ಬೆಂಗಳೂರು: ಹಜ್ ಯಾತ್ರೆ ಪ್ರಕರಣದಲ್ಲಿ ಮೋಸಕ್ಕೆ ಒಳಗಾದ ಬಡ ಕುಟುಂಬಕ್ಕೆ ಸರ್ಕಾರವೇ ಉಚಿತ ಹಜ್ ಯಾತ್ರೆಗೆ ಅವಕಾಶ ಕಲ್ಪಿಸಿಕೊಡಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.
ತಿಲಕ್ ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿದ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಚಿವರು, ಮೋಸಕ್ಕೆ ಒಳಗಾದ 113 ಜನರು ಬಡವರೆಂದು ಕೇಳಿಬಂದಿದೆ. ಮೂರ್ನಾಲ್ಕು ವರ್ಷಗಳಿಂದ ಹಣ ಕೂಡಿಸಿ ಹಜ್ ಯಾತ್ರೆಗೆ ಸಿದ್ಧತೆ ಮಾಡಿಕೊಂಡಿದ್ದರೆಂದು ನನ್ನ ಬಳಿ ಅಳಲು ತೋಡಿಕೊಂಡಿದ್ದಾರೆ ಎಂದು ಹೇಳಿದರು.
Advertisement
ಮೋಸಕ್ಕೆ ಒಳಗಾದವರ 113 ಜನರ ಬಗ್ಗೆ ಮಾಹಿತಿ ಕಲೆ ಹಾಕಿ, ಅತ್ಯಂತ ಬಡವರನ್ನು ಗುರುತಿಸಲಾಗುತ್ತದೆ. ಅವರ ಸಂಖ್ಯೆ 20ಕ್ಕೂ ಹೆಚ್ಚಾದರೂ ಸರಿ, ಅವರಿಗೆ ಸರ್ಕಾರದಿಂದ ಹಜ್ ಯಾತ್ರೆಗೆ ಕಳುಹಿಸಲಾಗುತ್ತದೆ. ಒಂದು ವೇಳೆ ಸರ್ಕಾರ ಒಪ್ಪದಿದ್ದರೆ ನನ್ನ ಸ್ವಂತ ಹಣದಲ್ಲಿ ಅವರ ಯಾತ್ರೆಗೆ ಖರ್ಚು ಮಾಡುತ್ತೇನೆ ಎಂದು ಸಚಿವರು ಭರವಸೆ ನೀಡಿದ್ದಾರೆ.
Advertisement
Advertisement
ಏನಿದು ಹಜ್ ಯಾತ್ರೆ ಪ್ರಕರಣ?
ಜಯನಗರದ ‘ಹರೀಂ ಟೂರ್ಸ್’ ಏಜೆನ್ಸಿ ಮಾಲೀಕ ಸಿಗ್ಬತ್‍ವುಲ್ಲಾ ಷರೀಫ್ ರಿಯಾಯ್ತಿ ದರದಲ್ಲಿ ಹಜ್ ಯಾತ್ರೆಗೆ ಕರೆದುಕೊಂಡು ಹೋಗುವುದಾಗಿ 113 ಮಂದಿಯಿಂದ ಹಣ ಸಂಗ್ರಹಿಸಿದ್ದರು. 15 ವರ್ಷಗಳಿಂದ ಏಜೆನ್ಸಿ ನಡೆಸುತ್ತಿರುವ ಸಿಗ್ಬತ್‍ವುಲ್ಲಾ ಹಾಗೂ ಮಕ್ಕಳು ಇದರಲ್ಲಿ ಭಾಗಿಯಾಗಿದ್ದರು.
Advertisement
ಹಜ್ ಯಾತ್ರೆಯ ಕುರಿತು ಜಯನಗರ ಸುತ್ತಮುತ್ತ ಪ್ರಚಾರ ಮಾಡಿದ್ದರು. ಅದನ್ನು ನಂಬಿದ ಕೆಲ ಸ್ಥಳೀಯರು, ಬೇರೆ ಬೇರೆ ಊರುಗಳಲ್ಲಿ ನೆಲೆಸಿರುವ ತಮ್ಮ ಸಂಬಂಧಿಕರಿಗೂ ವಿಷಯ ತಿಳಿಸಿದ್ದರು. ಈ ಸೌಲಭ್ಯ ಪಡೆಯಲು 113 ಮಂದಿ ತಲಾ 3.20 ಲಕ್ಷ ರೂ. ಹಾಗೂ ತಮ್ಮ ಪಾಸ್ ಪೋರ್ಟ್ ಗಳನ್ನು ಏಜೆನ್ಸಿಗೆ ಕೊಟ್ಟಿದ್ದರು.
ಜುಲೈ 30ರಂದು ಹಣ ಪಾವತಿ ಮಾಡಿದ್ದ ವ್ಯಕ್ತಿಯೊಬ್ಬರು ತಮ್ಮ ಯಾತ್ರೆಯ ಕುರಿತು ವಿಚಾರಿಸಲು ಬಂದಾಗ, ನೀವು ಯಾರು? ನಮಗೆ ನೀವು ಹಣ ನೀಡಿಲ್ಲ. ಇನ್ನೊಮ್ಮೆ ಕಚೇರಿ ಕಡೆಗೆ ಬಂದರೆ ಜೀವಸಹಿತ ಬಿಡುವುದಿಲ್ಲ ಎಂದು ಸಿಗ್ಬತ್‍ವುಲ್ಲಾ ಜೀವ ಬೆದರಿಕೆ ಹಾಕಿದ್ದರಂತೆ. ಇವರ ವಿರುದ್ಧ ಮೈಸೂರಿನ ಎನ್.ಆರ್.ಮೊಹಲ್ಲಾ ನಿವಾಸಿ ಮೊಹಮದ್ ಅರಾಫತ್ ಶಫಿ ಎಂಬುವರು ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ಅವರಿಗೆ ದೂರು ಕೊಟ್ಟಿದ್ದರು. ವಂಚಕರ ವಿರುದ್ಧ ಕ್ರಮಕೈಗೊಳ್ಳುವಂತೆ ಕಮಿಷನರ್ ತಿಲಕ್ ನಗರ ಪೊಲೀಸರಿಗೆ ಸೂಚಿಸಿದ್ದರು.
ತಮ್ಮನ್ನು ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸುತ್ತಾರೆ ಎಂದು ಅರಿತ ಆರೋಪಿಗಳು ಏಜೆನ್ಸಿ ಮುಚ್ಚಿ ತಲೆ ಮರೆಸಿಕೊಂಡು ಹೋಗಿದ್ದರು. ಅವರ ಪತ್ತೆಗಾಗಿ ಡಿಸಿಪಿ ವಿಶೇಷ ತಂಡ ರಚಿಸಿದ್ದರು. ಆ ತಂಡವು ಆರೋಪಿಗಳ ಮೊಬೈಲ್ ಕರೆ ಮಾಹಿತಿ ಆಧಾರ ಮೇಲೆ ಅಜ್ಮೇರ್ ಹಾಗೂ ಮುಂಬೈನಲ್ಲಿ ಇರುವುದನ್ನು ಖಚಿತಪಡಿಸಿಕೊಂಡು ಬಲೆ ಬೀಸಿದ್ದರು. ಬುಧವಾರ ಅವರನ್ನು ಬಂಧಿಸಿ ತಿಲಕ್ ನಗರ ಪೊಲೀಸ್ ಠಾಣೆಗೆ ತಂದಿದ್ದರು.
ಸಿಗ್ಬತ್‍ವುಲ್ಲಾ, ಅವರ ಮಕ್ಕಳಾದ ರೆಹಮಾನ್, ರಿಜ್ವಾನ್, ಏಜೆಂಟರಾದ ತೌಸಿಫ್, ಮಹಮದ್ ಮಾಮ್ಜ್ ಹಾಗೂ ಉಮೇರ್ ಬಂಧಿತ ಆರೋಪಿಗಳು. ಪ್ರಕರಣದ ಕುರಿತು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿಯುತ್ತಿದ್ದಂತೆ ಮೋಸಕ್ಕೆ ಒಳಗಾದವರು ಹಾಗೂ ಅವರ ಸಂಬಂಧಿಕರು ಗುರುವಾರ ಸಂಜೆ ತಿಲಕ್ ನಗರ ಪೊಲೀಸ್ ಠಾಣೆ ಮುಂದೆ ನಿಂತಿದ್ದರು.