ಫ್ಲಿಂಟಾಫ್ ಕಿರಿಕ್‍ಗೆ ಚಿಮ್ಮಿತು 6 ಸಿಕ್ಸ್ – ಸಿಕ್ಸರ್ ಸುರಿಮಳೆಗೈದ ಯುವಿ

Public TV
2 Min Read
yuvaraj flintoff

ಬೆಂಗಳೂರು: ಟಿ 20 ಕ್ರಿಕೆಟ್‍ನಲ್ಲಿ 6 ಎಸೆತಗಳಿಗೆ 6 ಸಿಕ್ಸರ್ ಸಿಡಿಸಿ ವಿಶ್ವದಾಖಲೆಗೈದ ಯುವರಾಜ್ ಸಿಂಗ್ ಇಂದು ಎಲ್ಲ ಮಾದರಿಯ ಕ್ರಿಕೆಟಿನಿಂದ ನಿವೃತ್ತರಾಗಿದ್ದಾರೆ.

ಯುವಿ ಆಲ್‍ರೌಂಡರ್ ಬ್ಯಾಟ್ಸ್ ಮನ್ ಎನ್ನುವುದು ಮೊದಲೇ ದೃಢಪಟ್ಟಿತ್ತು. ಆದರೆ ಅವರನ್ನು ಕೆರಳಿಸಿದರೆ ಆಗುವ ಫಲಿತಾಂಶ ಏನು ಎನ್ನುವುದು ಗೊತ್ತಾಗಿದ್ದು 2007ರಲ್ಲಿ ನಡೆದ ಮೊದಲ ಟಿ20 ವಿಶ್ವಕಪ್ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ.

ಫ್ಲಿಂಟಾಫ್ ಎಸೆದ 18ನೇ ಓವರಿನಲ್ಲಿ ಯುವಿ 4 ಮತ್ತು 5ನೇ ಎಸೆತದಲ್ಲಿ ಬೌಂಡರಿ ಹೊಡೆದಿದ್ದರು. ಈ ಓವರ್ ಕೊನೆಯ ಎಸೆತದಲ್ಲಿ ಒಂದು ರನ್ ಓಡಿದ್ದರು. ಈ ಸಂದರ್ಭದಲ್ಲಿ ಫ್ಲಿಂಟಾಫ್ ಯುವರಾಜ್ ಬಳಿ ಬಂದು ಕೆಟ್ಟ ಪದಗಳಿಂದ ನಿಂದಿಸಿದ್ದಾರೆ. ಇದಕ್ಕೆ ಯುವರಾಜ್ ಸಿಟ್ಟಾಗಿ ಅಲ್ಲೇ ಆಕ್ರೋಶ ಹೊರಹಾಕಿದರು. ಈ ವೇಳೆ ಅಂಪೈರ್ ಮಧ್ಯಪ್ರವೇಶಿಸಿ ಇಬ್ಬರನ್ನು ಸಮಾಧಾನ ಮಾಡಿದ್ದಾರೆ.

https://www.youtube.com/watch?v=alwKupWlO8g

19ನೇ ಓವರ್ ಎಸೆಯಲು ಬಂದಿದ್ದು ಸ್ಟುವರ್ಟ್ ಬ್ರಾಡ್. ಮೊದಲೇ ಸಿಟ್ಟಿನಲ್ಲಿದ್ದ ಯುವಿ ಮೊದಲ ಎಸೆತವನ್ನು ಸಿಕ್ಸರ್‍ಗೆ ಅಟ್ಟಿದರು. ನಂತರ ಸತತ ಎರಡು ಎಸೆತವನ್ನು ಸಿಕ್ಸರ್‍ಗೆ ಅಟ್ಟಿ ಹ್ಯಾಟ್ರಿಕ್ ಸಾಧನೆ ಮಾಡಿದರು. 4ನೇ ಎಸೆತ ಆಫ್ ಸೈಡ್ ಫುಲ್ ಟಾಸ್ ಬಂದರೂ ಯುವಿ ಅದನ್ನು ಸಿಕ್ಸ್ ಆಗಿ ಪರಿವರ್ತಿಸಿದರು. 5ನೇ ಎಸೆತಕ್ಕೂ ಮುನ್ನ ಬ್ರಾಡ್ ಮತ್ತು ನಾಯಕ ಕಾಲಿಂಗ್‍ವುಡ್ ಚರ್ಚೆ ನಡೆಸಿದರು. ಆದರೆ ಈ ಚರ್ಚೆ ಯಾವುದೇ ಫಲಕಾರಿಯಾಗಲಿಲ್ಲ. 5ನೇ ಎಸೆತವೂ ಸಿಕ್ಸ್‍ಗೆ ಹೋಯಿತು. 5ನೇ ಎಸೆತ ಸ್ಟೇಡಿಯಂ ಹೋಗುತ್ತಿದ್ದಂತೆ ಇಂಗ್ಲೆಂಡ್ ಆಟಗಾರರು ಮುಖದ ಮೇಲೆ ಬೆರಳನ್ನು ಇಟ್ಟರು. ಕೊನೆಗೆ 6ನೇ ಎಸೆತದಲ್ಲೂ ಯುವರಾಜ್ ಸಿಕ್ಸರ್ ಹೊಡೆಯುವ ಮೂಲಕ ಟಿ20 ಕ್ರಿಕೆಟ್‍ನಲ್ಲಿ ವಿಶ್ವದಾಖಲೆ ಬರೆದರು.

yuvraj singh

ಈ ಓವರಿಗೂ ಮುನ್ನ ಯುವರಾಜ್ 6 ಎಸೆತದಲ್ಲಿ 2 ಬೌಂಡರಿ ನೆರವಿನಿಂದ 14 ರನ್ ಗಳಿಸಿದ್ದರೆ, 19 ಓವರ್ ಮುಕ್ತಾಯಕ್ಕೆ ಯುವರಾಜ್ 12 ಎಸೆತದಲ್ಲಿ 50 ರನ್ ಚಚ್ಚಿ ಟಿ 20 ಕ್ರಿಕೆಟ್‍ನಲ್ಲಿ ವೇಗದ ಅರ್ಧಶತಕ ಸಿಡಿಸಿದರು. 18 ಓವರ್ ವೇಳೆ 3 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿದ್ದ ಭಾರತದ ಸ್ಕೋರ್ 19 ಓವರ್ ಮುಕ್ತಾಯಕ್ಕೆ 207 ರನ್ ಗಳಿಸಿತ್ತು. ಫ್ಲಿಂಟಾಫ್ ಎಸೆದ ಕೊನೆಯ ಓವರ್‍ನಲ್ಲೂ ಯುವರಾಜ್ ಸಿಕ್ಸ್ ಸಿಡಿಸಿ 58 ರನ್(16 ಎಸೆತ, 3 ಬೌಂಡರಿ, 7 ಸಿಕ್ಸರ್, 362.50 ಸ್ಟ್ರೈಕ್ ರೇಟ್) ಗಳಿಸಿ ಔಟಾದರು. ಅಂತಿಮವಾಗಿ ಭಾರತ 4 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿತು. ಇಂಗ್ಲೆಂಡ್ 6 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತ್ತು.

ಫ್ಲಿಂಟಾಫ್ ಜೊತೆ ಜಗಳ ಯಾಕಾಯ್ತು ಎನ್ನುವುದನ್ನು ಯುವರಾಜ್ ಸಿಂಗ್ 2016 ರಲ್ಲಿ ಬಹಿರಂಗ ಪಡಿಸಿದ್ದರು. 18ನೇ ಓವರ್ ಬಳಿಕ ನನ್ನ ಬಳಿ ಬಂದ ಫ್ಲಿಂಟಾಫ್, F ***ing ರೆಡಿಕ್ಯೂಲಸ್ ಶಾಟ್ ಎಂದು ಹೇಳಿದರು. ಅದಕ್ಕೆ ನಾನು F*** ಯೂ ಎಂದೆ. ನನ್ನ ಉತ್ತರಕ್ಕೆ ಫ್ಲಿಂಟಾಫ್ ಏನು ಹೇಳಿದ್ದು ಎಂದು ಪ್ರಶ್ನಿಸಿದರು. ಇದಕ್ಕೆ, ನಾನು ಏನು ಹೇಳಿದ್ದು ಏನು ಅನ್ನೋದು ಗೊತ್ತಾಯ್ತು ಅಲ್ಲವೇ ಎಂದು ಹೇಳಿದೆ. ಹೀಗೆ ಹೇಳಿದ್ದಕ್ಕೆ ಫ್ಲಿಂಟಾಫ್ ನಾನು ನಿನ್ನ ಗಂಟಲು ಕತ್ತರಿಸುತ್ತೇನೆ ಎಂದು ತಿರುಗೇಟು ನೀಡಿದರು. ಈ ಮಾತು ನನಗೆ ಸಿಟ್ಟು ತರಿಸಿತ್ತು. ಕೂಡಲೇ ನಾನು, ಈ ಬ್ಯಾಟ್ ನನ್ನ ಕೈಯಲ್ಲಿದೆ. ಈ ಬ್ಯಾಟ್ ಮೂಲಕವೇ ಹೊಡೆಯುತ್ತೇನೆ ಎಂದು ಖಾರವಾಗಿ ಪ್ರತಿಕ್ರಿಯಿಸಿದೆ ಎಂದು ಹಳೆಯ ಘಟನೆಯನ್ನು ರಿವೀಲ್ ಮಾಡಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *