ನವದೆಹಲಿ: ಮುಂಬರುವ 2019 ರ ಐಸಿಸಿ ವಿಶ್ವಕಪ್ ಬಳಿಕ ತಮ್ಮ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸುವ ಕುರಿತು ನಿರ್ಧಾರ ಕೈಗೊಳ್ಳುವುದಾಗಿ 2011 ವಿಶ್ವ ಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಆಲ್ ರೌಂಡರ್ ಯುವರಾಜ್ ಸಿಂಗ್ ಹೇಳಿದ್ದಾರೆ.
ಖಾಸಗಿ ಮಾಧ್ಯಮವೊಂದಕ್ಕೆ ಈ ಕುರಿತು ಪ್ರತಿಕ್ರಿಯಿಸಿದ 36 ವರ್ಷದ ಯುವರಾಜ್ ಸಿಂಗ್, ಸದ್ಯ 2019 ವಿಶ್ವಕಪ್ ವೇಳೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವ ಕಡೆ ಗಮನ ಹರಿಸಿದ್ದು, ಬಳಿಕ ನಿವೃತ್ತಿಯ ಕುರಿತು ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
Advertisement
Advertisement
ಕಳೆದ ಎರಡು ದಶಕಗಳಿಂದ ತಾನು ಭಾರತದ ತಂಡದ ಪರ ಆಡುತ್ತಿದ್ದೇನೆ. ಆದರೆ ಮುಂದೊಂದು ದಿನ ನನ್ನ ನಿವೃತ್ತಿಯ ಜೀವನ ಎದುರಾಗುತ್ತದೆ ಎಂದರು. 2011 ರ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಪರ ಯುವರಾಜ್ ಸಿಂಗ್ ಭರ್ಜರಿ ಪ್ರದರ್ಶನ ನೀಡಿದ್ದರು. ಈ ಟೂರ್ನಿಯಲ್ಲಿ 90.50 ಸರಾಸರಿಯಲ್ಲಿ 362 ರನ್ ಹಾಗೂ 15 ವಿಕೆಟ್ ಪಡೆದು ಮ್ಯಾನ್ ಆಫ್ ದಿ ಸೀರಿಸ್ ಪ್ರಶಸ್ತಿಯನ್ನು ಪಡೆದಿದ್ದರು. ಅಲ್ಲದೇ ಕಳೆದ ವರ್ಷ ಇಂಗ್ಲೆಂಡ್ ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸಿದ್ದ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದರು.
Advertisement
ಸದ್ಯ ನಡೆಯುತ್ತಿರುವ 2018 ರ ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಕುರಿತು ಮಾತನಾಡಿ ಯುವರಾಜ್ ಸಿಂಗ್ ನಮ್ಮ ತಂಡವು ಗೇಲ್, ಕೆಎಲ್ ರಾಹುಲ್ ಸೇರಿದಂತೆ ಹಲವು ಉತ್ತಮ ಆಟಗಾರರೊಂದಿಗೆ ಬಲಿಷ್ಠವಾಗಿದ್ದು, ಫೈನಲ್ ತಲುಪುವ ವಿಶ್ವಾಸವಿದೆ. ಚೆನ್ನೈ ಹಾಗೂ ಕೊಲ್ಕತ್ತಾ ತಂಡಗಳು ಉತ್ತಮ ಪ್ರದರ್ಶನ ನೀಡುತ್ತಿದ್ದು, ಹೆಚ್ಚು ಪೈಪೋಟಿ ನೀಡುತ್ತಿದೆ ಎಂದು ಹೇಳಿದರು.
Advertisement
2000 ರಲ್ಲಿ ಕೀನ್ಯಾ ವಿರುದ್ಧ ಏಕದಿನ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಯುವಿ ಇದುವರೆಗೂ 304 ಏಕದಿನ ಪಂದ್ಯಗಳಲ್ಲಿ 8,701 ರನ್ ಸಿಡಿಸಿದ್ದಾರೆ. 2017 ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಕೊನೆ ಬಾರಿಗೆ ಏಕದಿನ ಪಂದ್ಯವನ್ನಾಡಿದ್ದಾರೆ. 2003 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದು, 40 ಪಂದ್ಯಗಳಲ್ಲಿ 1,900 ರನ್ ಗಳಿಸಿದ್ದಾರೆ. 2007 ರಲ್ಲಿ ಮೊದಲ ಟಿ20 ಕ್ರಿಕೆಟ್ ಪಂದ್ಯವನ್ನು ಸ್ಕಾಟ್ ಲ್ಯಾಂಡ್ ವಿರುದ್ಧ ಆಡಿದ್ದು, ಇದುವರೆಗೂ 58 ಪಂದ್ಯಗಳಿಂದ 1,177 ರನ್ ಸಿಡಿಸಿದ್ದಾರೆ. ಉಳಿದಂತೆ ಲೆಗ್ ಸ್ಪಿನ್ ಬೌಲರ್ ಆಗಿ ಟೆಸ್ಟ್, ಏಕದಿನ, ಟಿ20 ಮಾದರಿಯಲ್ಲಿ ಕ್ರಮವಾಗಿ 9, 111, 28 ವಿಕೆಟ್ ಪಡೆದಿದ್ದಾರೆ.
ಕ್ರಿಕೆಟ್ ವೃತ್ತಿ ಜೀವನದ ಆರಂಭ 6, 7 ವರ್ಷಗಳ ಕಾಲ ಉತ್ತಮವಾಗಿ ಆಡಿದ್ದೇನೆ. ನಂತರ ಅವಧಿಯಲ್ಲಿ ಯುವ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದರಿಂದ ನನಗೆ ಅವಕಾಶಗಳು ಕಡಿಮೆಯಾದವು. ಅದೇ ಸಂದರ್ಭದಲ್ಲಿ ಕ್ಯಾನ್ಸರ್ ನನ್ನನ್ನು ಕಾಡಿತು. ಆದರೆ ಕ್ಯಾನ್ಸರ್ ನಿಂದ ಗುಣಮುಖನಾದೆ. ಬಳಿಕ ತಂಡದಲ್ಲಿ ನನಗೆ ನಿರಂತರವಾಗಿ ಅವಕಾಶ ಸಿಗಲಿಲ್ಲ. ಕೆಲವು ಪಂದ್ಯಗಳಲ್ಲಿ ಮಾತ್ರ ಆಡಲು ಸಾಧ್ಯವಾಯಿತು ಎಂದು ಈ ಹಿಂದೆ ಯುವಿ ತಿಳಿಸಿದ್ದರು.
2011ರ ವಿಶ್ವಕಪ್ ವರೆಗೂ ಟೀಂ ಇಂಡಿಯಾ ತಂಡದಲ್ಲಿ ನಿರಂತರವಾಗಿ ಆಡಿದ್ದ ಯುವಿ ಆನಂತರ ಕ್ಯಾನ್ಸರ್ ನಿಂದ ಬಳಲಿದ್ದರು. ಆದರೆ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸಿ ಗೆದ್ದು ಬಂದ ಅವರು ಬಳಿಕ ಫಾರ್ಮ್ ಸಮಸ್ಯೆಯಿಂದ ಬಳಲಿದ್ದರು.