ಬೆಂಗಳೂರು: ಬಹುಕೋಟಿ ವಂಚನೆ ಐಎಂಎ ಪ್ರಕರಣವನ್ನು ಸಿಬಿಐಗೆ ನೀಡುವಂತೆ ಮೊದಲು ಆಗ್ರಹಿಸಿದ್ದು ನಾನೇ ಎಂದು ಮಾಜಿ ಸಚಿವ ಜಮೀರ್ ಅಹಮದ್ ಹೇಳಿದ್ದಾರೆ.
ನಗರ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜಮೀರ್ ಅವರು, ನನ್ನ ಕ್ಷೇತ್ರದ ಕೆಲಸ ಸಂಬಂಧ ಆಯುಕ್ತರನ್ನು ಭೇಟಿ ಮಾಡಿದ್ದೇನೆ. ಕುಮಾರಸ್ವಾಮಿ ಅವರು ಸಿಎಂ ಆಗಿದ್ದ ಸಂದರ್ಭದಲ್ಲೇ ನಾನು ಐಎಂಎ ಪ್ರಕರಣವನ್ನು ಸಿಬಿಐಗೆ ನೀಡಲು ಒತ್ತಾಯ ಮಾಡಿದ್ದೆ. ಬಿಜೆಪಿಯವರು ಅಧಿಕಾರಕ್ಕೆ ಬಂದ ಮೇಲೆ ಸಿಬಿಐಗೆ ನೀಡಿದ್ದಾರೆ, ಇದಕ್ಕೆ ನನ್ನ ಸ್ವಾಗತವಿದೆ ಎಂದರು.
ಇದೇ ವೇಳೆ ಐಎಂಎ ಪ್ರಕರಣ ಸಂಬಂಧ ತಮಗೆ ಏನಾದರೂ ಬೆದರಿಕೆ ಬರುತ್ತಿದೆಯಾ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನನಗೆ ಯಾವುದೇ ಬೆದರಿಕೆ ಬಂದಿಲ್ಲ. ಯಾರು ಭಯ ಪಡುತ್ತಾರೆ ಅವರಿಗೆ ಮಾತ್ರ ಬೆದರಿಕೆಗಳು ಬರುತ್ತದೆ. ನಾನು ಯಾರಿಗೂ ಭಯ ಪಡುವುದಿಲ್ಲ ಎಂದರು. ಅಲ್ಲದೇ ನನಗೆ ಐಎಂಎ ವಂಚನೆ ಪ್ರಕರಣಲ್ಲಿ ಇದುವರೆಗೂ ಸಿಬಿಐನಿಂದ ಯಾವುದೇ ಸಮನ್ಸ್ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಸಚಿವ ಕೆಎಸ್ ಈಶ್ವರಪ್ಪ ಮುಸ್ಲಿಮರ ಬಗ್ಗೆ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ ಜಮೀರ್, ಈಶ್ವರಪ್ಪ ಅವರ ಹೇಳಿಕೆಗೆ ಅಷ್ಟು ಮಹತ್ವ ನೀಡುವ ಅಗತ್ಯವಿಲ್ಲ. ಈಶ್ವರಪ್ಪ ಅವರದ್ದು ಎಲುಬಿಲ್ಲದ ನಾಲಿಗೆ, ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ಈಗಾಗಲೇ ಸಿದ್ದರಾಮಯ್ಯ ಅವರು ಹಲವರು ಬಾರಿ ಹೇಳಿದ್ದಾರೆ. ಚುನಾವಣೆ ಸಮಯದಲ್ಲಿ ಕಳ್ಳರ ರೀತಿ ನಡುರಾತ್ರಿ ಹೋಗಿ ಮುಸ್ಲಿಮರ ಮನೆಯಲ್ಲಿ ಮತಯಾಚನೆ ಮಾಡಿದ್ದಾರೆ. ಈ ಸಂಬಂಧ ನನ್ನ ಬಳಿ ವಿಡಿಯೋಗಳು ಕೂಡ ಇದ್ದು, ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಬಿಜೆಪಿಯವರಿಗೆ ಹಿಂದೂ, ಮುಸ್ಲಿಂ ಜನರು ಬೇಕಿಲ್ಲ. ಅವರಿಗೆ ಬೇಕಿರುವುದು ಕೇವಲ ಅಧಿಕಾರ ಅಷ್ಟೇ ಎಂದು ಆರೋಪಿಸಿದರು.