. ಸದ್ಯ ಜಮೀರ್ ಅಹ್ಮದ್ ಬೇಡಿಕೆಗೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಡೋಂಟ್ ಕೇರ್ ಎಂದಿದ್ದಾರೆ. ಅಲ್ಲದೇ ಆ ಕಾರನ್ನು ಜಮೀರ್ ಗೆ ಕೊಡೋದು ಬೇಡ. ಆ ಕಾರನ್ನು ಯಾರಾದರೂ ಹಿರಿಯ ಮಂತ್ರಿಗಳಿಗೆ ಕೊಡೋಣ ಎಂದು ಹೆಚ್‍ಡಿಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕುಮಾರಸ್ವಾಮಿ ತನ್ನ ಬೇಡಿಕೆಯನ್ನು ತಿರಸ್ಕರಿಸಿದ್ದಕ್ಕೆ ಜಮೀರ್ ಅಹ್ಮದ್ ಬೇಸರಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.