ಮುಂಬೈ: ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಟೀಂ ಇಂಡಿಯಾ ತಂಡ ಉತ್ತಮ ಪ್ರದರ್ಶನ ನೀಡಿದರೂ, ತಂಡದಲ್ಲಿ 4ನೇ ಬ್ಯಾಟಿಂಗ್ ಕ್ರಮಾಂಕಕ್ಕೆ ಯಾವ ಆಟಗಾರ ಸೂಕ್ತ ಎಂಬ ಪ್ರಶ್ನೆಗೆ ಇದುವರೆಗೂ ಉತ್ತರ ಸಿಕ್ಕಿಲ್ಲ.
ಸಿಮೀತ ಓವರ್ ಗಳ ಕ್ರಿಕೆಟ್ ಟೂರ್ನಿಯಲ್ಲಿ ತಂಡದ 4ನೇ ಕ್ರಮಾಂಕದಲ್ಲಿ ಯಾವ ಆಟಗಾರ ಸ್ಥಾನ ಪಡೆಯುತ್ತಾರೆ ಎಂಬ ಚರ್ಚೆ ಮುಂದುವರಿದಿದೆ. ಇದರ ನಡುವೆಯೇ ಹಲವು ಆಟಗಾರರನ್ನು ಈ ಸ್ಥಾನಕ್ಕೆ ಪ್ರಯೋಗ ಮಾಡಲಾಗಿತ್ತು. ಆದರೆ ಇದರಲ್ಲಿ ಆಟಗಾರರು ಸ್ಥಿರ ಪ್ರದರ್ಶನ ನೀಡಲು ವಿಫಲರಾಗಿದ್ದರು. ತಂಡದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅವರು ಕೂಡ ಈ ಸ್ಥಾನಕ್ಕೆ ಸೂಕ್ತ ಆಟಗಾರರನ್ನು ತರುವಲ್ಲಿ ವಿಫಲರಾದರು ಎಂದೇ ಹೇಳಬಹುದು. ಆದರೆ ಸದ್ಯ ನೂತನ ಬ್ಯಾಟಿಂಗ್ ಕೋಚ್ ಆಗಿರುವ ವಿಕ್ರಮ್ ರಾಥೋಡ್ ಅವರು ಸ್ಥಾನಕ್ಕೆ ಸೂಕ್ತ ಆಟಗಾರರನ್ನು ತುಂಬಲು ಸಕ್ಸಸ್ ಆಗುತ್ತಾರಾ ಎಂಬ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿದೆ.
ಇದರ ನಡುವೆಯೇ ಟೀಂ ಇಂಡಿಯಾ ಮಾಜಿ ಆಟಗಾರ ಹರ್ಭಜನ್ ಸಿಂಗ್ 4ನೇ ಸ್ಥಾನಕ್ಕೆ ಯುವ ಆಟಗಾರ ಸಂಜು ಸ್ಯಾಮ್ಸನ್ ರನ್ನು ಆಯ್ಕೆ ಮಾಡಿ ಪ್ರಯೋಗ ನಡೆಸಿದರೆ ಉತ್ತಮ ಫಲಿತಾಂಶ ಲಭಿಸುತ್ತದೆ ಎಂದು ಬಿಸಿಸಿಐ ಸಲಹೆ ನೀಡಿ ಟ್ವೀಟ್ ಮಾಡಿದ್ದರು. ಈ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿದ ಮಾಜಿ ಆಟಗಾರ ಯುವರಾಜ್ ಸಿಂಗ್, ನಮ್ಮ ತಂಡದ ಟಾಪ್ ಆರ್ಡರ್ ಸೂಪರಾಗಿದ್ದು, 4ನೇ ಸ್ಥಾನದ ಅಗತ್ಯವೇ ಇಲ್ಲವೆಂದು’ ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದ್ದರು. ಯುವಿರ ಈ ಟ್ವೀಟ್‍ಗೆ ಅಭಿಮಾನಿಗಳು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡಿ ಟ್ವೀಟ್ ಮಾಡುತ್ತಿದ್ದಾರೆ.
Top order is very strong bro they don’t need no 4 batsman ????
— yuvraj singh (@YUVSTRONG12) September 6, 2019