ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ ಬೆನ್ನಲ್ಲೇ ಇದೀಗ ಮಾಜಿ ಸಚಿವ ಜಮೀರ್ ಅಹಮದ್ ಕೂಡ ಸಮ್ಮಿಶ್ರ ಸರ್ಕಾರ ಪತನವಾಗಲು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿಯವರೇ ನೇರ ಕಾರಣ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಸಿದ್ದರಾಮಯ್ಯ ಅವರ ಸುದ್ದಿಗೋಷ್ಠಿ ಬಳಿಕ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್, ಎಚ್ ಡಿ ದೇವೇಗೌಡರು ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿರುವುದಕ್ಕೆ ಇಂದು ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ. ದೇವೇಗೌಡರು ಸಿದ್ದರಾಮಯ್ಯ ಅವರಿಂದಲೇ ಸರ್ಕಾರ ಹೋಯಿತು ಎಂದು ಹೇಳಿದ್ದಾರೆ. ಆದರೆ ಯಾವ ಕಾರಣದಿಂದ ಸಿದ್ದರಾಮಯ್ಯರಿಂದಾಗಿ ಸರ್ಕಾರ ಬಿದ್ದಿದೆ ಎಂದು ಹೇಳಿದ್ದಾರೋ ನನಗೆ ಅರ್ಥವಾಗುತ್ತಿಲ್ಲ. ಯಾಕಂದ್ರೆ ನಾನು ಆ ಸರ್ಕಾರದಲ್ಲಿ ಮಂತ್ರಿಯಾಗಿದ್ದೆ. ನನಗೆ ಗೊತ್ತಿದ್ದಂತೆ ಎಲ್ಲ ಶಾಸಕರೂ ಅಸಮಾಧಾನಗೊಂಡಿದ್ದರು. ಇವರ ಜೊತೆಗೆ ಮಂತ್ರಿಗಳು ಕೂಡ ಅಸಮಾಧಾನಿತರಾಗಿದ್ದರು ಎಂದರು.
Advertisement
Advertisement
ಈ ಹಿಂದೆ ತಾಜ್ ವೆಸ್ಟೆಂಡ್ ಹೋಟೆಲಿನಲ್ಲಿ ಸಭೆ ನಡೆದಾಗ ನಾನು ವೇಣುಗೋಪಾಲ್ ಅವರ ಮುಂದೆಯೇ ಕುಮಾರಸ್ವಾಮಿಯವರಿಗೆ, ಅಣ್ಣ ಈವಾಗಾದ್ರೂ ಸರಿಪಡಿಸಿಕೊಳ್ಳುವ ಮೂಲಕ ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನ ಮಾಡುವ. ಇನ್ನಾದರೂ ಮಂತ್ರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳೋಣ. ಹೀಗೆ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರವರ ಇಲಾಖೆಯಲ್ಲಿ ಅವರವರ ಕೆಲಸ ಮಾಡಿಕೊಡಿ ಎಂದು ಹೇಳಿದ್ದೆ. ಆದರೆ ಅವರು ನನ್ನ ಮಾತನ್ನು ಕೇಳಲಿಲ್ಲ. ಹೀಗಾಗಿ ಸಿದ್ದರಾಮಯ್ಯರಿಂದ ಸರ್ಕಾರ ಬಿದ್ದಿದ್ದಲ್ಲ ಎಂದು ಅವರು ತಿಳಿಸಿದರು.
Advertisement
ಜೆಡಿಎಸ್ ನವರು ಮಾಡಿದ ತಪ್ಪಿನಿಂದಾಗಿ ಸರ್ಕಾರ ಹೋಗಿದೆ. ಎಲ್ಲ ಶಾಸಕರು ಹಾಗೂ ಮಂತ್ರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದರೆ ಈ ಸರ್ಕಾರ ಯಾವುದೇ ಕಾರಣಕ್ಕೂ ಉರುಳುತ್ತಿರಲಿಲ್ಲ. ಒಟ್ಟಿನಲ್ಲಿ ಅವರು ಮಾಡಿದ ತಪ್ಪಿಗೆ ಬೇರೆಯವರ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ಗರಂ ಆದರು. ಇದನ್ನೂ ಓದಿ: ನೀಚ ರಾಜಕಾರಣ ಅಪ್ಪ, ಮಕ್ಕಳ ಹುಟ್ಟುಗುಣ – ಗೌಡರ ಕುಟುಂಬದ ವಿರುದ್ಧ ಸಿದ್ದು ಗುಟುರು
Advertisement
ಸಿದ್ದರಾಮಯ್ಯ ಅವರು ಇಂದು ಹೇಳಿರುವುದು ನೂರಕ್ಕೆ ನೂರು ಸತ್ಯ. ಸಮ್ಮಿಶ್ರ ಸರ್ಕಾರ ರಚನೆಯಾದಾಗಿನಿಂದ ಬಿಜೆಪಿಯವರು ತಾವು ಅಧಿಕಾರ ನಡೆಸಬೇಕೆಂದು ಪ್ರಯತ್ನ ಮಾಡುತ್ತಲೇ ಬಂದರು. ಇತ್ತ ಶಾಸಕರಲ್ಲಿ ಅಸಮಾಧಾನವಿದ್ದ ಕಾರಣ ಅವರು ತಮ್ಮ ಶಾಸಕ ಸ್ಥಾನಕ್ಕೆ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗಿದ್ದಾರೆ. ಒಂದು ವೇಳೆ 17 ಮಂದಿ ಶಾಸಕರನ್ನು ಸಿದ್ದರಾಮಯ್ಯ ಅವರೇ ಕಳುಹಿಸಿರುತ್ತಿದ್ದರೆ ಯಾಕೆ ಅವರನ್ನು ಅನರ್ಹ ಮಾಡುತ್ತಿದ್ದರು. ಇದನ್ನು ದೇವೇಗೌಡರು ಅರ್ಥಮಾಡಿಕೊಳ್ಳಬೇಕು ಎಂದರು.
ಹೀಗಾಗಿ ಸಿದ್ದರಾಮಯ್ಯ ಅಲ್ಲ ದೇವೇಗೌಡರ ಮಗ ಕುಮಾರಸ್ವಾಮಿ ಮಾಡಿದ ತಪ್ಪಿಗೆ ಈ ಸರ್ಕಾರ ಬಿದ್ದಿದೆ ಅಂದರು.