ಬಾಗಲಕೋಟೆ: ಸಿಎಂ ಬಿ.ಎಸ್.ಯಡಿಯೂರಪ್ಪರನ್ನು ಟೀಕಿಸುವ ಭರದಲ್ಲಿ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಜಮೀರ್ ಅಹ್ಮದ್ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ. ಜಮೀರ್ ಅಹ್ಮದ್ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಜಮೀರ್ ಅಹ್ಮದ್ ಸೇರಿದಂತೆ ಹಲವು ಸ್ಥಳೀಯ ನಾಯಕರು ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ್ದ ಜಮೀರ್ ಅಹ್ಮದ್, ಯಾವ ಮುಸ್ಲಿಂರು ಯಡಿಯೂರಪ್ಪರನ್ನ ನಂಬಬೇಡಿ. ಮುಸ್ಲಿಂ ಮತಗಳನ್ನು ಪಡೆಯುವ ಉದ್ದೇಶದಿಂದ ಕೆಜೆಪಿ ಪಕ್ಷ ಮಾಡಿ ಟಿಪ್ಪು ಜಯಂತಿ ಮಾಡಿದರು. ಅಂದು ಪೇಟಾ ಹಾಕಿ ಖತ್ತಿ ಹಿಡಿದು ನಿಂತಾಗ ಟಿಪ್ಪು ಬೇಕಾಗಿದ್ದಾಗ, ಇವಾಗ ಬೇಡವಾ ಎಂದು ಪ್ರಶ್ನೆ ಮಾಡಿದರು.
ಯಡಿಯೂರಪ್ಪರಿಗೆ ಯಾವ ಹಿಂದೂಗಳು ಬೇಡ, ಮುಸ್ಲಿಂರು ಬೇಡ. ಅವರಿಗೆ ಕೇವಲ ಅಧಿಕಾರ ಬೇಕಾಗಿದ್ದರಿಂದ ಇಂದಿಗೂ ತೆರೆಮರೆಯಲ್ಲಿ ಟಿಪ್ಪು ಜಯಂತಿ ಮಾಡುತ್ತಾರೆ. ನಾವು ಎಂದೂ ರಾಮ ಮಂದಿರ ಕಟ್ಟೋದು ಬೇಡ ಅಂತ ಹೇಳಿಲ್ಲ. ಒಂದು ಕಡೆ ಮಸೀದಿ ಇರಲಿ, ಮತ್ತೊಂದು ಭಾಗದಲ್ಲಿ ದೇವಸ್ಥಾನ ಇರೋದು ಯಾರು ವಿರೋಧ ವ್ಯಕ್ತಪಡಿಸಿಲ್ಲ. ಬಿಜೆಪಿ ನಾಯಕರು ಬಾಬರಿ ಮಸೀದಿ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ನಮಗೆ ನೆಮ್ಮದಿ ಮತ್ತು ಶಾಂತಿ ಬೇಕಿದೆ ಎಂದರು.
ಖಾಸಗಿ ಕಾರ್ಯಕ್ರಮದಲ್ಲಿ ಜಮೀರ್ ಅಹ್ಮದ್ ಮಾತನಾಡಿರುವ ಆಕ್ಷೇಪಾರ್ಹ ಹೇಳಿಕೆಯ ವಿಡಿಯೋ ವೈರಲ್ ಆಗಿದೆ. ಓರ್ವ ಶಾಸಕರಾಗಿ, ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿ ಹೀಗೆ ಮಾತನಾಡೋದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.