ಬೆಂಗಳೂರು: ಪಕ್ಷದ ನಾಯಕರ ಮೇಲೆ ಸಚಿವ ಸ್ಥಾನಕ್ಕಾಗಿ ಯಾವುದೇ ಒತ್ತಡ ಹೇರಿಲ್ಲ, ನನ್ನ ಸಾಮರ್ಥ್ಯ ಗುರುತಿಸಿ ಸಚಿವ ಸ್ಥಾನ ನೀಡಿದರೆ ಬೇಡ ಎನ್ನುವುದಿಲ್ಲ ಎಂದು ಚಾಮರಾಜಪೇಟೆಯ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಇಂದು ಉಪಮುಖ್ಯಮಂತ್ರಿ ಪರಮೇಶ್ವರ್ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಉತ್ತಮ ಸರ್ಕಾರ ನೀಡುವುದು ನಮ್ಮ ಗುರಿಯಾಗಿದ್ದು, ಸಚಿವ ಸ್ಥಾನಕ್ಕಾಗಿ ಪರಮೇಶ್ವರ್ ಅಥವಾ ಯಾವುದೇ ನಾಯಕರ ಮೇಲೆ ಒತ್ತಡ ಹಾಕಿಲ್ಲ ಎಂದರು.
ಇದೇ ವೇಳೆ ಸಿಎಂ ಕುಮಾರಸ್ವಾಮಿ ಅವರ ಜೊತೆ ಕಾರ್ಯನಿರ್ವಹಿಸುವ ಕುರಿತ ಪ್ರಶ್ನೆಗೆ ಉತ್ತರಿಸಿ, ನಾನು ಕುಮಾರಸ್ವಾಮಿ ಈಗಲೂ ಫ್ರೆಂಡ್ಸ್. ನಮ್ಮದು ಹಳೆಯ ದೋಸ್ತಿ. ಕುಮಾರಸ್ವಾಮಿ ಅವರು ಈಗಲೂ ಬಸ್ ತಗೊಂಡು ಬಾ ಎಂದರೆ ನಾನೇ ಸ್ವತಃ ಡ್ರೈವರ್ ಎಂದು ಹೇಳಿ ನಗು ಬೀರಿದ್ದಾರೆ. ಅಂದಹಾಗೇ ಜಮೀರ್ ಅಹ್ಮದ್ ಖಾನ್ ಅಲ್ಪಸಂಖ್ಯಾತ ಕೋಟಾದಡಿ ಸಚಿವ ಸ್ಥಾನದ ರೇಸ್ ನಲ್ಲಿದ್ದಾರೆ.
ಜೆಡಿಎಸ್ ನಿಂದ ರೇಬಲ್ ಶಾಸಕರಾಗಿ ಕಾಂಗ್ರೆಸ್ ಸೇರಿದ್ದ ಜಮೀರ್ ಅಹಮ್ಮದ್ ಖಾನ್ ಚುನಾವಣೆಯಲ್ಲಿ ಗೆದ್ದು ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದರು. ಬಹುಮತ ಸಾಬೀತು ಪಡಿಸುವ ವೇಳೆ ಬರೊಬ್ಬರಿ 2 ವರ್ಷಗಳ ಬಳಿಕ ಕುಮಾರಸ್ವಾಮಿ ಅವರ ಜೊತೆ ಕಾಣಿಸಿಕೊಂಡಿದ್ದರು. ಈ ವೇಳೆ ತಾವು ಕಾಂಗ್ರೆಸ್ ಪಕ್ಷದಲ್ಲೇ ಉಳಿಯಲಿದ್ದು, ಪಕ್ಷದ ತೀರ್ಮಾನ ಮೇಲೆ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿರುವುದಾಗಿ ತಿಳಿಸಿದ್ದರು.