ಐಎಂಎ ದೋಖಾಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್-ಮನ್ಸೂರ್ ಖಾನ್ ಜೊತೆಗೆ ಸಚಿವ ಜಮೀರ್ ಗೂ ನಂಟು?

Public TV
4 Min Read
IMA Dhoka

-ಐಎಂಎ ವಿರುದ್ಧ 8 ಸಾವಿರ ದೂರು
-ಮತ್ತೊಂದು ಆಡಿಯೋ ರಿಲೀಸ್
-ಬೀದಿಗೆ ಬಂದ 1,800 ಉದ್ಯೋಗಿಗಳು

ಬೆಂಗಳೂರು: ಹೂಡಿಕೆಯ ಹೆಸರಿನಲ್ಲಿ ಲಕ್ಷಾಂತರ ಮಂದಿಗೆ ವಂಚಿಸಿರುವ ಐಎಂಎ ಜ್ಯುವೆಲ್ಲರ್ಸ್ ಮಾಲೀಕನ ನಾಪತ್ತೆ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ದೋಖಾ ಪ್ರಕರಣವನ್ನು ಎಸ್‍ಐಟಿಗೆ ವಹಿಸಿದೆ. ಮೊದಲು ಈ ಪ್ರಕರಣವನ್ನು ಸಿಸಿಬಿಗೆ ವಹಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದರು. ಆದರೆ ಸಚಿವ ಜಮೀರ್ ಅಹ್ಮದ್ ನಿಯೋಗದ ಮನವಿ ಮೇರೆಗೆ ರಾಜ್ಯ ಸರ್ಕಾರ ಪ್ರಕರಣದ ತನಿಖೆಯನ್ನು ಎಸ್‍ಐಟಿ ಗೆ ವಹಿಸಿದೆ.

ima bengaluru 2

ನಿಗೂಢವಾಗಿ ನಾಪತ್ತೆಯಾಗಿರುವ ಮನ್ಸೂರ್ ಖಾನ್ ಪತ್ತೆಗಾಗಿ ಐದು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಈ ನಡುವೆ ಇಂದು ಕೂಡ ಐಎಂಎಯಿಂದ ಮೋಸ ಹೋಗಿರುವ ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿ ಆಕ್ರೋಶ ಹೊರ ಹಾಕಿದರು. ಸಮದ್ ಹೌಸ್‍ಗೆ ತೆರಳಿ ಅಲ್ಲಿ ತೆರೆಯಲಾಗಿರುವ ವಿಶೇಷ ಕೌಂಟರ್ ಗಳಲ್ಲಿ ದೂರು ಸಲ್ಲಿಸಿದರು. ಇದುವರೆಗೂ ಸುಮಾರು 8 ಸಾವಿರ ದೂರುಗಳು ಐಎಂಎ ವಿರುದ್ಧ ದಾಖಲಾಗಿವೆ.

IMA jewelers 1

ದೂರಿನ ಬಳಿಕ ಐಎಂಎ ಹೂಡಿಕೆದಾರರು ನಗರ ಪೊಲೀಸ್ ಆಯುಕ್ತರ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ನ್ಯಾಯಕ್ಕಾಗಿ ಮನವಿ ಸಲ್ಲಿಸಿದರು. ಈ ಮಧ್ಯೆ ಐಎಂಎ ಜ್ಯುವೆಲ್ಲರಿಯ ಮೊಬೈಲ್ ಆ್ಯಪ್ ಕೂಡ ಸ್ಥಗಿತಗೊಂಡಿದೆ. ಈ ಆ್ಯಪ್‍ನಲ್ಲಿ ಹೂಡಿಕೆ, ಬಡ್ಡಿ, ತಿಂಗಳ ರಿಟರ್ನ್ಸ್ ಮಾಹಿತಿ ಲಭ್ಯವಾಗುತ್ತಿತ್ತು. ಇತ್ತ ಅದ್ಯಾಕೋ ಏನೋ ರೋಷನ್ ಬೇಗ್ ಮಾಲೀಕತ್ವದ ಉರ್ದು ಪತ್ರಿಕೆ ಸಿಯಾಸತ್ ಕೂಡ ಇವತ್ತು ಮುದ್ರಣಗೊಂಡಿಲ್ಲ. ಇತ್ತ ಐಎಂಎ ಜ್ಯುವೆಲ್ಲರಿಯಲ್ಲಿ ಕೆಲಸಕ್ಕಿದ್ದ 1,800 ಉದ್ಯೋಗಿಗಳು ಇದೀಗ ಬೀದಿಗೆ ಬಿದ್ದಿದ್ದಾರೆ.

Zameer With IMA 2

ಜಮೀರ್ ಹೆಸರು ತಳುಕು:
ಸೋಮವಾರ ಮಾಜಿ ಸಚಿವ ರೋಷನ್ ಬೇಗ್ ಹೆಸರು ಐಎಂಎ ಪ್ರಕರಣದಲ್ಲಿ ತಳಕು ಹಾಕಿಕೊಂಡಿತ್ತು. ಇವತ್ತು ಸಚಿವ ಜಮೀರ್ ಅಹ್ಮದ್ ಖಾನ್ ಸರದಿ. ಚುನಾವಣೆ ಸಂದರ್ಭದಲ್ಲಿ ಜಮೀರ್ ಅಹ್ಮದ್ ಸಲ್ಲಿಸಿರೋ ಅಫಿಡವಿಟ್ ಈಗ ವೈರಲ್ ಆಗಿದೆ. ಇದರಲ್ಲಿ ರಿಚ್ಮಂಡ್ ಸರ್ಕಲ್ ಬಳಿ ಇರುವ ಎರಡೂವರೆ ಕೋಟಿ ಮೌಲ್ಯದ ಆಸ್ತಿಯನ್ನು ನೀಡಿ ಐಎಂಎ ಬಳಿ 5 ಕೋಟಿ ಸಾಲ ಪಡೆದಿರುವುದಾಗಿ ಜಮೀರ್ ಅಹ್ಮದ್ ಹೇಳಿಕೊಂಡಿದ್ದಾರೆ. ಈ ದಾಖಲೆ ಬಹಿರಂಗವಾಗುತ್ತಿದ್ದಂತೆ, ಐಎಂಎ ಮಾಲೀಕನ ಜೊತೆ ಸಚಿವ ಜಮೀರ್ ಪಾರ್ಟಿ ಮಾಡುವ ಫೋಟೋ ಇದೀಗ ವೈರಲ್ ಆಗಿದೆ.

CM With IMA

ಪಕ್ಷಗಳ ಫೋಟೋ ವಾರ್:
ವಂಚಕ ಮನ್ಸೂರ್ ಜೊತೆಗೆ ಸಿಎಂ ಮತ್ತು ರೋಷನ್ ಬೇಗ್ ಊಟ ಮಾಡುತ್ತಿರುವ ಫೋಟೋವನ್ನು ಟ್ವೀಟಿಸಿರೋ ಬಿಜೆಪಿ, ಬಿರಿಯಾನಿ ಡೇ ಅಂತ ಕಾಲೆಳೆದಿದೆ. ನೀನೂ ತಿನ್ನು ನಾನು ತಿಂತೀನಿ ಅನ್ನೋದು ಜೆಡಿಎಸ್ ಪದ್ಧತಿ. ಖಾನ್‍ನಂತವರು ತಿಂದು ಲೂಟಿ ಮಾಡಿ ಓಡಿಹೋಗೋರು. ಇಂತಹ ವಂಚಕರ ಜೊತೆಗೆ ಸಿಎಂ ಬಿರಿಯಾನಿ ಡೇ ಸಾಕಷ್ಟು ವಿಷಯವನ್ನ ಹೇಳುತ್ತೆ ಅಂತ ಬಿಜೆಪಿ ಟೀಕಿಸಿದೆ. ಹಳೆ ಫೋಟೋವನ್ನು ಟ್ಯಾಗ್ ಮಾಡಿ ಬಿಜೆಪಿ ಜನರ ಹಾದಿ ತಪ್ಪಿಸ್ತಿದೆ ಅಂತ ಸಿಎಂ ತಿರುಗೇಟು ನೀಡಿದ್ದಾರೆ.

IMA SIT copy

ಸಿಎಂ ಪ್ರತಿಕ್ರಿಯೆಗೆ ಮತ್ತೆ ತಿರುಗೇಟು ಕೊಟ್ಟಿರುವ ಬಿಜೆಪಿ ನಿಮ್ಮನ್ನು ನೀವು ಬಲಿಪಶು ಅಂತ ಕಣ್ಣೀರು ಹಾಕೋ ಬದಲು ವಂಚಕನ ವಿರುದ್ಧ ಕ್ರಮ ಕೈಗೊಳ್ಳುವುದು ನಿಮ್ಮ ಮೊದಲ ಆದ್ಯತೆ ಆಗಿರಲಿ ಅಂತ ಟ್ವೀಟಿಸಿದೆ. ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಐಎಂಎಗೆ ಪಿಎಫ್‍ಐ ನಂಟಿರುವ ಸಂಶಯ ವ್ಯಕ್ತಪಡಿಸಿದ್ದಾರೆ. ಪ್ರಕರಣದಲ್ಲಿ ರೋಷನ್ ಬೇಗ್, ಜಮೀರ್ ಹೆಸರು ಕೇಳಿ ಬರ್ತಿದ್ದು, ಇವರ ಆಸ್ತಿ ಜಪ್ತಿ ಮಾಡಿ, ಸಿಬಿಐನಿಂದ ತನಿಖೆ ಮಾಡಿಸಬೇಕು ಅಂತಾ ಆಗ್ರಹಿಸಿದ್ದಾರೆ. ಆಡಿಯೋದಲ್ಲಿರೋದೆಲ್ಲಾ ಸತ್ಯ, ರೋಷನ್ ಬೇಗ್ ಹೆಸರು ಕೂಡ ಕೇಳಿಬಂದಿದೆ. ಈ ಬಗ್ಗೆ ಸಮಗ್ರ ತನಿಖೆ ಆಗ್ಬೇಕು ಅಂತಾ ಬಿಜೆಪಿಯ ಅಬ್ದುಲ್ ಅಜೀಮ್ ಒತ್ತಾಯಿಸಿದ್ದಾರೆ.

IMA SIT copy

ಮತ್ತೊಂದು ಆಡಿಯೋ ರಿಲೀಸ್:
ಈ ಎಲ್ಲಾ ಬೆಳವಣಿಗೆ ನಡುವೆ ಐಎಂಎ ಜ್ಯುವೆಲ್ಲರಿ ಎಂಡಿ ಮನ್ಸೂರ್‍ದು ಎನ್ನಲಾದ ಮತ್ತೊಂದು ಆಡಿಯೋ ರಿಲೀಸ್ ಆಗಿದೆ. ಐಎಂಎ ಎಂಡಿ ಮನ್ಸೂರ್ ಆದ ನಾನು ಜೀವಂತವಾಗಿದ್ದಾರೆ. ನನ್ನ ವಿರುದ್ಧ ರೋಷನ್ ಬೇಗ್ ಮತ್ತಿತರರು ದೊಡ್ಡಮಟ್ಟದಲ್ಲಿ ಷಡ್ಯಂತ್ರ್ಯ ನಡೆದಿದೆ. ನಾನು ಆತ್ಮಹತ್ಯೆ ಮಾಡಿಕೊಳ್ತೇನೆ ಎಂದು ಸುದ್ದಿ ಹರಡಲಾಗಿದೆ. ನಾನು ನನ್ನ ಕುಟುಂಬ ಸದಸ್ಯರು ಓಡಿಹೋಗಿದ್ದಾರೆ ಎಂದು ಹಬ್ಬಿಸಲಾಗುತ್ತಿದೆ. ಇದೆಲ್ಲಾ ಸುಳ್ಳು ನಾನು ಜೀವಂತವಾಗಿದ್ದೇನೆ. ಎಲ್ಲಾ ಹೂಡಿಕೆದಾರರಿಗೆ ಜೂನ್ 15ರಿಂದ ಹಂತಹಂತವಾಗಿ ಹಣ ಹಿಂದಿರುಗಿಸ್ತೇನೆ ಎಂಬ ಮಾಹಿತಿ ಆಡಿಯೋದಲ್ಲಿದೆ. ಜೊತೆಗೆ ಇಂದು ಸಂಜೆ ಸಮದ್ ಹೌಸ್‍ನಲ್ಲಿ ರಾಹೀಲ್ ಸಭೆ ನಡೆಸುತ್ತಾನೆ ಎನ್ನಲಾಗಿತ್ತು. ಆದ್ರೆ ಅಂತಹ ಯಾವುದೇ ಸಭೆ ನಡೆಯಲಿಲ್ಲ. ಜೊತೆಗೆ ಇದು ಅಸಲಿ ಆಡಿಯೋನಾ ಅಥ್ವಾ ನಕಲಿ ಆಡಿಯೋನಾ..? ಹೂಡಿಕೆದಾರರ ದಾರಿ ತಪ್ಪಿಸಲು ಈ ಆಡಿಯೋ ಹರಿಬಿಡಲಾಗಿದ್ಯಾ ಅನ್ನೋ ಪ್ರಶ್ನೆ ಎದ್ದಿದೆ.

IMA copy

ಆಡಿಯೋದಲ್ಲಿ ಏನಿದೆ?
ನಾನು ಮನ್ಸೂರ್ ಖಾನ್, ಐಎಂಎ ಸಂಸ್ಥಾಪಕ. ನಾನು ಜೀವಂತವಾಗಿದ್ದೇನೆ. ನನ್ನ ಹಿಂದೆ ಷಡ್ಯಂತ್ರ ನಡೆಯುತ್ತಿದೆ. ನಾನು ಆತ್ಮಹತ್ಯೆ ಮಾಡಿಕೊಂಡಿದ್ದೇನೆ ಎಂದು ಸುದ್ದಿ ಹರಡಿಸಲಾಗಿದೆ. ನನ್ನ ಕುಟುಂಬ ಹಾಗೂ ನಾನು ಓಡಿ ಹೋಗಿದ್ದೇನೆಂದು ಸುದ್ದಿ ಹರಡಿಸಲಾಗಿದೆ. ಅದೆಲ್ಲಾ ಸುಳ್ಳು. ನಾನು ಅಲ್ಲಾಹನ ಆಶೀರ್ವಾದದಿಂದ ಚೆನ್ನಾಗಿದ್ದು, ಬೆಂಗಳೂರಿನಲ್ಲೇ ಇದ್ದೇನೆ. ನನ್ನನ್ನು ಓಡಿಸಲು ಸಾಕಷ್ಟು ಷಡ್ಯಂತ್ರ ನಡೆಯುತ್ತಿದೆ. ಈ ಷಡ್ಯಂತ್ರ್ಯ ಅವರಿಗೆ ಮುಳವಾಗುತ್ತೆ. ಸ್ಥಳೀಯ ಶಾಸಕ ರೋಷನ್ ಬೇಗ್, ಶಕೀಲ್ ಅಹಮದ್ ನನ್ನನ್ನು ಓಡಿಸಲು ಷಡ್ಯಂತ್ರ ಮಾಡಿದ್ದಾರೆ. ಇದರ ಹಿಂದೆ ದೊಡ್ಡ ದೊಡ್ಡವರ ಕೈವಾಡವಿದೆ. ನಾನು ಎಲ್ಲರ ಆಸ್ತಿ ಒಡವೆ, ಪಡೆದು ಹೂಡಿಕೆ ಮಾಡಿದ್ದೇನೆ. ಸದ್ಯದ ನನ್ನ ಪರಿಸ್ಥಿತಿ ಬಿಗಡಾಯಿಸಿದೆ.

ನನ್ನ ಬಳಿ ಏನೇನಿದೆ ಎಲ್ಲಾ ಮಾಹಿತಿಯನ್ನ ರಾಹೀಲ್‍ಗೆ ಕೊಟ್ಟಿದ್ದೇನೆ. ಸಂಜೆ 5 ಗಂಟೆಗೆ ರಾಹೀಲ್ ಸಭೆ ನಡೆಸುತ್ತಾರೆ. ಸಭೆಯಲ್ಲಿ ರಾಹೀಲ್‍ನನ್ನ ಪ್ರಶ್ನೆ ಮಾಡಿ, ನಿಮ್ಮ ಹಣ ಎಲ್ಲೂ ಹೋಗಲ್ಲ. ಹಣವನ್ನ ಹಿಂದಿರುಗಿಸುತ್ತೇನೆ. ಜೂನ್ 15 ರೊಳಗೆ ನಿಮ್ಮ ಹಣವನ್ನ ಹಿಂದಿರುಗಿಸುತ್ತೇನೆ. ಮೊದಲಿಗೆ ಸಣ್ಣ ಹೂಡಿಕೆದಾರರು ನಂತರ ಮಧ್ಯಮ ಹೂಡಿಕೆದಾರರು ತದ ನಂತರ ಬೃಹತ್ ಹೂಡಿಕೆದಾರರಿಗೆ ಹಣ ಹಿಂತಿರುಗಿಸುತ್ತೇನೆ. ನಾನು ಎಲ್ಲಿಯೂ ಹೋಗಿಲ್ಲ. ಬೆಂಗಳೂರಿನಲ್ಲೇ ಇದ್ದೇನೆ.

Share This Article
Leave a Comment

Leave a Reply

Your email address will not be published. Required fields are marked *