– ಯೋಜನೆಗಳ ಬಗ್ಗೆ ಪ್ರಚಾರ ನೀಡಿ ಪಾರದರ್ಶಕತೆ ಕಾಯ್ದುಕೊಳ್ಳಲು ನಿರ್ದೇಶನ
ಬೆಂಗಳೂರು: ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ನಿಗಮದ ಯೋಜನೆಗಳ ಬಗ್ಗೆ ವ್ಯಾಪಕ ಪ್ರಚಾರ ನೀಡಿ ಫಲಾನುಭವಿಗಳ ಆಯ್ಕೆ ಮಾಡುವಂತೆ ಅಧಿಕಾರಿಗಳಿಗೆ ಸಚಿವ ಜಮೀರ್ ಅಹ್ಮದ್ (Zameer Ahmed) ಸೂಚನೆ ನೀಡಿದ್ದಾರೆ.
ನಗರದ ನಿಗಮದ ಸಭಾಂಗಣದಲ್ಲಿ ಪ್ರಗತಿ ಪರಿಶೀಲನೆ ನಡೆಸಿದ ಅವರು, ನಿಗಮದ ಯೋಜನೆಗಳ ಫಲಾನುಭವಿಗಳ ಆಯ್ಕೆ ಮಾಡುವಾಗ ಪಾರದರ್ಶಕ ವ್ಯವಸ್ಥೆ ಅಳವಡಿಸಿಕೊಳ್ಳಬೇಕು. ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಲ್ಲಿ ಹೆಸರಿಗೆ ಮಾತ್ರ ಯೋಜನೆಗಳು ಇರಬಾರದು. ರಾಜ್ಯದ ಎಲ್ಲೆಡೆ ಪ್ರಚಾರಪಡಿಸಿ ಪರಿಣಾಮಕಾರಿಯಾಗಿ ಜಾರಿಯಾಗಬೇಕು ಎಂದು ತಾಕೀತು ಮಾಡಿದರು. ಇದನ್ನೂ ಓದಿ: ಲಿಂಗಾಯತ ಅವಹೇಳನ ಕೇಸಲ್ಲಿ ಸಿದ್ದರಾಮಯ್ಯಗೆ ರಿಲೀಫ್
ಅಲ್ಪಸಂಖ್ಯಾತ ಇಲಾಖೆ (Minority Welfare) ಹಾಗೂ ಅಭಿವೃದ್ಧಿ ನಿಗಮದಲ್ಲಿ ಲಭ್ಯ ಇರುವ ಯೋಜನೆಗಳ ಬಗ್ಗೆ ಸಮುದಾಯಕ್ಕೆ ಮಾಹಿತಿ ನೀಡಲು ಬೃಹತ್ ಮಟ್ಟದ ಪ್ರಚಾರ ಅಭಿಯಾನ ಆರಂಭಿಸಬೇಕು. ನಿಗಮದ ವತಿಯಿಂದ ನೀಡಲಾಗುವ ಟ್ಯಾಕ್ಸಿ, ಆಟೋ, ಸರಕು ಸಾಗಣೆ ವಾಹನ ಸಾಲ ಯೋಜನೆಗಳಲ್ಲಿ ಫಲಾನುಭವಿಗಳಿಂದ 10% ರಷ್ಟು ವಂತಿಗೆ ಪಡೆಯುವುದು ಕಡ್ಡಾಯಗೊಳಿಸಬೇಕು. ನಿಗಮವೇ ಬ್ಯಾಂಕುಗಳ ಜೊತೆಯಲ್ಲಿ ಸಮನ್ವಯ ಸಾಧಿಸಬೇಕು. ನಮ್ಮ ಮೂಲಕವೇ ಏಕ ಗವಾಕ್ಷಿಯ 6ರ ಅಡಿ ಸಾಲ ಸೌಲಭ್ಯ ಸಿಗುವಂತೆ ಮಾಡಬೇಕು ಎಂದು ಸೂಚಿಸಿದರು.
ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಸಾಲ ವಸೂಲಾತಿ ಪ್ರಮಾಣ 15% ರಷ್ಟು ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವರ್ಷ 50% ರಷ್ಟು ವಸೂಲಾತಿ ಆಗಬೇಕು. 760 ಕೋಟಿ ರೂ. ಶಿಕ್ಷಣ ಸಾಲ ವಸೂಲಾತಿಗೆ ಬಾಕಿ ಇದ್ದು ಒಂದು ಬಾರಿಗೆ ಇತ್ಯರ್ಥ ಆಗುವಂತೆ ಯೋಜನೆ ಜಾರಿಗೊಳಿಸಬೇಕು. ಬಡ್ಡಿ ಮನ್ನಾ ಮಾಡಿ ಸಾಲ ವಸೂಲಿ ಮಾಡುವಂತೆ ತಿಳಿಸಿದರು.
ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರು ಹೊಸ ಉದ್ಯಮಗಳನ್ನು ಮಾಡಲು ಮುಂದಾದರೆ ಸಬ್ಸಿಡಿ ಸಹಿತ ಹಣಕಾಸು ನೆರವು ಕೊಡುವ ಯೋಜನೆ ಹೆಚ್ಚು ಮಂದಿಗೆ ತಲುಪುವಂತೆ ಮಾಡಬೇಕು. ಕೋಮುಗಲಭೆಯಿಂದ ಸಂತ್ರಸ್ತರಾಗುವ ಕುಟುಂಬಗಳಿಗೆ ಪುನರ್ ವಸತಿ ಕಲ್ಪಿಸುವ ಮನೆಯ ಯೋಜನೆ ಅನುದಾನ ಬಳಕೆ ಮಾಡಬೇಕು. ಅಭಿವೃದ್ಧಿ ನಿಗಮದ ವತಿಯಿಂದ ಬಡವರು ಮನೆ ನಿರ್ಮಿಸಿಕೊಳ್ಳಲು ಕೊಳೆಗೇರಿ ಮಂಡಳಿಗೆ ನೀಡಿರುವ 31 ಕೋಟಿ ರೂ. ಎಷ್ಟರ ಮಟ್ಟಿಗೆ ಪ್ರಯೋಜನವಾಗಿದೆ ಎಂಬುದರ ಕುರಿತು ಪ್ರಗತಿಯ ವಿವರ ನೀಡುವಂತೆ ಸೂಚಿಸಿದರು. ಅಲ್ಲದೇ ಹೊಸ ಪ್ರಸ್ತಾವನೆ ಸಿದ್ಧಪಡಿಸುವಂತೆ ನಿರ್ದೇಶನ ನೀಡಿದರು.
ವೃತ್ತಿಪರ ಕೋರ್ಸ್ ವ್ಯಾಸಂಗ ಮಾಡುವ ಅಲ್ಪಸಂಖ್ಯಾತ ಸಮುದಾಯದ 6500 ವಿದ್ಯಾರ್ಥಿಗಳಿಗೆ 10 ಕೋಟಿ ರೂ. ಸಾಲ ನೀಡುವ ಅರಿವು ಯೋಜನೆಯ ಚೆಕ್‍ನ್ನು ಪರೀಕ್ಷಾ ಪ್ರಾಧಿಕಾರಕ್ಕೆ ಹಸ್ತಾಂತರಿಸಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಸ್ಥಗಿತಗೊಂಡಿದ್ದ ವಿದೇಶದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ನೆರವು ನೀಡುವ 10 ಕೋಟಿ ರೂ. ಯೋಜನೆ ಹಾಗೂ 5 ಲಕ್ಷ ರೂ. ನಿಂದ 20 ಲಕ್ಷ ರೂ. ವರೆಗೆ ಸ್ವ ಉದ್ದಿಮೆ ಸ್ಥಾಪಿಸಲು ನೀಡುವ ನೇರ ಸಾಲ ಯೋಜನೆಗೂ ಚಾಲನೆ ನೀಡಿದರು.
ಅಲ್ಲದೇ 12 ಟ್ಯಾಕ್ಸಿ, 12 ಆಟೋ, 4 ಗೂಡ್ಸ್ ಆಟೋ ಗಳನ್ನು ಫಲಾನುಭವಿಗಳಿಗೆ ಹಸ್ತಾಂತರ ಮಾಡಿದರು. ಸಲ್ಮಾನ್ ಎಂಬ ಫಲಾನುಭವಿ, ಈ ಮುಂಚೆ ಬಾಡಿಗೆ ಆಟೋ ಓಡಿಸಿ ಜೀವನ ಸಾಗಿಸುತಿದ್ದೆ. ಇದೀಗ ನಿಗಮ ನನ್ನ ನೆರವಿಗೆ ಬಂದಿದ್ದು 20 ಸಾವಿರ ರೂ. ಪಡೆದು 9.20 ಲಕ್ಷ ರೂ. ಮೌಲ್ಯದ ಟ್ಯಾಕ್ಸಿ ಖರೀದಿಗೆ 2.50 ಲಕ್ಷ ರೂ. ಸಬ್ಸಿಡಿ ನೀಡಿದೆ. ಇದರಿಂದ ನನ್ನ ಬದುಕಿನ ಹಾದಿ ಬದಲಾಗಿದೆ ಎಂದು ಸಂತಸ ವ್ಯಕ್ತ ಪಡಿಸಿದರು. ಮತ್ತೊಬ್ಬ ಫಲಾನುಭವಿ ಮಾರ್ವಿನ್, 3.65 ಲಕ್ಷ ರೂ. ಮೊತ್ತದ ಆಟೋ 1 ಲಕ್ಷ ರೂ. ಸಬ್ಸಿಡಿಯೊಂದಿಗೆ ಬಂದಿದೆ. ನನಗೆ ಖುಷಿ ಆಗಿದೆ. ಬದುಕು ಕಟ್ಟಿಕೊಳ್ಳುವಂತಾಗಿದೆ ಎಂದರು.
ವಖ್ಫ್ (Wakf Board) ಆಸ್ತಿ ರಕ್ಷಣೆಗೆ ಕಾರ್ಯಪಡೆ ರಚಿಸಿ ಎಲ್ಲಾ ಆಸ್ತಿಗಳಿಗೆ ಕಾಪೌಂಡ್ ಹಾಕಲು ಕ್ರಮ ಕೈಗೊಳ್ಳಲಾಗುವುದು. ವಕ್ಫ್ ಆಸ್ತಿ ಸಂರಕ್ಷಣೆ ಹಾಗೂ ಸ್ಥಳೀಯ ಮಟ್ಟದಲ್ಲೇ ಕುಂದು ಕೊರತೆ ಪರಿಹಾರಕ್ಕೆ ವಿಭಾಗೀಯ ಮಟ್ಟದ ಕಚೇರಿ ಸ್ಥಾಪಿಸಲಾಗುವುದು. ವಕ್ಫ್ ಆಸ್ತಿ ಸಮುದಾಯದ ಅಭಿವೃದ್ಧಿಗೆ ಬಳಕೆಯಾಗಬೇಕು ಅದರಲ್ಲೂ ಶಾಲೆ ಹಾಗೂ ಆಸ್ಪತ್ರೆಗೆ ಹೆಚ್ಚು ಆದ್ಯತೆ ನೀಡಲಾಗುವುದು. ಎಲ್ಲರ ಸಹಕಾರ ದೊರೆತರೆ ದೇಶದಲ್ಲೇ ಮಾದರಿ ಆಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಇಲಾಖೆ ಕಾರ್ಯದರ್ಶಿ ಮನೋಜ್ ಜೈನ್, ನಿಗಮದ ಎಂಡಿ ಮೊಹಮದ್ ನಜೀರ್ ಉಪಸ್ಥಿತರಿದ್ದರು. ಇದನ್ನೂ ಓದಿ: VISL ಮುಚ್ಚದಂತೆ ಸಂಸದ ಬಿ.ವೈ ರಾಘವೇಂದ್ರ ನೇತೃತ್ವದ ನಿಯೋಗದಿಂದ ಮನವಿ