– ಬಿಎಸ್‍ವೈ ಸಿಎಂ ಆದ್ರೆ ಅವರ ಮನೆ ಮುಂದೆ ವಾಚ್‍ಮನ್ ಆಗುತ್ತೇನೆ
ಹುಬ್ಬಳ್ಳಿ: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್ ಅವರ ಹೇಳಿಕೆಗೆ ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ. ಇದೇ ವೇಳೆ ಕೆಎಸ್ ಈಶ್ವರಪ್ಪ ಅವರು ಕೂಡ ಕಾಂಗ್ರೆಸ್ ಕೆಲ ಶಾಸಕರನ್ನು ಸಿದ್ದರಾಮಯ್ಯ ಅವರ ಚಮಚಾಗಳು ಎಂದು ಹೇಳಿ ಟೀಕೆ ಮಾಡಿದ್ದರು. ಸದ್ಯ ಸಚಿವ ಜಮೀರ್ ಅಹ್ಮದ್ ಅವರು ಈಶ್ವರಪ್ಪ ಅವರ ಹೇಳಿಕೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಯಾರೂ ಸಿದ್ಧರಾಮಯ್ಯ ಅವರ ಚಮಚಾಗಳಲ್ಲಾ, ಅವರ ಕಟ್ಟಾ ಅಭಿಮಾನಿಗಳು. ಈಶ್ವರಪ್ಪನವರಿಗೆ ಚಮಚಾಗಿರಿ ಮಾಡಿ ಅಭ್ಯಾಸ ಇರಬಹುದು. ಬಿಜೆಪಿಯವರಿಗೆ ಚಮಚಾಗಿರಿ ಮಾಡಿ ಅಭ್ಯಾಸ ಇದೆ. ಹೀಗಾಗಿ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.
Advertisement
Advertisement
ಕಾಂಗ್ರೆಸ್ ಶಾಸಕರು ಯಾರು ಈ ಬಾರಿ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಲಿ ಅಂತಾ ಹೇಳಿಲ್ಲ. ಮುಂದಿನ ಬಾರಿ ಸಿಎಂ ಆಗಬೇಕು ಎಂಬುದು ಎಲ್ಲರ ಇಷ್ಟ ಅಷ್ಟೇ ಎಂದು ಸ್ಪಷ್ಟಪಡಿಸಿದರು. ಅಲ್ಲದೇ ಮೇ 23ರ ಬಳಿಕ ಬಿಜೆಪಿ ಸರ್ಕಾರ ರಚನೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಚುನಾವಣೆಯ ನಂತರ ಸರ್ಕಾರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಯಡಿಯೂರಪ್ಪ ಅವರಿಗೆ ಮೇ 25 ರವರೆಗೆ ಗಡುವು ಕೊಡುತ್ತೇನೆ. ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರೆ ಅವರ ಮನೆಯ ಮುಂದೇ ಡ್ರೆಸ್ ಹಾಕಿಕೊಂಡು 1 ದಿನ ವಾಚ್‍ಮನ್ ಕೆಲಸ ಮಾಡುತ್ತೇನೆ. ಒಂದು ವೇಳೆ ಯಡಿಯೂರಪ್ಪ ನವರು ಸಿಎಂ ಆಗದಿದ್ದಲ್ಲಿ ಅವರು ಏನು ಮಾಡುತ್ತಾರೆ ಹೇಳಲಿ ಎಂದು ಸವಾಲು ಎಸೆದರು.
Advertisement
Advertisement
ಈಶ್ವರಪ್ಪ ಹೇಳಿದ್ದೇನು?
ಮುದುಕಿ ಯೌವ್ವನದಲ್ಲಿನ ತನ್ನ ತುರುಬು ನೆನೆಸಿಕೊಂಡ ಹಾಗೆಯೇ ಸಿದ್ದರಾಮಯ್ಯ ತಾನೇ ಸಿಎಂ ಎಂದು ಓಡಾಡುತ್ತಿದ್ದಾರೆ. ಆದರೆ ಅವರು ಈ ಜನ್ಮದಲ್ಲಿ ಮತ್ತೆ ಮುಖ್ಯಮಂತ್ರಿ ಆಗಲ್ಲ. ಕೆಲವು ಕಾಂಗ್ರೆಸ್ ಚೇಲಾ ಶಾಸಕರಿಂದ ಸಿದ್ದರಾಮಯ್ಯ ಸಿಎಂ ಎಂದು ಹೇಳಿಸಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಅವರು ತಿರುಕನ ಕನಸು ಕಾಣುತ್ತಿದ್ದಾರೆ. ರಾಹುಲ್ ಗಾಂಧಿ ಹೇಗೆ ಈ ಜನ್ಮದಲ್ಲಿ ಮದುವೆ ಆಗಲ್ವೋ, ಹಾಗೆಯೇ ಸಿದ್ದರಾಮಯ್ಯ ಈ ಜನ್ಮದಲ್ಲಿ ಮತ್ತೆ ಸಿಎಂ ಆಗಲ್ಲ. ಹಾಗಾಗಿ ಸಿಎಂ ಆಗುವ ಹುಚ್ಚು ಕನಸಿನಿಂದ ಸಿದ್ದರಾಮಯ್ಯ ಹೊರ ಬರಬೇಕು ಎಂದು ಬಾಗಲಕೋಟೆಯಲ್ಲಿ ಈಶ್ವರಪ್ಪ ಅವರು ವಾಗ್ದಾಳಿ ನಡೆಸಿದ್ದರು.